“ನನ್ನ ಕುತ್ತಿಗೆ ಹಿಡಿದರು”: ಉ.ಪ್ರದೇಶ ಪೊಲೀಸರ ವಿರುದ್ಧ ಪ್ರಿಯಾಂಕಾ ಗಾಂಧಿ ಆರೋಪ
ಹೊಸದಿಲ್ಲಿ, ಡಿ. 28: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾಗಿರುವ ಇಬ್ಬರು ಹೋರಾಟಗಾರರ ಕುಟುಂಬಗಳನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ತಡೆದು ನಿಲ್ಲಿಸಿ, ಒರಟಾಗಿ ನಡೆದುಕೊಂಡ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಪ್ರತಿಭಟನೆ ಸಂದರ್ಭ ಬಂಧಿತರಾಗಿರುವ ಸದಾಫ್ ಜಫರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್. ದಾರಾಪುರಿ ಅವರ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ವಾದ್ರಾ ತೆರಳುತ್ತಿದ್ದರು.
ತಾನು ಸಂಚರಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದರು ಹಾಗೂ ಮುಂದುವರಿಯದಂತೆ ತಿಳಿಸಿದರು. ತಾನು ಪೊಲೀಸರನ್ನು ಧಿಕ್ಕರಿಸಿ ಪಕ್ಷದ ಕಾರ್ಯಕರ್ತನ ಸ್ಕೂಟರ್‌ನ ಹಿಂದೆ ಕುಳಿತು ಅಲ್ಲಿಗೆ ಸಾಗಿದೆ. ಅನಂತರ ಕೂಡ ಪೊಲೀಸರು ತಡೆದರು. ಇದರಿಂದ ನಡೆದುಕೊಂಡು ಹೋಗಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
‘‘ಎರಡನೇ ಬಾರಿ ಮಹಿಳಾ ಪೊಲೀಸ್ ಓರ್ವರು ನನ್ನನ್ನು ತಡೆದರು. ಅವರು ನನ್ನನ್ನು ಹಿಡಿದರು ಹಾಗೂ ದೂಡಿದರು. ನನ್ನ ಕುತ್ತಿಗೆ ಹಿಡಿದರು’’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರ ಅನಂತರ ಎಸ್.ಆರ್. ದಾರಾಪುರಿಯ ಅವರ ಮನೆ ವರೆಗೆ ನಡೆದುಕೊಂಡು ಹೋದರು ಹಾಗೂ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.