ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಐಶ್ ಘೋಷ್ ಮೇಲೆ 4 ನಿಮಿಷಗಳಲ್ಲಿ 2 ಪ್ರಕರಣ ದಾಖಲಿಸಿದ್ದ ಪೊಲೀಸರು!
ಹೊಸದಿಲ್ಲಿ: ಮುಸುಕುಧಾರಿ ಗೂಂಡಾಗಳ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ಅವರನ್ನು ಆಸ್ಪತ್ರೆಗೆ ಒಯ್ಯುತ್ತಿದ್ದ ವೇಳೆಯೇ ಅವರ ವಿರುದ್ಧ ಕೇವಲ ನಾಲ್ಕು ನಿಮಿಷಗಳಲ್ಲಿ ಎರಡು ಪ್ರಕರಣ ದಾಖಲಿಸಿರುವ ಅಂಶ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ಇತರರ ವಿರುದ್ಧ ವಿಶ್ವವಿದ್ಯಾನಿಲಯ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಫ್‍ಐಆರ್ ನ ವಿವರಗಳು ಇದೀಗ ಲಭ್ಯವಾಗಿವೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ದಾಳಿ ಮಾಡಿದ ಗುಂಪಿನ ವಿರುದ್ಧ ದಾಖಲಾಗಿರುವ ಮೂರನೇ ಎಫ್‍ಐಆರ್ ನಲ್ಲಿ ಯಾವುದೇ ಹೆಸರುಗಳಿಲ್ಲ.
ದುಷ್ಕರ್ಮಿಗಳ ಗುಂಪು ಇನ್ನೂ ಕ್ಯಾಂಪಸ್ ನಲ್ಲಿ ದಾಂಧಲೆ ನಡೆಸುತ್ತಿದ್ದಾಗಲೇ ಅಂದರೆ ರವಿವಾರ ರಾತ್ರಿ 8:39 ಹಾಗೂ 8:43ರ ವೇಳೆಗೆ ಐಶ್ ಘೋಷ್ ವಿರುದ್ಧ ಎರಡು ಪ್ರಕರಣ ದಾಖಲಿಸಲಾಗಿದೆ. ಐಶ್ ಹಾಗೂ ಇತರ 26 ಮಂದಿಯ ವಿರುದ್ಧ ಜನವರಿ 1 ಹಾಗೂ 4ರಂದು ಸರ್ವರ್ ರೂಮ್ ಹಾನಿ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಚಳಿಗಾಲದ ಸೆಮಿಸ್ಟರ್ ಗೆ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಯ ವಿರುದ್ಧ ದಾಳಿ ಮಾಡಿದ ದೂರೂ ದಾಖಲಾಗಿದೆ.
ಜೆಎನ್‍ಯು ವಿದ್ಯಾರ್ಥಿ ಸಂಘ, ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವ ಸಲುವಾಗಿ ಸರ್ವರ್ ಕೊಠಡಿ ಧ್ವಂಸಗೊಳಿಸಿದ್ದರು ಎಂದು ಆಪಾದಿಸಲಾಗಿದೆ. ಈ ಸಂದರ್ಭ ಜೆಎನ್‍ಯು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು.