×
Ad

ಪೊಲೀಸರ ವಶದಿಂದ ಪರಾರಿಯಾದ ಭೀಮ್ ಆರ್ಮಿ ಮುಖ್ಯಸ್ಥ ಆಝಾದ್

Update: 2019-12-20 20:13 IST

ಹೊಸದಿಲ್ಲಿ,ಡಿ.20: ದಿಲ್ಲಿಯ ಜಾಮಾ ಮಸೀದಿ ಬಳಿ ಶುಕ್ರವಾರ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಬಳಿಕ ಪೊಲೀಸರಿಂದ ವಶಕ್ಕೆ ತೆಗೆದುಕೊಳ್ಳಲ್ಪಟ್ಟಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

 ಆಝಾದ್ ಅವರು ಐತಿಹಾಸಿಕ ಜಾಮಾ ಮಸೀದಿಯಿಂದ ಜಂತರ್ ಮಂತರ್‌ವರೆಗೆ ನಡೆಸಲುದ್ದೇಶಿಸಿದ್ದ ಪ್ರತಿಭಟನಾ ಜಾಥಾಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೆ ತಾನು ಹೇಗಾದರೂ ಮಾಡಿ ಸ್ಥಳಕ್ಕೆ ತಲುಪುತ್ತೇನೆ ಎಂದು ಟ್ವೀಟಿಸಿದ್ದ ಆಝಾದ್,ತನ್ನ ಬಂಧನದ ವದಂತಿಗಳನ್ನು ಕಡೆಗಣಿಸಿ.ತಾನು ಜಾಮಾ ಮಸೀದಿಯನ್ನು ತಲುಪುತ್ತಿದ್ದೇನೆ ಎಂದು ತಿಳಿಸಿದ್ದರು ಮತ್ತು ಹಾಗೆ ಮಾಡಿದರು.

ಶುಕ್ರವಾರದ ನಮಾಝ್ ಬಳಿಕ ಆಝಾದ್ ಸಂವಿಧಾನದ ಪ್ರತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ತನಗಾಗಿ ಕಾಯುತ್ತಿದ್ದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಮಸೀದಿಯ ಪ್ರವೇಶದ್ವಾರದ ಒಳಭಾಗದ ಮೆಟ್ಟಿಲಿನಲ್ಲಿ ಪ್ರತ್ಯಕ್ಷರಾಗಿದ್ದರು.

ತನ್ನ ಮುಖವನ್ನು ನೀಲಿ ಬಣ್ಣದ ಜಾಕೆಟ್‌ನಿಂದ ಮುಚ್ಚಿಕೊಂಡಿದ್ದ ಆಝಾದ್ ಮಸೀದಿಯ ಮೆಟ್ಟಲಿನ ಮೇಲೆ ಕಾಣಿಸಿಕೊಂಡಾಗ ‘ಜೈ ಭೀಮ್’ ಘೋಷಣೆಗಳು ಮೊಳಗಿದ್ದವು. ಪ್ರತಿಭಟನೆಯನ್ನು ತಡೆಯಲು ಸಜ್ಜಾಗಿದ್ದ ಪೊಲೀಸರು ಪ್ರವೇಶದ್ವಾರದ ಇನ್ನೊಂದು ಬದಿಯಲ್ಲಿ ನಿಂತುಕೊಂಡು ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಜನಸ್ತೋಮದ ಮೇಲೆ ಹದ್ದಿನ ಕಣ್ಣಿರಿಸಿದ್ದರು.

 ನೂರಾರು ಪ್ರತಿಭಟನಾಕಾರರ ಘೋಷಣೆಗಳ ನಡುವೆಯೇ ಆಝಾದ್ ಅವರು ಸಂವಿಧಾನದ ಪೀಠಿಕೆಯನ್ನು ಓದಿದರು. ಬಳಿಕ ಕಪ್ಪುಪಟ್ಟಿಗಳನ್ನು ಧರಿಸಿದ್ದ ಪ್ರತಿಭಟನಾಕಾರರು ಮಸೀದಿಯ ಆವರಣದಿಂದ ಹೊರಬಿದ್ದು ಘೋಷಣೆಗಳನ್ನು ಕೂಗುತ್ತ ರಸ್ತೆಯಲ್ಲಿ ಸಾಗಿದ್ದರು. ಮಸೀದಿ ಬಳಿಯ ಕಿರಿದಾದ ರಸ್ತೆ ಜನಸಾಗರದಿಂದ ತುಂಬಿಹೋಗಿತ್ತು.

ಸಂಭಾವ್ಯ ತೊಂದರೆಯನ್ನೆದುರಿಸಲು ಪೊಲೀಸರು ಸಜ್ಜಾಗಿದ್ದರಾದರೂ ಅವರ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದುದು ಕಂಡು ಬಂದಿತ್ತು. ಅಂತಿಮವಾಗಿ ಆಝಾದ್‌ರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಝಾದ್‌ರನ್ನು ಪೊಲೀಸ್ ವಾಹನದಲ್ಲಿ ಹತ್ತಿಸಲು ಮುಂದಾದಾಗ ಪೊಲೀಸರಿಂದ ತಪ್ಪಿಸಿಕೊಂಡ ಅವರು ಕ್ಷಣಾರ್ಧದಲ್ಲಿ ಜನಜಂಗುಳಿಯ ನಡುವೆ ಮಾಯವಾಗಿದ್ದರು.

 ಗುರುವಾರ ಕೆಂಪುಕೋಟೆಯ ಬಳಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದ ಪೊಲೀಸರು ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಹೇರಿದ್ದರು. ಶುಕ್ರವಾರ ನಮಾಝ್‌ಗೆ ಅನುಕೂಲ ಕಲ್ಪಿಸಲು ಜಾಮಾ ಮಸೀದಿ ಪ್ರದೇಶದಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News