ಜಮ್ಮುಕಾಶ್ಮೀರದ ಇಬ್ಬರು ಪಿಡಿಪಿ ನಾಯಕರ ಬಿಡುಗಡೆ

Update: 2020-01-03 16:20 GMT
file photo

 ಶ್ರೀನಗರ,ಜ.3: ಕಳೆದ ವರ್ಷದ ಆಗಸ್ಟ್‌ನಿಂದೀಚೆಗೆ ಗೃಹಬಂಧನದಲ್ಲಿರಿಸಿದ್ದ ಇಬ್ಬರು ಪಿಡಿಪಿ ನಾಯಕರನ್ನು ಜಮ್ಮುಕಾಶ್ಮೀರ ಆಡಳಿತವು ಶುಕ್ರವಾರ ಬಿಡುಗಡೆಗೊಳಿಸಿದೆ.

  ಜಮ್ಮುಕಾಶ್ಮೀರದ ಪಿಡಿಪಿ ನಾಯಕರಾದ ಅಶ್ರಫ್ ಮೀರ್ ಹಾಗೂ ರಫೀಕ್ ಮೀರ್ ಅವರ ನಿವಾಸಗಳಿಗೆ ಹಾಕಲಾಗಿದ್ದ ಪೊಲೀಸ್ ಕಾವಲನ್ನು ಶುಕ್ರವಾರ ಬೆಳಗ್ಗೆ ಹಿಂತೆಗೆದುಕೊಳ್ಳಲಾಗಿದೆ ಹಾಗೂ ಇನ್ನು ಮುಂದೆ ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾಂಭಿಸಬಹುದಾಗಿದೆ ಎಂದು ಜಮ್ಮುಕಾಶ್ಮೀರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

  ಅಶ್ರಫ್ ಮೀರ್‌ರನ್ನು ಮೊದಲು ಶಾಸಕರ ವಸತಿಗೃಹದಲ್ಲಿ ಇರಿಸಲಾಗಿತ್ತಾದರೂ, ಆನಂತರ ಅವರನ್ನು ಸ್ವಗೃಹದಲ್ಲಿ ಪ್ರತಿಬಂಧನಾತ್ಮಕ ಬಂಧನದಲ್ಲಿರಿಸಲಾಗಿತ್ತು. ರಫೀಕ್ ಮೀರ್ ಅವರನ್ನು ಆಗಸ್ಟ್ 5ರಂದು ಅವರ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು. ಶ್ರೀನಗರದ ಸೆಂಟಾರ್ ಹೊಟೇಲ್‌ನಲ್ಲಿ 25ಕ್ಕೂ ಅಧಿಕ ಮಂದಿ ರಾಜಕೀಯ ಕೈದಿಗಳನ್ನು ಇರಿಸಲಾಗಿದೆ.

  ಡಿಸೆಂಬರ್ 30ರಂದು ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿಗೆ ಸೇರಿದ ಐವರು ರಾಜಕೀಯ ನಾಯಕರನ್ನು ಜಮ್ಮುಕಾಶ್ಮೀರ ಆಡಳಿತವು ಬಿಡುಗಡೆಗೊಳಿಸಿತ್ತು. ಇವರ್ಯಾರೂ ಯಾವುದೇ ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿರಲಿಲ್ಲ ವೆಂಬುದು ಮನವರಿಕೆಯಾದ ಬಳಿಕ ಅವರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದವು.

ನ್ಯಾಶನಲ್ ಕಾನ್ಫರೆನ್ಸ್‌ನ ಇಶ್ಫಾಕ್ ಜಬ್ಬಾರ್, ಪಿಡಿಪಿಯ ಬಶೀರ್ ಮಿರ್, ಝಹೂರ್ ಮಿರ್ ಹಾಗೂ ಯಾಸಿರ್ ರೇಶಿ (ಪಿಡಿಪಿ) ಹಾಗೂ ಗುಲಾಂ ನಬಿ ಭಟ್ (ಪಕ್ಷೇತರ), ಡಿಸೆಂಬರ್ 30ರಂದು ಬಿಡುಗಡೆಗೊಂಡ ರಾಜಕೀಯ ನಾಯಕರಾಗಿದ್ದಾರೆ.

ರಾಜಕೀಯ ಮುಖಂಡರ ಬಿಡುಗಡೆಯನ್ನು ನ್ಯಾಶನಲ್ ಕಾನ್ಫರೆನ್ಸ್ ಸ್ವಾಗತಿಸಿದ್ದು, ಇಂತಹ ನಡೆಯು ಸರಕಾರ ಮತ್ತು ಜನತೆಯ ನಡುವಿನ ಅಂತರವನ್ನು ನಿವಾರಿಸಲಿದೆ ಎಂದು ಅದು ಹೇಳಿದೆ.

ಕೇಂದ್ರ ಸರಕಾರವು ಆಗಸ್ಟ್ 5ರಂದು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಅಲ್ಲಿನ ಹಲವಾರು ರಾಜಕೀಯ ನಾಯಕರನ್ನು ವಶಕ್ಕೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News