ದೊಡ್ಡ ಮಟ್ಟಿನ ಅಸಹಕಾರ ಚಳವಳಿ ಬೇಕಾಗಿದೆ

Update: 2019-12-13 18:20 GMT

ಮಾನ್ಯರೇ,

ನಿಮ್ಮ ಜೇಬಿಗೆ 15 ಲಕ್ಷ ಹಾಕುತ್ತೇವೆ, ಭ್ರಷ್ಟಾಚಾರವನ್ನು ನಿರ್ಮೂಲನ ಗೊಳಿಸುತ್ತೇವೆ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಾಡುತ್ತೇವೆ, ಒಂದು ರೂಪಾಯಿಗೆ ಒಂದು ಡಾಲರ್ ಕೊಡಿಸುತ್ತೇವೆ ಎಂಬಿತ್ಯಾದಿ ಗಗನ ಕುಸುಮಗಳನ್ನು ತೋರಿಸಿದವರ ಕೈಕರಣಗಳಿಂದ ಕೂಡಿದ ಅತ್ಯದ್ಭುತ ಭಾಷಣಗಳಿಗೆ ಮರುಳಾಗಿ ಅವರಿಗೆ ವೋಟು ಹಾಕಿದ ಜನ ಇಂದು ಗಗನಕ್ಕೇರುತ್ತಿರುವ ಬೆಲೆಗಳು, ಪಾತಾಳಕ್ಕಿಳಿಯುತ್ತಿರುವ ಆದಾಯ, ನಿರುದ್ಯೋಗ ಮುಂತಾದ ಹತ್ತುಹಲವು ಗಂಭೀರ ಸಮಸ್ಯೆಗಳಿಂದ ಕಂಗೆಟ್ಟು ಕೈ ಕೈ ಹಿಸುಕುವಂತಾಗಿದೆ. ನಮ್ಮಲ್ಲಿ ಸಿನೆಮಾ ಹೀರೋಗಳನ್ನು, ಗತಕಾಲದ ರಾಜಮಹಾರಾಜರನ್ನು ಅತಿಯಾಗಿ ವೈಭವೀಕರಿಸಿ ಆರಾಧಿಸುವ ಸಂಸ್ಕೃತಿ ಇನ್ನೂ ಇರುವಾಗ ಹೀಗೆ ಮೋಸ ಹೋಗುವುದಕ್ಕೆ ಯಾರೇನು ಮಾಡಲು ಸಾಧ್ಯ? ಜನ ತಾವಾಗಿಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದಿರಲಿ, ಈಗ ಒಮ್ಮೆ ಅಧಿಕಾರವನ್ನು ತಮ್ಮದಾಗಿಸಿಕೊಂಡವರು ಅದನ್ನು ಸುಲಭದಲ್ಲಿ ಬಿಟ್ಟುಕೊಡಲಾರರು.

