ನಿರ್ಭಯಾ ಪ್ರಕರಣ: ಗಲ್ಲುಗಂಬ ಏರಲಿರುವವರ ಭೇಟಿಗೆ ಕೋರ್ಟ್ ಅನುಮತಿ ಕೋರಿದ್ದ ಎನ್‌ಜಿಒ ಅರ್ಜಿ ವಜಾ

Update: 2020-01-10 13:53 GMT

ಹೊಸದಿಲ್ಲಿ,ಜ.10: ಅಂಗಾಂಗ ದಾನ ಮಾಡುವಂತೆ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ನಾಲ್ವರ ಮನವೊಲಿಸಲು ಅವರ ಭೇಟಿಗೆ ಅನುಮತಿ ನೀಡುವಂತೆ ಕೋರಿ ಎನ್‌ಜಿಒ ರೋಡ್ ಆ್ಯಂಟಿ-ಕರಪ್ಶನ್ ಆರ್ಗನೈಸೇಷನ್ (ಆರ್‌ಎಸಿಒ) ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ಹೆಚ್ಚುವರಿ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಈ ನಾಲ್ವರೂ ಜ.22ರಂದು ಬೆಳಿಗ್ಗೆ ದಿಲ್ಲಿಯ ತಿಹಾರ ಜೈಲಿನಲ್ಲಿ ಗಲ್ಲುಗಂಬವನ್ನು ಏರಲಿದ್ದಾರೆ.

 ಅರ್ಜಿಯು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ನ್ಯಾಯಾಧೀಶ ಸತೀಶ್ ಕುಮಾರ ಅರೋರಾ ಅವರು ಆದೇಶದಲ್ಲಿ ತಿಳಿಸಿದರು. ಲಭ್ಯ ದಾಖಲೆಗಳಂತೆ ನಾಲ್ವರ ಪೈಕಿ ಇಬ್ಬರು ಸವೋಚ್ಚ ನ್ಯಾಯಾಲಯದಲ್ಲಿ ಪರಿಹಾರಕ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದೂ ಅವರು ಹೇಳಿದರು.

ಮನಃಶಾಸ್ತ್ರಜ್ಞರು,ಆಧ್ಯಾತ್ಮಿಕ ನಾಯಕರು ಮತ್ತು ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಗುಂಪಿನೊಂದಿಗೆ ದೋಷಿಗಳನ್ನು ಭೇಟಿಯಾಗಿ ತಾವು ಮಾಡಿರುವ ಹೇಯ ಕೃತ್ಯದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಮೂಡಿಸುವ ಆಶಯವನ್ನು ಎನ್‌ಜಿಒ ಹೊಂದಿದೆ. ಸಾಮಾಜಿಕ ಕಲ್ಯಾಣಕ್ಕಾಗಿ ತಮ್ಮ ಅಂಗಾಂಗಗಳನ್ನು ದಾನ ಮಾಡುವಂತೆ ಅವರನ್ನು ಪ್ರೇರೇಪಿಸುವುದು ಭೇಟಿಯ ಉದ್ದೇಶವಾಗಿದೆ ಎಂದು ಅರ್ಜಿದಾರರ ಪರ ನ್ಯಾಯವಾದಿಗಳು ತಿಳಿಸಿದರಾದರೂ, ಅದನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News