ಶಾಂತಿ, ಸೋದರತೆ ಅವರಿಗೆ ಬೇಡವಾಗಿತ್ತು

Update: 2020-01-06 17:59 GMT

ಪೌರತ್ವದ ಪ್ರಶ್ನೆ ಎದ್ದು ಇಡೀ ದೇಶವೇ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಕೇವಲ ಪಂಕ್ಚರ್ ಹಾಕುವವರಷ್ಟೇ ಅಲ್ಲ, ಅವರಂತೆಯೇ ಪ್ರಜ್ಞಾವಂತರೆನಿಸಿಕೊಂಡ ಬಹುಪಾಲು ಮಂದಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿನಿಯರು ಬೆರಗು ಹುಟ್ಟಿಸುವಂತೆ ಕೇಂದ್ರದ ವಿರುದ್ಧ ತಮ್ಮ ಮಾತಿನ ಚಾಟಿ ಬೀಸುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ‘ಅವರಿಬ್ಬರು’ ಕಿವಿಯೇ ಇಲ್ಲದವರಂತೆ ಅವರದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಅಲ್ಲದೆ ಅನಗತ್ಯ ವಿಚಾರಗಳನ್ನು ಮುಂದಿರಿಸುತ್ತಿದ್ದಾರೆ. ಇದು ಸರಕಾರವಲ್ಲ, ಸರ್ವಾಧಿಕಾರ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ದೇಶದಾದ್ಯಂತ ನಡೆದ ಪ್ರತಿಭಟನೆಗಳನ್ನು ಗಮನಿಸಿದಾಗ, ಅವರು ಏನನ್ನು ಬಯಸಿದ್ದರೋ ಅದನ್ನೇ ಜನರೆಲ್ಲ ಮಾಡಿದಂತೆ ಕಾಣಿಸುತ್ತದೆ. ಧರ್ಮಗಳ ನಡುವೆ ಬೆಂಕಿ ಹಚ್ಚುವ ಮೂಲಕ, ವೈಷಮ್ಯ, ಪರಕೀಯ ಭಾವವನ್ನು ಬಿತ್ತುವ ಮೂಲಕ ತಮ್ಮ ವೋಟ್ ಬ್ಯಾಂಕ್ ವಿಸ್ತರಿಸುವ ಈ ಹುನ್ನಾರ ಒಂದು ಅಮಲು ಇದ್ದ ಹಾಗೆ. ಮುಸ್ಲಿಮರ ವೋಟಿನ ಬಗ್ಗೆ ಒಂದಿನಿತೂ ವಿಶ್ವಾಸ ಅವರಿಗಿಲ್ಲ, ಅವರಿಗದು ಬೇಕಾಗಿಯೂ ಇಲ್ಲ. ಈ ಮೊದಲು ಗೆದ್ದು ಬೀಗಿದ್ದರ ಹಿಂದೆ ಇವಿಎಂನ ಉಪಕಾರ ಇದ್ದಿದ್ದರ ಬಗ್ಗೆ ದಟ್ಟ ಅನುಮಾನ, ಕೆಲವು ಸುಳಿವು ಸಾಕ್ಷಗಳು ದೊರೆತಿರುವುದು, ಮುಂದಿನ ಐದು ವರ್ಷಗಳ ಉನ್ಮಾದಿತ ಗೆಲುವನ್ನು ಸಾಧಿಸಲು ಅಡ್ಡಿಯಾಗಬಹುದು ಎಂಬ ಅರಿವನ್ನು ಅವರಲ್ಲಿ ಮೂಡಿಸಿದೆ.