ಮುಂದಿನ ಚುನಾವಣೆಗಳ ವೇಳೆ ಹೊಸ ಹೊಸ ಆಮಿಷಗಳೊಂದಿಗೆ; ಸರ್ಜಿಕಲ್ ಸ್ಟ್ರೈಕ್, ಫುಲ್ವಾಮಗಳಂಥ ಹೊಸ ಹೊಸ ಗಿಮಿಕ್‌ಗಳೊಂದಿಗೆ ಮತ್ತೆ ಜನರ ಕಣ್ಣಿಗೆ ಮಂಕುಬೂದಿ ಎರಚಲು ಬರುತ್ತಾರೆ ಅಥವಾ ಸರ್ವಾಧಿಕಾರ ಚಲಾಯಿಸಿ ಚುನಾವಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಲೂಬಹುದು. ಏಕೆಂದರೆ ನಾಝಿಗಳ ಹಾಗೆ ತಮ್ಮ ಸಿದ್ಧಾಂತದ ಮೂಲ ಅಜೆಂಡಾವನ್ನು ಕಾರ್ಯಗತಗೊಳಿಸುವ ತಹತಹಿಕೆ ಇಂಥವರ ಕೈಯಲ್ಲಿ ಏನನ್ನೂ ಮಾಡಿಸಬಲ್ಲುದು. ಆಗ ಜನಸಾಮಾನ್ಯರು ಇದನ್ನೆಲ್ಲ ಅಸಹಾಯಕರಾಗಿ ನೋಡುತ್ತಾ, ಸಕಲ ಸಂಕಷ್ಟಗಳನ್ನು ಅನುಭವಿಸುತ್ತಾ, ಕಾಲಿಗೆ ಬೇಡಿಹಾಕಿರುವಂತೆ ಬಾಯ್ಮುಚ್ಚಿಕೊಂಡು ಬಿದ್ದಿರುವ ಸನ್ನಿವೇಶ ನಿರ್ಮಾಣವಾಗಲಿದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿರುವ ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣತಂತ್ರವನ್ನು ಗಟ್ಟಿಗೊಳಿಸಲು ವಿಫಲಗೊಂಡಿರುವ ಫಲವಾಗಿ ನೈತಿಕಶಕ್ತಿಯನ್ನು ಕಳೆದುಕೊಂಡು ಸಂಪೂರ್ಣ ಬಲಹೀನವಾಗಿರುವ ವಿರೋಧ ಪಕ್ಷಗಳು ಇಂದು ಜನರನ್ನು ಈ ದುರಾಡಳಿತದ ವಿರುದ್ಧ ಒಗ್ಗೂಡಿಸುವ ಸ್ಥಿತಿಯಲ್ಲಿ ಇವೆಯೇ? ಹೀಗಿರುವಾಗ ಜನರ ಮುಂದಿರುವ ಏಕೈಕ ಅಹಿಂಸಾತ್ಮಕ ಮಾರ್ಗವೆಂದರೆ ಗಾಂಧೀಜಿ ಕಲಿಸಿಕೊಟ್ಟಿರುವ ಅಸಹಕಾರ ಚಳವಳಿ.

ಗಾಂಧೀಜಿ ಅಂದಿನ ದುಷ್ಟ, ವಸಾಹತುಶಾಹಿ ಬ್ರಿಟಿಷ್ ದಬ್ಬಾಳಿಕೆಗೆ ಸವಾಲೆಸೆದು ಅದರ ಕಠೋರ ಕಾಯ್ದೆಗಳ ವಿರುದ್ಧ ಅಹಿಂಸಾತ್ಮಕ ಚಳವಳಿ ನಡೆಸಿದ ರೀತಿಯಲ್ಲೇ ಈ ಹೊತ್ತಿನ, ಬ್ರಿಟಿಷರಿಗಿಂತ ಹಲವು ಪಟ್ಟು ದುಷ್ಟ, ಫ್ಯಾಶಿಸ್ಟ್ ಸರಕಾರದ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ), ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಮತ್ತು ಭವಿಷ್ಯದಲ್ಲಿ ಬರಬಹುದಾದ ಇನ್ನಷ್ಟು ಸಂವಿಧಾನವಿರೋಧಿ ಕಾನೂನುಗಳ ವಿರುದ್ಧ ದೇಶವ್ಯಾಪಿ ಅಸಹಕಾರ ಆಂದೋಲನ ನಡೆಸಬೇಕಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಅಸಹಕಾರ ತೋರಿಸಿದಾಗ ಸರಕಾರ ಇಡೀ ದೇಶವನ್ನೇ ಸೆರೆಮನೆಯಾಗಿಸುವ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲಿದೆ. ಅಂತಹ ಸಂದರ್ಭದಲ್ಲಿ ಹೋರಾಟಗಾರರಿಗೆ ವಿಶ್ವಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಮುದಾಯಗಳ ಬೆಂಬಲವೂ ದೊರೆಯುವುದರಲ್ಲಿ ಅನುಮಾನವಿಲ್ಲ. ಆದುದರಿಂದ ನಮ್ಮ ವೈವಿಧ್ಯಮಯ ಭಾರತವನ್ನೂ ಅದರ ಸಾಂವಿಧಾನಿಕ ಮೌಲ್ಯಗಳನ್ನೂ ಕಾಪಾಡಿಕೊಳ್ಳುವುದಕ್ಕಾಗಿ ದೊಡ್ಡ ಮಟ್ಟಿನ ಅಸಹಕಾರ ಚಳವಳಿಯೊಂದನ್ನು ಕೈಗೊಳ್ಳುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ. 

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News