ಮೈಕೊರೆಯುವ ಚಳಿಗೆ ಉತ್ತರ ಭಾರತ ತತ್ತರ : 760 ವಿಮಾನ, 100 ರೈಲು ವಿಳಂಬ
ಹೊಸದಿಲ್ಲಿ: ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ, ಹಿಮಪಾತ, ದಟ್ಟ ಮಂಜಿನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಾಜಧಾನಿಯಲ್ಲಿ ಶುಕ್ರವಾರ ದಟ್ಟ ಮಂಜಿನಿಂದಾಗಿ 760 ವಿಮಾನಗಳು ವಿಳಂಬವಾಗಿವೆ. 19 ವಿಮಾನಗಳ ಸಂಚಾರ ರದ್ದುಪಡಿಸಲಾಗಿದ್ದು, 100ಕ್ಕೂ ಹೆಚ್ಚು ರೈಲುಗಳು ಎರಡು ಗಂಟೆಗೂ ಹೆಚ್ಚು ವಿಳಂಬವಾಗಿ ಸಂಚರಿಸಿವೆ.
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ವ್ಯಾಪಕ ಹಿಮಪಾತವಾಗುತ್ತಿದೆ. ಎನ್‌ಸಿಆರ್ ಪ್ರದೇಶದಲ್ಲಿ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದೆ. ಶುಕ್ರವಾರ ಬೆಳಗ್ಗೆ ಹಲವು ಕಡೆಗಳಲ್ಲಿ ಗೋಚರತೆ ಶೂನ್ಯಕ್ಕೆ ಕುಸಿದ ಹಿನ್ನೆಲೆಯಲ್ಲಿ ರೈಲು ಹಾಗೂ ವಿಮಾನ ಸಂಚಾರಕ್ಕೆ ತಡೆ ಉಂಟಾಯಿತು. ಪಾಲಂನಲ್ಲಿ ಗೋಚರತೆ ಶೂನ್ಯಕ್ಕೆ ಕುಸಿದರೆ ಸಪ್ಧರ್‌ಜಂಗ್‌ನಲ್ಲಿ 300 ಮೀಟರ್‌ನಷ್ಟಿತ್ತು. ಗರಿಷ್ಠ ತಾಪಮಾನ 17.5 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 5 ಡಿಗ್ರಿಯಷ್ಟು ಕಡಿಮೆ. ಶನಿವಾರ ಕೂಡಾ ತೀವ್ರ ಚಳಿ ಪರಿಸ್ಥಿತಿ ಮುಂದುವರಿಯಲಿದ್ದು, ಲಘುವಾಗಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಮಾಚಲ ಪ್ರದೇಶದ ಕಿಲಾಂಗ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 6 ಡಿಗ್ರಿ ತಲುಪಿದೆ. ಕಲ್ಪಾದಲ್ಲಿ ಕನಿಷ್ಠ ತಾಪಮಾನ 0.7 ಡಿಗ್ರಿ ಸೆಲ್ಷಿಯಸ್ ಆಗಿತ್ತು. ಪ್ರವಾಸಿ ತಾಣ ಮನಾಲಿಯಲ್ಲಿ 2 ಡಿಗ್ರಿ, ಕುಫ್ರಿಯಲ್ಲಿ 4 ಡಿಗ್ರಿ, ಡಾಲ್‌ಹೌಸಿಯಲ್ಲಿ 4.3 ಡಿಗ್ರಿ ಹಾಗೂ ಶಿಮ್ಲಾದಲ್ಲಿ 6.3 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ದಿಂದಾಗಿ ಟೇಕಾಫ್ ಆಗಬೇಕಿದ್ದ 12 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ರದ್ದುಪಡಿಸಲಾಗಿದೆ. ಶುಕ್ರವಾರ ಸಂಜೆ ವೇಳೆಗೆ ಜವಾಹರ್ ಸುರಂಗ ಬಳಿ 6 ಇಂಚುಗಳಷ್ಟು ಹಿಮಪಾತವಾಗಿದೆ. ಲಡಾಕ್‌ನ ದ್ರಾಸ್ ಪ್ರದೇಶದಲ್ಲಿ ದೇಶದಲ್ಲೇ ಕನಿಷ್ಠ ಅಂದರೆ ಮೈನಸ್ 16.1 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.