ಉತ್ತರಪ್ರದೇಶ: ಹಿಂಸಾಚಾರದಲ್ಲಿ 6 ಸಾವು
ಲಕ್ನೋ, ಡಿ. 20: ಉತ್ತರಪ್ರದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆ ಸಂದರ್ಭ ಸಂಭವಿಸಿದ ಘರ್ಷಣೆಯಲ್ಲಿ 6 ಪ್ರತಿಭಟನಕಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಆದರೆ, ಪೊಲೀಸ್ ಗುಂಡಿನಿಂದ ಯಾರೊಬ್ಬ ಪ್ರತಿಭಟನಕಾರನೂ ಮೃತಪಟ್ಟಿಲ್ಲ ಎಂದು ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ಪ್ರತಿಪಾದಿಸಿದ್ದಾರೆ. ‘‘ನಾವು ಒಂದೇ ಒಂದು ಗುಂಡನ್ನೂ ಹಾರಿಸಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಒಂದು ವೇಳೆ ಯಾವುದೇ ಗುಂಡು ಹಾರಿದ್ದರೆ, ಅದು ಪ್ರತಿಭಟನಕಾರರ ಕಡೆಯಿಂದ ಹಾರಿರಬಹುದು’’ ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ. ಬಿಜ್ನೂರಿನಲ್ಲಿ ಇಬ್ಬರು, ಸಂಭಾಲ್, ಫಿರೋಝಾಬಾದ್, ಮೀರತ್ ಹಾಗೂ ಕಾನ್ಪುರದಲ್ಲಿ ತಲಾ ಒಬ್ಬರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ಒಟ್ಟು 50 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರ ಮಾಹಿತಿ ತಿಳಿಸಿದೆ.
ರಾಜ್ಯದಾದ್ಯಂತ 13 ಜಿಲ್ಲೆಗಳಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿದ ಬಳಿಕ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅದು ಸಾಧ್ಯವಾಗದೇ ಇದ್ದಾಗ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಗುಂಪನ್ನು ಹತೋಟಿಗೆ ತಂದರು.