ಏಕದಿನ ಪಂದ್ಯಕ್ಕೆ ನವದೀಪ್ ಸೈನಿ ಪಾದಾರ್ಪಣೆ

Update: 2019-12-22 18:46 GMT

ಕಟಕ್, ಡಿ.22: ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರವಿವಾರ ನವದೀಪ್ ಸೈನಿ ಚೊಚ್ಚಲ ಪಂದ್ಯಆಡುವ ಅವಕಾಶ ಪಡೆದಿದ್ದಾರೆ. ಆಡುವ 11ರ ಬಳಗದಲ್ಲಿ ದೀಪಕ್ ಚಹಾರ್‌ರಿಂದ ತೆರವಾದ ಸ್ಥಾನವನ್ನು ನವದೀಪ್ ತುಂಬಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ಬಳಿಕ ದೀಪಕ್‌ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ದೀಪಕ್ 17 ಓವರ್ ಬೌಲಿಂಗ್ ಮಾಡಿ 92 ರನ್ ನೀಡಿದ್ದರೂ ಕೇವಲ ಒಂದು ವಿಕೆಟ್ ಪಡೆದಿದ್ದರು. 27ರ ಹರೆಯದ ನವದೀಪ್ ಆಗಸ್ಟ್ ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ವೆಸ್ಟ್‌ಇಂಡೀಸ್‌ಗೆ ಭಾರತ ಪ್ರವಾಸ ಕೈಗೊಂಡಿದ್ದಾಗ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ ತಂಡವನ್ನು ಎದುರಿಸಿದ್ದರು. ಚೊಚ್ಚಲ ಟ್ವೆಂಟಿ-20 ಪಂದ್ಯದಲ್ಲಿ 17 ರನ್‌ಗೆ 3 ವಿಕೆಟ್‌ಗಳನ್ನು ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ವಿಂಡೀಸ್ ವಿರುದ್ಧ ಆ ಪಂದ್ಯದಲ್ಲಿ ಸೈನಿ ಸಿಂಗಾಪುರದ ಜನಕ್ ಪ್ರಕಾಶ್ ಬಳಿಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ವಿಕೆಟ್ ಪಡೆದಿದ್ದಲ್ಲದೆ ಮೇಡನ್ ಓವರ್ ಎಸೆದಿದ್ದರು. ತಾನೆಸೆದ ಮೊದಲ ಓವರ್‌ನಲ್ಲಿ ಸತತ ಎಸೆತಗಳಲ್ಲಿ ನಿಕೊಲಸ್ ಪೂರನ್ ಹಾಗೂ ಶಿಮ್ರೆನ್ ಹೆಟ್ಮೆಯರ್ ವಿಕೆಟ್‌ಗಳನ್ನು ಪಡೆದಿದ್ದರು. ಸೈನಿ ಈ ತನಕ 5 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, 8.06ರ ಇಕಾನಮಿ ದರದಲ್ಲಿ 22.83ರ ಸರಾಸರಿಯಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News