ಒಂದು ಮೋಸ ಅಷ್ಟೊಂದು ವರ್ಷ ಬಾಳಿಕೆ ಬಾರದು ಎಂಬುದನ್ನು ಸುಳ್ಳಿನ ಸರದಾರರಿಗೆ ಹೇಳಿಕೊಡಬೇಕೆ? ಹೀಗಿರುವಾಗ ಅವರ ಮುಂದೆ ಮಾರ್ಗವಿಲ್ಲ. ಇದ್ದ ಮಾರ್ಗಗಳೆಲ್ಲ ಕೊನೆ ತಲುಪಿವೆ. ಜನರ ಮೆದುಳಿಗೆ ಎಲ್ಲಿಂದ ನುಸುಳಬೇಕು ಎಂದು ಯೋಚಿಸುತ್ತಿದ್ದ ಈ ಇಬ್ಬರು ಕಂಡುಕೊಂಡ ಮಾರ್ಗ ಸಿಎಎ, ಎನ್‌ಆರ್‌ಸಿ. ಈ ಬೃಹತ್ ಮಾರ್ಗ ಕಣ್ಣ ಮುಂದೆ ಬಂದಾಗ, ಜನರು ನೋಟ್ ಬ್ಯಾನ್, ಜಿಎಸ್‌ಟಿ, ಬೆಲೆ ಏರಿಕೆ, ಜಿಡಿಪಿ ಕುಸಿತ, ಆರ್ಥಿಕ ಹಿಂಜರಿತಗಳಂತಹ ಸಂಗತಿಗಳನ್ನು ಸಣ್ಣದಾಗಿ ಕಾಣುತ್ತಾರೆ ಅಥವಾ ಮರೆತು ಬಿಡುತ್ತಾರೆ ಎಂಬುದು ಇವರ ಭಾವನೆ. ಹಾಗಂತ ಸಿಎಎ/ಎನ್‌ಆರ್‌ಸಿ ಕೇವಲ ಈ ಉದ್ದೇಶಕ್ಕಷ್ಟೇ ತಂದಿದ್ದಾರೆ ಎಂದು ಭಾವಿಸುವಷ್ಟು ಮೂರ್ಖತನ ತೋರಿಸಲಾರೆ. ಆದರೆ ಅದನ್ನು ಈ ಹೊತ್ತಿನಲ್ಲಿ ಬಾಲಕ್ಕೆ ಬೆಂಕಿ ಹಚ್ಚಿ ಬೀದಿಗೆ ಬಿಡಲು ಇರುವ ಕಾರಣವೆಂದರೆ ಉಳಿದ ದಾರಿಗಳು ಮುಚ್ಚಿರುವುದು. ಜನರ ನಡುವೆ ದ್ವೇಷವನ್ನು ಜೀವಂತವಾಗಿರಿಸುವುದು ಎಂದರೆ ಈಗಿನ ಸರಕಾರದ ಅಸ್ತಿತ್ವವನ್ನು ಜೀವಂತವಾಗಿರಿಸಿದಂತೆ. ಅದಿಲ್ಲದಿದ್ದರೆ ಸರಕಾರ ಸೊರಗಿ ಹೋಗುತ್ತದೆ. ಒಂದು ಸಂದರ್ಭದಲ್ಲಿ ಸೌಹಾರ್ದ ಭಾವ(ತೋರಿಕೆಯದ್ದಾದರೂ) ಜನರಲ್ಲಿ ಹೆಚ್ಚುವ ಸಾಧ್ಯತೆಯ ಲಕ್ಷಣಗಳು ಕಂಡುಬಂದುವು. ಅಂತಹ ಹೊತ್ತಿನಲ್ಲಿಯೇ ಅಯೋಧ್ಯೆ ವಿಚಾರವನ್ನು, ಇದೊಂದು ಜಾಗತಿಕ ತಾಪಮಾನದಂತಹ ವರ್ತಮಾನದ ತುರ್ತು ಎಂಬಂತೆ ಬಿಂಬಿಸಿ ಕೋರ್ಟಿನ ಮುಂದಿರಿಸಿ ಅವಸರದ ತೀರ್ಪು ನೀಡಲಾಯಿತು. ಆದರೆ ಇದು ಅಷ್ಟೊಂದು ಬೇಯಲಿಲ್ಲ. ಅಲ್ಲದೆ ಹಿಂದೆ ಇದ್ದ ಸೌಹಾರ್ದದ ಬೆಳಕಿಗೆ ಇನ್ನಷ್ಟು ಪ್ರಕಾಶ ನೀಡಿತು. ಹಿಂಸಾಚಾರದ ಕನಸು ಕಂಡಿದ್ದ ಅವರು, ಜನರ ಶಾಂತಿಯ ಪ್ರತಿಕ್ರಿಯೆಯ ಮುಂದೆ ಸಪ್ಪೆಯಾಗಿಬಿಟ್ಟರು.

