×
Ad

ಮೋದಿ, ಅಮಿತ್ ಶಾ ವಿರುದ್ಧ ಭಾಷಣ ಮಾಡಿದ ತಮಿಳು ವಿದ್ವಾಂಸ ನೆಲ್ಲೈ ಕಣ್ಣನ್ ಬಂಧನ

Update: 2020-01-02 11:16 IST
ನೆಲ್ಲೈ ಕಣ್ಣನ್ (Photo: Facebook)

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ತಮಿಳು ಸಾಹಿತಿ ಹಾಗೂ ವಿದ್ವಾಂಸ ನೆಲ್ಲೈ ಕಣ್ಣನ್ ಅವರನ್ನು ಪೊಲೀಸರು ಪೆರಂಬಲೂರ್ ಎಂಬಲ್ಲಿಂದ ಬುಧವಾರ ಬಂಧಿಸಿದ್ದಾರೆ. 

ನೆಲ್ಲೈ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರಾದ ಪೊನ್ ರಾಧಾಕೃಷ್ಣನ್, ಎಚ್ ರಾಜಾ ಹಾಗೂ ಎಲ್ ಗಣೇಶನ್ ಸಹಿತ ನೂರಾರು ಮಂದಿ ಮರೀನಾ ಬೀಚಿನಲ್ಲಿನ ಗಾಂಧಿ ಪ್ರತಿಮೆಯೆದುರು ಧರಣಿ ನಡೆಸಿದ ಕೆಲವೇ ಗಂಟೆಗಳಲ್ಲಿ ಅವರ ಬಂಧನವಾಗಿದೆ. ಕಣ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯಪಾಲರನ್ನೂ ಆಗ್ರಹಿಸಿತ್ತು. ಆಡಳಿತ ಪಕ್ಷ ಎಐಎಡಿಎಂಕೆ ಕೂಡ ಕ್ರಮಕ್ಕೆ ಆಗ್ರಹಿಸಿತ್ತು.

ಶನಿವಾರ ಎಸ್‍ಡಿಪಿಐ ಆಯೋಜಿಸಿದ್ದ  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಭೆಯಲ್ಲಿ ಮಾತನಾಡಿದ್ದ ನೆಲ್ಲೈ ಕಣ್ಣನ್, ಮುಸ್ಲಿಮರು ಮೋದಿ ಹಾಗೂ ಶಾ ವಿರುದ್ಧ ಕ್ರಮವೇಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು  ಈ ಭಾಷಣದ ವೀಡಿಯೋ ವೈರಲ್ ಆದ ನಂತರ ಕಣ್ಣನ್ ಬಂಧನವಾಗಿದೆ.

ಪೊಲೀಸರು ಮಂಗಳವಾರವೇ ಕಣ್ಣನ್ ಅವರ ನಿವಾಸಕ್ಕೆ ಅವರನ್ನು ಬಂಧಿಸಲು ಆಗಮಿಸಿದ್ದರೂ ಅವರಿಗೆ ಎದೆ ನೋವೆಂದು ಆಗ ಮಾಹಿತಿ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಗೆ ಕರೆ ಕಳುಹಿಸಲಾಗಿತ್ತು.

ಕಣ್ಣನ್ ಅವರ ಹೇಳಿಕೆ ವಿರುದ್ಧ ಬಿಜೆಪಿಯ ನೆಲ್ಲೈ ಜಿಲ್ಲಾ ನಾಯಕ ದಯಾ ಶಂಕರ್ ದೂರು ನೀಡಿದ್ದರಲ್ಲದೆ ಇದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಬಹಿರಂಗ ಬೆದರಿಕೆ ಎಂದು ಆರೋಪಿಸಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಎಸ್ ನರೇಂದ್ರನ್ ಕೂಡ ತಮಿಳುನಾಡು ಡಿಜಿಪಿಗೆ ದೂರು ನೀಡಿದ್ದರು.

ಕಣ್ಣನ್ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದ ಹಾಗೂ  ಶಾಂತಿ ಕದಲು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪಗಳನ್ನು ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News