ಸಿಎಎ ವಿರೋಧಿಸುವ ಮುನ್ನ ಅದನ್ನು ಓದಿ ಎಂದ ಜಗ್ಗಿ ವಾಸುದೇವ್: ಆದರೆ ಅವರು ಓದಿದ್ದೇನು ಗೊತ್ತಾ?

Update: 2019-12-31 13:36 GMT
Photo: facebook.com/sadhguru

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಈ ಕುರಿತಂತೆ 20 ನಿಮಿಷಗಳ ಕಾಲ ಭಾಷಣ ಮಾಡಿರುವ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ತಾನು ಈ ಕಾಯ್ದೆಯನ್ನು ಸಂಪೂರ್ಣವಾಗಿ ಓದಿಲ್ಲ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಜಗ್ಗಿ ವಾಸುದೇವ್ ಅವರು ಸುಮಾರು 22 ನಿಮಿಷ ಅವಧಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ಶೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಜಗ್ಗಿ ವಾಸುದೇವ್ ಕಾಯ್ದೆಯನ್ನು ವಿವರಿಸಿದ್ದಾರೆ ಎಂದು ಬರೆದಿದ್ದಾರೆ.

ಆದರೆ ಇಲ್ಲಿರುವ ಕುತೂಹಲಕಾರಿ ವಿಚಾರವೆಂದರೆ ಈ 21 ನಿಮಿಷ 57 ಸೆಕೆಂಡ್ ವೀಡಿಯೋದ ಆರಂಭದಲ್ಲಿ ಜಗ್ಗಿ ವಾಸುದೇವ್ ಹೀಗೆ ಹೇಳುತ್ತಾರೆ. "ನಾನು ಈ ಕಾಯ್ದೆಯನ್ನು ಸಂಪೂರ್ಣವಾಗಿ ಓದಿಲ್ಲ, ದಿನಪತ್ರಿಕೆಗಳಿಂದ ಹಾಗೂ ಲಭ್ಯ ಇತರ ಮಾಹಿತಿಯಿಂದ ಅದರ ಬಗ್ಗೆ ತಿಳಿದುಕೊಂಡಿದ್ದೇನೆ'' ಎಂದು ತಮ್ಮ ಭಾಷಣವನ್ನು ಜಗ್ಗಿ ವಾಸುದೇವ್ ಆರಂಭಿಸುತ್ತಾರೆ.

ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮವೊಂದರಲ್ಲಿ ಸಭಿಕರಲ್ಲಿದ್ದ ಮಹಿಳೆಯೊಬ್ಬರು ತನಗೆ ಕಾಯ್ದೆ ಕುರಿತು ಗೊಂದಲವಿದೆ ಹಾಗೂ ಅದರಿಂದಾಗಿ ದೇಶದಲ್ಲಿ ಉಂಟಾಗಿರುವ ಪ್ರತಿಭಟನೆಯನ್ನು ಹೇಗೆ ಅರ್ಥೈಸಬೇಕೋ ಎಂದು ತಿಳಿದಿಲ್ಲ ಎಂದಾಗ ಜಗ್ಗಿ ವಾಸುದೇವ್ ಅದಕ್ಕೆ ಮೇಲಿನಂತೆ ಉತ್ತರ ನೀಡಿದ್ದಾರೆ.

ಜಗ್ಗಿ ವಾಸುದೇವ್ ಅವರು ತಮ್ಮ ಉತ್ತರದಲ್ಲಿ ಭಾರತವು ತನ್ನ ನಾಗರಿಕರ ಮೇಲೆ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತಿಲ್ಲ ಎಂದು ಹೇಳುತ್ತಾ, ನೆರೆಯ ಪಾಕಿಸ್ತಾನದಲ್ಲಿನ ತಾರತಮ್ಯಕಾರಿ ನಿಲುವಿನ ಬಗ್ಗೆಯೂ ವಿವರಿಸಿದರು.

"ಸಿಎಎ ಏನನ್ನು ಹೇಳುತ್ತದೆ ಎಂಬುದನ್ನು ಯಾವುದೇ ವಿದ್ಯಾರ್ಥಿ ಓದಬಹುದು, ಆದರೆ ಅವರೆಲ್ಲೂ ಹೊರಬಂದು ಅನಕ್ಷರಸ್ಥರಂತೆ ವರ್ತಿಸುತ್ತಿದ್ದಾರೆ. ಅವರು ಪ್ರಮುಖ ವಿವಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಅವರೇಕೆ ಈ ಕಾಯಿದೆಯನ್ನು ಓದಿಲ್ಲ?'' ಎಂದು ಪ್ರಶ್ನಿಸಿದರು. ಆದರೆ ಪೌರತ್ವ ಕಾಯ್ದೆ ಬಗ್ಗೆ 20 ನಿಮಿಷಗಳ ಕಾಲ ಭಾಷಣ ಮಾಡಿದ ಜಗ್ಗಿ ವಾಸುದೇವ್ ಅವರೇ ಹೇಳುವಂತೆ 'ಪೌರತ್ವ ಕಾಯ್ದೆಯನ್ನು ಓದಿಲ್ಲ!'.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News