ಮುಸ್ಲಿಮ್ ಸಮುದಾಯ, ಕೋರ್ಟ್ ತೀರ್ಪನ್ನು ಗೌರವಿಸುತ್ತಲೇ ‘‘ನಾವಿದನ್ನು ಒಪ್ಪುವುದಿಲ್ಲ’’ ಎಂದಷ್ಟೇ ಹೇಳಿತು. ಯೋಚಿಸಿ ನೋಡಿ, ಒಂದು ವೇಳೆ ಅಯೋಧ್ಯೆ ತೀರ್ಪಿನ ವಿಚಾರದಲ್ಲಿ ದೇಶದ ಮುಸ್ಲಿಮರು ಭುಗಿಲೆದ್ದು, ಹಿಂದೂ ಮುಸ್ಲಿಮರ ನಡುವೆ ಅಲ್ಲಲ್ಲಿ ಗಲಭೆಗಳಾಗಿ, ಹಿಂಸಾಚಾರದಿಂದ ಇಡೀ ದೇಶ ತತ್ತರಿಸಿ ಹೋಗಿದ್ದರೆ, ಇಂದಿನ ಸಿಎಎ, ಎನ್‌ಆರ್‌ಸಿ ಜಾರಿಗೆ ಅದು ಎಷ್ಟು ‘ಬಲ’ ಒದಗಿಸುತ್ತಿತ್ತು!! ಮುಸ್ಲಿಮರ ಮೇಲಿನ ವಿರೋಧದ ಮನಸ್ಥಿತಿ ಇನ್ನಷ್ಟು ಹೆಚ್ಚುತ್ತಲೂ ಇತ್ತು. ಬಹಳಷ್ಟು ಹಿಂದೂ ಬಾಂಧವರಿಗೆ ಅಯೋಧ್ಯೆ ತೀರ್ಪಿನ ವೇಳೆ ಮುಸ್ಲಿಮರು ನಡೆದುಕೊಂಡ ರೀತಿ ಖುಷಿ ಕೊಟ್ಟಿದೆ, ಅದು ದೇಶದಲ್ಲಿ ಶಾಂತಿಯನ್ನು, ಸೋದರತೆಯನ್ನು ಹೆಚ್ಚಿಸಿದೆ. ಈ ‘ಸೋದರತೆ’ ಕೇಂದ್ರಕ್ಕೆ ಬೇಡವಾಗಿತ್ತು. ತಮ್ಮ ಭಕ್ತರ ಮೆದುಳನ್ನು ಸಂಪೂರ್ಣ ನುಂಗಿರುವ ಬಿಜೆಪಿ, ಈಗ ಇತರ ಮೆದುಳುಗಳ ಕಡೆ ಕಣ್ಣಿಟ್ಟಿದೆ. ಹಾಗಾಗಿ ಎನ್‌ಆರ್‌ಸಿ ಜಾರಿ, ಮುಸ್ಲಿಮರನ್ನು ಹೊರದಬ್ಬುವುದು ‘ಸಂಘ’ದ ಗುರಿ ಹಾಗೂ ಅದನ್ನು ಇವರಿಬ್ಬರಿಂದ ಸಾಧಿಸಲು ಪ್ರಯತ್ನಿಸುತ್ತಿರುವುದು ತೆರೆಯ ಹಿಂದಿನ ಚಟುವಟಿಕೆಗಳಾದರೂ, ಥಟ್ಟೆಂದು ಇದರ ಕುರಿತು ಬೆಂಕಿ ಹಚ್ಚುವುದಕ್ಕಿದ್ದ ಕಾರಣ ನಮ್ಮ ನಮ್ಮಲ್ಲಿನ ಒಗ್ಗಟ್ಟನ್ನು ಇಲ್ಲವಾಗಿಸುವುದಷ್ಟೆ. ಇಲ್ಲೂ ಅವರು ಸೋತರು. ಮುಸ್ಲಿಮರಷ್ಟೇ ಅಲ್ಲದೆ ಹಿಂದೂ, ಕ್ರೈಸ್ತರು, ಜಾತಿ ಧರ್ಮ ನೋಡದೆ ದೇಶಕ್ಕೆ, ಸಂವಿಧಾನಕ್ಕೆ ಬಂದೆರಗಿದ ಅಪಾಯದ ವಿರುದ್ಧ ಹೋರಾಟಕ್ಕೆ ಬೀದಿಗಿಳಿದಿದ್ದಾರೆ.

