ಸರಕಾರಿ ನೌಕರರ ನಗುಮುಖದ ಸೇವೆ

Update: 2019-12-18 18:26 GMT

ಮಾನ್ಯರೇ,

ಮಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಕಚೇರಿಯ ಒಂದು ಕೌಂಟರ್‌ನಲ್ಲಿ ‘ರವಿವಾರ ಮತ್ತು ರಜಾದಿನಗಳಲ್ಲಿ ಕೂಡ ಇಲ್ಲಿ ಆಧಾರ್ ಸೇವೆ ಲಭ್ಯವಿದೆ’ ಎಂದು ಒಂದು ನಾಮ ಫಲಕವನ್ನು ತೂಗುಹಾಕಲಾಗಿತ್ತು. ಆ ಸಂದರ್ಭದಲ್ಲಿ ನನ್ನ ಪತ್ನಿಯ ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡುವ ವಿಚಾರ ವಾಗಿ ಕೇಳಿ ತಿಳಿದುಕೊಂಡೆ. ದಾಖಲೆ ಏನೆಲ್ಲ ಬೇಕೆಂದು ವಿಚಾರಿಸಿದಾಗ ಬಹಳ ಗೌರವದಿಂದ ಮತ್ತು ಆತ್ಮೀಯತೆ ಯಿಂದ ಮಾಹಿತಿ ನೀಡಿದರು. ಮುಂದಿನ ರವಿವಾರ ನಾವು ಬೆಳಗ್ಗೆ 6:30ಕ್ಕೆ ಹೊರಟು 7:30ಕ್ಕೆ ಮಂಗಳೂರು ತಲುಪಿದೆವು. ಅಂಚೆ ಕಚೇರಿ ತಲುಪಿದಾಗ ತೆರಿದಿರಲಿಲ್ಲ. ಬೇರೆಯವರಲ್ಲಿ ವಿಚಾರಿಸಿದಾಗ ರವಿವಾರ ಮತ್ತು ರಜಾ ದಿನಗಳಲ್ಲಿ ಬೆಳಗ್ಗೆ 10ಗಂಟೆಯಿಂದ ಬಾಕಿ ದಿನಗಳಲ್ಲಿ ಮಾತ್ರ ಬೆಳಗ್ಗೆ 8ರಿಂದ ಎಂದು ತಿಳಿಯಿತು.

ನಾವು ಮಗಳ ಮನೆಗೆ ಹೋಗಿ ಸುಮಾರು 9:45ಕ್ಕೆ ಮತ್ತೆ ಬಂದು ಸೇರಿದೆವು. ಆಗ 4 ಮಂದಿ ಬೇರೆಯವರೂ ಬಂದು ಸೇರಿದ್ದರು. 10ಗಂಟೆಗೆ ಸರಿಯಾಗಿ ಸಿಬ್ಬಂದಿ ಬಂದು ಕಚೇರಿ ತೆರೆದಾಗ ಎಲ್ಲರೂ ಟೋಕನ್‌ಗಾಗಿ ಒಟ್ಟುಗೂಡಿದೆವು. ಆಗ ನಾನು ಅಲ್ಲಿನ ಅಧಿಕಾರಿಯೊಬ್ಬರಲ್ಲಿ ನಾವು ಬೆಳಗ್ಗೆ 7:30ಕ್ಕೆ ಬಂದ ವಿಚಾರವನ್ನು ತಿಳಿಸಿದೆವು. ರವಿವಾರ ಮತ್ತು ರಜಾ ದಿನಗಳಲ್ಲಿ ಸಮಯ ಬೇರೆ ಎಂದು ನಾಮಫಲಕದಲ್ಲಿ ನಮೂದಿಸಿಲ್ಲ ಎಂದು ಹೇಳಿದಾಗ ತಕ್ಷಣ ಮಾರ್ಕರ್ ತಂದು ನಾಮಫಲಕದಲ್ಲಿ ಬರೆದರು ಮತ್ತು ನಮಗೆ ಮೊದಲ ಕೂಪನ್ ನೀಡಿದರು. ಕೌಂಟರ್‌ನಲ್ಲಿ ಓರ್ವ ಮಹಿಳಾ ಮತ್ತು ಪುರುಷ ಸಿಬ್ಬಂದಿಯಿದ್ದರು. ಅವರ ಸೇವೆಯನ್ನು ನೋಡಿದಾಗ ನಮಗೆ ಆಶ್ಚರ್ಯವಾಯಿತು. ಸರಕಾರಿ ಕಚೇರಿಯಲ್ಲಿ ಇಂತಹ ಸೇವೆಯನ್ನು ನಾನು ಗಮನಿಸಿದ್ದು ಬಹಳ ವಿರಳ. ಅತ್ಯುತ್ತಮ ಸೇವೆ. ಇವರನ್ನು ಪ್ರಶಂಸಿಸಲೇಬೇಕು.

ರವಿವಾರ ದಿನವಾದರೂ ನಗುಮುಖದ ಗೌರವಪೂರ್ಣ ಸಂಭಾಷಣೆ ಅವರದಾಗಿತ್ತು. ನಾವು ಅಲ್ಲಿಂದ ಹೊರಟು ಬರುವ ವರೆಗೆ ಅವರ ಅತಿಥಿಗಳಾಗಿದ್ದೆವು. ಎಲ್ಲ ಬ್ಯಾಂಕ್ ಮತ್ತು ಸರಕಾರಿ ಕಚೇರಿಗಳಲ್ಲಿ ಇಂತಹ ಸೇವೆ ನೀಡಿದರೆ ಖಂಡಿತವಾಗಿಯೂ, ಜನರ ಮೆಚ್ಚುಗೆ ಗಳಿಸಬಹುದು. ನಮ್ಮ ಕೆಲಸ ಮುಗಿಸಿ ಹೊರಡುವಾಗ 50ರೂ. ಶುಲ್ಕ ಕೇಳಿದರು. ನಾನು 100 ರೂ. ಕೊಟ್ಟು ಚಿಲ್ಲರೆ ಬೇಡ ಎಂದೆ. ಅದಕ್ಕೆ ಅವರು ನಾವು 1ರೂ. ಕೂಡ ಹೆಚ್ಚು ತೆಗೆಯುವುದಿಲ್ಲ ಎಂದು ಹೇಳಿ 50 ರೂ. ವಾಪಸ್ ಕೊಟ್ಟರು. ನಾವು ಹೊರಡುವಾಗ ಅವರ ಸೇವೆಯನ್ನು ನೆನೆದು ಮನದಾಳದಲ್ಲಿ ಅವರಿಗಾಗಿ ದೇವನಲ್ಲಿ ಪ್ರಾರ್ಥಿಸಿದೆವು. ಸರಕಾರಿ ಕೆಲಸ ಅಂದರೆ ದೇವರ ಕೆಲಸ ಎಂದು ನನಗೆ ನೆನೆಪಾಯಿತು.  ಡಿ.ಕೆ. ಇಬ್ರಾಹೀಂ, ಕಲ್ಲಡ್ಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News