Breaking News: ಜನವರಿ 22ರಂದು ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲು

Update: 2020-01-07 15:13 GMT

ಹೊಸದಿಲ್ಲಿ,ಜ.7: ಏಳು ವರ್ಷಗಳ ಹಿಂದೆ ಇಡೀ ದೇಶವನ್ನು ಆಕ್ರೋಶಕ್ಕೆ ತಳ್ಳಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಎಲ್ಲ ನಾಲ್ವರು ದೋಷಿಗಳ ವಿರುದ್ಧ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮಂಗಳವಾರ ’ಡೆತ್ ವಾರಂಟ್’ನ್ನು ಹೊರಡಿಸಿದೆ. ಅವರನ್ನು ಗಲ್ಲಿಗೇರಿಸಲು ಜ.22ರಂದು ಬೆಳಿಗ್ಗೆ ಏಳು ಗಂಟೆಯ ಸಮಯವನ್ನು ನಿಗದಿಗೊಳಿಸಲಾಗಿದೆ.

‘ಡೆತ್ ವಾರಂಟ್’ನ್ನು ಹೊರಡಿಸಿದ ನ್ಯಾ.ಸತೀಶ್ ಕುಮಾರ್ ಅರೋರಾ ಅವರು ದೋಷಿಗಳು 14 ದಿನಗಳಲ್ಲಿ ಕಾನೂನು ಪರಿಹಾರಕ ಕ್ರಮಗಳನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು. ನ್ಯಾಯಾಲಯದ ಆದೇಶದ ಬೆನ್ನಲ್ಲೇ ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಮರಣ ದಂಡನೆಗೊಳಗಾಗಿರುವ ಅಕ್ಷಯ ಸಿಂಗ್, ಮುಕೇಶ್ ಸಿಂಗ್,ಪವನ್ ಗುಪ್ತಾ ಮತ್ತು ವಿನಯ ಶರ್ಮಾ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.

2012ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಬಾಲಾಪರಾಧಿಯ ವಿಚಾರಣೆಯನ್ನು ಬಾಲ ನ್ಯಾಯಮಂಡಳಿಯು ನಡೆಸಿ ಮೂರು ವರ್ಷಗಳ ರಿಮಾಂಡ್ ವಿಧಿಸಿತ್ತು. ಇನ್ನೋರ್ವ ಆರೋಪಿ ರಾಮಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಉಳಿದ ನಾಲ್ವರಿಗೆ ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 2013ರಲ್ಲಿ ಮರಣ ದಂಡನೆಯನ್ನು ವಿಧಿಸಿದ್ದು, ಮಾರ್ಚ್ 2014ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ಅದನ್ನು ಎತ್ತಿಹಿಡಿದಿತ್ತು. ಮೇ 2017ರಲ್ಲಿ ಮರಣ ದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ದೋಷಿಗಳು ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಗಳನ್ನು ವಜಾ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News