ಯುವಜನತೆ ತಮ್ಮ ನಿಜವಾದ ಶಕ್ತಿಯನ್ನು ಮಾತಿನ ಮೂಲಕವೇ ತೋರಿಸಿತು. ಇನ್ನೊಂದು ವಿಚಾರ ಎಂದರೆ ಇಲ್ಲಿ ಬಹುತೇಕ ಯುವಕ ಯುವತಿಯರು ಕೇವಲ ಸಿಎಎ ವಿಚಾರಕ್ಕಷ್ಟೇ ಬೀದಿಗಿಳಿದಿಲ್ಲ. ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ಗಳಿಸಿ ಹೊರಬಂದ ಅದೆಷ್ಟೋ ಯುವಮನಸ್ಸಿನ ಕನಸಿಗೆ ಉದ್ಯೋಗ ಭರವಸೆ ಹುಟ್ಟಿಸಿ, ಯಾವ ಉದ್ಯೋಗವನ್ನೂ ನೀಡದೆ, ಇದ್ದ ಉದ್ಯೋಗಗಳನ್ನೂ ಕಳೆದುಕೊಳ್ಳುವಂತೆ ಮಾಡಿ, ಕೊಳ್ಳಿ ಇಟ್ಟಿದ್ದಾರಲ್ಲ, ಅದೇ ಕೊಳ್ಳಿಯಲ್ಲಿ ಬೆಂಕಿ ಹತ್ತಿಕೊಂಡು ಅವರು ಇಂದು ಬೀದಿಗೆ ಬಂದಿದ್ದಾರೆ. ಅವರಲ್ಲಿ ಹಲವು ಕಾರಣಗಳ ಆಕ್ರೋಶಗಳಿವೆ. ಕಡೇಪಕ್ಷ ಈ ಸರಕಾರ ಬೀಳುವುದಾದರೂ ಆಗಲಿ ಎಂಬ ಆಸೆಯಿಂದ ಅವರು ಬೀದಿಗೆ ಬಂದಿದ್ದಾರೆ. ಅವರು ದೇಶ ಕಟ್ಟುವ ಮಾತನಾಡುತ್ತಾರೆ. ಆದರೆ ಅವರು ಕಟ್ಟುತ್ತಿರುವುದು ಅವರ ಪಕ್ಷವನ್ನು ಮಾತ್ರ. ಕಣ್ಣ ಮುಂದೆಯೇ ದೇಶವನ್ನು ಛಿದ್ರಗೊಳಿಸುತ್ತಿರುವ ಈ ಸರಕಾರ ದೇಶ ಕಟ್ಟುತ್ತಿರುವುದಾದರೂ ಯಾವ ಆಯಾಮದಲ್ಲಿ? ಯಾವ ದೇಶವನ್ನು ಎಲ್ಲಿ ಕಟ್ಟುತ್ತಿದ್ದಾರೆ? ಎಲ್ಲ ಬುಡಮೇಲಾದ ಮೇಲೆ ಪ್ರಧಾನಿ ಎಂಬವರು ತುಮಕೂರಿಗೆ ಬಂದು ಪಾಕಿಸ್ತಾನದ ಜಪ ಮಾಡುತ್ತಿರುವುದರ ಹಿಂದೆ, ಜನರ ಮೆದುಳಿನೊಳಕ್ಕೆ ನುಸುಳಲು ದಾರಿಯಿಲ್ಲದಿರುವುದರ ಸಂಕಟವಿದೆ. ಇನ್ನು ಈ ಪಾಕಿಸ್ತಾನದ ಮಂತ್ರ ಹಿಡಿದುಕೊಂಡು ಎಷ್ಟೆಂದು ಭಾರತವೆಂಬ ಬೃಹತ್ ದೇಶವನ್ನು ಮುನ್ನಡೆಸಲು ಸಾಧ್ಯ? ಇಂತಹವರಿಂದ ದೇಶದ ಜನತೆ ಎಚ್ಚರದಿಂದಿರಬೇಕಾದ ಅಗತ್ಯವಿದೆ.

ಭಾರತ ಪಾಕ್ ವಿಭಜನೆಯ ಲಾಭ ಬಿಜೆಪಿಗೆ ಬಹಳ ದೊಡ್ಡಮಟ್ಟದಲ್ಲಿ ದಕ್ಕಿದೆ. ನಾವೆಲ್ಲ ಸಣ್ಣವರಿದ್ದಾಗ ಶಾಲೆಯಲ್ಲಿ ಸ್ನೇಹಿತರಲ್ಲಿ ಒಬ್ಬನ ತಲೆಗೆ ಫಟ್ ಅಂತ ಹೊಡೆದು ಇನ್ನೊಬ್ಬನ ಕಡೆ ಬೆರಳು ಮಾಡುತ್ತಿದ್ದೆವು- ನಾನಲ್ಲ ಹೊಡೆದಿದ್ದು ಅವನು ಎಂದು. ಅದೇ ಮಾದರಿಯನ್ನು ಮೋದಿ ಸರಕಾರ ಅನುಸರಿಸುತ್ತಿದೆ. ದೇಶದೊಳಗಿನ ಅರ್ಥವ್ಯವಸ್ಥೆಗೆ, ಸಾಮಾಜಿಕ ವ್ಯವಸ್ಥೆಗೆ, ಸಂವಿಧಾನಕ್ಕೆ, ಕಾನೂನಿಗೆ ಒಂದೊಂದೇ ಹೊಡೆತಗಳನ್ನು ನೀಡುತ್ತಲೇ ತನ್ನ ಭಕ್ತರಿಗೆ ಪಾಕಿಸ್ತಾನವನ್ನು ತೋರಿಸುತ್ತಿದೆ. ದೇಶಭಕ್ತಿ, ದೇಶಪ್ರೇಮದ ಹೆಸರಿನಲ್ಲಿ ಮುಗ್ಧರಾಗಿ ಇವರನ್ನು ನಂಬಿ ಹಿಂದೆ ಹೋದ ಬಹಳಷ್ಟು ಯುವಕ ಯುವತಿಯರಿದ್ದಾರೆ. ಬದುಕುವುದೆಂದರೆ ಸಿನೆಮಾದಂತೆ ಎಂದು ಭಾವಿಸಿರುವ ಈ ಕಾಲದ ಇಂತಹ ಯುವಜನತೆಯ ತಲೆಯಲ್ಲಿ ಯುದ್ಧೋನ್ಮಾದವನ್ನು ತುಂಬಿ ಬೇರೆಲ್ಲವನ್ನೂ- ತಮಗೆ ಉದ್ಯೋಗವಿಲ್ಲ ಎಂಬ ಸ್ವ-ಅರಿವನ್ನೂ ಅವರು ಮರೆಯುವಂತೆ ಮಾಡುತ್ತಾರೆ. ಇಂತಹ ಯುವಮನಸ್ಸುಗಳನ್ನು ಈ ಉನ್ಮಾದದಿಂದ ಬಿಡಿಸಿಕೊಂಡು ಬರುವುದು ಸುಲಭದ ಕೆಲಸವಲ್ಲ. ಈ ಸಂಕಷ್ಟ ಅವರ ಹೆತ್ತವರಿಗಷ್ಟೇ ಗೊತ್ತು. ಹಾಗಾಗಿ ದೇಶದ ಹಿತದೃಷ್ಟಿಯಿಂದ ನಿಮ್ಮ ಮೆದುಳಿಗೆ ಈ ಸುಳ್ಳಿನ ಸರದಾರರು ಯಾವ ಬಗೆಯಲ್ಲೂ ನುಸುಳದಂತೆ, ಎಚ್ಚರವಹಿಸಿದರೆ ಬಹುತ್ವ ಭಾರತವೂ ಉಳಿದೀತು, ಭವಿಷ್ಯತ್ತೂ ಬದಲಾದೀತು.

Writer - ಮುಹಮ್ಮದ್ ಶರೀಫ್ ಕಾಡುಮಠ

contributor

Editor - ಮುಹಮ್ಮದ್ ಶರೀಫ್ ಕಾಡುಮಠ

contributor

Similar News