ದೇಶದ ಮುಂದೆ ಪೊಲೀಸರ ಸಂಚು ತೆರೆದಿಟ್ಟ ವೀಡಿಯೊ ದೃಶ್ಯಗಳು

Update: 2020-01-11 05:54 GMT

ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದುದು ಏನು ಎನ್ನುವುದಕ್ಕೆ ಸಾಕ್ಷಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಚ್ಚಿ ಬೀಳಿಸುವ 35 ವಿವಿಧ ದೃಶ್ಯಗಳಿರುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಮಂಗಳೂರಿನಲ್ಲಿ ಗೋಲಿಬಾರ್ ನಡೆದಿರುವುದಕ್ಕೆ ಪೊಲೀಸರು ನೀಡಿರುವ ಎಲ್ಲ ಸಮರ್ಥನೆಗಳನ್ನು ಈ ವೀಡಿಯೊ ಗುಡಿಸಿ ಹಾಕಿದೆ. ‘ಮಂಗಳೂರಿನಲ್ಲಿ ಕೇರಳದಿಂದ ಆಗಮಿಸಿರುವ ದುಷ್ಕರ್ಮಿಗಳು ಗಲಭೆ ನಡೆಸಲು ಪೂರ್ವ ಯೋಜಿತ ಸಂಚು ನಡೆಸಿದ್ದರು’ ಎಂಬ ಪೊಲೀಸರ ಹೇಳಿಕೆ ಅವರಿಗೇ ತಿರುಗು ಬಾಣವಾಗಿದೆ. ಪೊಲೀಸರು ನಡೆಸಿದ ಗೋಲಿಬಾರ್‌ಗಳೇ ಪೂರ್ವ ಯೋಜಿತ ಎನ್ನುವುದನ್ನು ವೀಡಿಯೊ ಹೇಳುತ್ತಿದೆ. ಅಂದು ಹಿಂಸಾಚಾರ ನಡೆಯಲಿ, ನಡೆಯದಿರಲಿ, ಗೋಲಿಬಾರ್ ನಡೆಸಿಯೇ ಸಿದ್ಧ ಎಂಬಂತೆ ಸಿದ್ಧರಾಗಿ ಬಂದಿರುವುದು ಅವರ ವರ್ತನೆಗಳಿಂದ ಎದ್ದು ಕಾಣುತ್ತದೆ. ಕೈಯಲ್ಲಿ ಯಾವುದೇ ಕಲ್ಲು ಇನ್ನಿತರ ಆಯುಧಗಳಿಲ್ಲದ ಅಮಾಯಕ ವಿದ್ಯಾರ್ಥಿಗಳನ್ನು, ವ್ಯಾಪಾರಿಗಳನ್ನು, ಪ್ರಯಾಣಿಕರನ್ನು ಅತ್ಯಂತ ಬರ್ಬರವಾಗಿ ಪೊಲೀಸರು ಥಳಿಸುತ್ತಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ. ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳ ಕೈಯಲ್ಲಿ ಮಾರಕಾಯುಧಗಳಿದ್ದವು ಎನ್ನುವ ಪೊಲೀಸರ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ದೃಶ್ಯಗಳು ಅದರಲ್ಲಿಲ್ಲ. ಜೊತೆಗೆ ಪೊಲೀಸರೂ ಈವರೆಗೆ ಅಂತಹ ಯಾವುದೇ ವೀಡಿಯೊಗಳನ್ನು ಬಿಡುಗಡೆ ಮಾಡಿಲ್ಲ. ಪೊಲೀಸರು ನಡೆಸಿದ ದೌರ್ಜನ್ಯಗಳ ದೃಶ್ಯಗಳು ಸಾಮಾಜಿಕ ಜಾಲತಾಣವೂ ಸೇರಿದಂತೆ ರಾಷ್ಟ್ರಾದ್ಯಂತ ಹರಿದಾಡುತ್ತಿರುವಾಗ, ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡುವ, ಪೊಲೀಸ್ ಠಾಣೆಗೆ ದಾಳಿ ನಡೆಸುವ ಯಾವುದೇ ದೃಶ್ಯಗಳು ಪೊಲೀಸರಿಗೆ ಸಿಕ್ಕಿಲ್ಲ ಯಾಕೆ? ಕನಿಷ್ಠ ಪೊಲೀಸರ ಜೊತೆ ಜೊತೆಗೇ ಓಡಾಡುತ್ತಿದ್ದ ವಿವಿಧ ಪತ್ರಿಕೆಗಳ, ಟಿವಿ ಮಾಧ್ಯಮಗಳ ಛಾಯಾಗ್ರಾಹಕರಿಗಾದರೂ ಆ ದೃಶ್ಯಗಳು ಸಿಗಬೇಕಾಗಿತಲ್ಲ.

ಪೊಲೀಸರು ತಮ್ಮನ್ನು ಸಮರ್ಥಿಸಲು ಮುಂದಿಟ್ಟ ಒಂದು ಮುಖ್ಯ ವೀಡಿಯೊ, ಟೆಂಪೋದಲ್ಲಿದ್ದ ಕಲ್ಲುಗಳನ್ನು ಆಯ್ದು ಪ್ರತಿಭಟನಾಕಾರರು ಎಸೆಯುತ್ತಿರುವುದು. ಅಂದರೆ ‘ಗಲಭೆ ನಡೆಸುವುದಕ್ಕೆ ಮೊದಲೇ ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಟೆಂಪೋದಲ್ಲಿ ಕಲ್ಲುಗಳನ್ನು ತಂದಿರಿಸಲಾಗಿತು’್ತ ಎನ್ನುವುದು ಪೊಲೀಸರ ತರ್ಕವಾಗಿತ್ತು. ಆದರೆ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ವೀಡಿಯೊ ಆ ವಾದವನ್ನೇ ತಳ್ಳಿ ಹಾಕಿದೆ. ಆ ಟೆಂಪೋ ಚಾಲಕನೇ ವೀಡಿಯೊದಲ್ಲಿ ಮಾತನಾಡಿದ್ದಾರೆ ಮತ್ತು ಟೆಂಪೋದಲ್ಲಿದ್ದು ಮನೆಯೊಂದರ ಗೋಡೆಗಳ ಅವಶೇಷ. ‘ಅದನ್ನು ಸಾಗಿಸಲು ತಾನೆ ಅವನಿಗೆ ಹೇಳಿದ್ದೆ’ ಎಂದು ಮನೆ ಮಾಲಕರೂ ವೀಡಿಯೊದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಬೆಳಗ್ಗಿನಿಂದಲೇ ಆ ಅವಶೇಷಗಳನ್ನು ಆತ ಸಾಗಿಸುವ ಸಿಸಿ ಟಿವಿ ದೃಶ್ಯಗಳನ್ನೂ ಬಿಡುಗಡೆ ಮಾಡಲಾಗಿದೆ. ಗಲಾಟೆಯ ಹೊತ್ತಿಗೆ ಮಧ್ಯದಲ್ಲೇ ರಿಕ್ಷಾವನ್ನು ಗಲ್ಲಿಯ ಪಕ್ಕದಲ್ಲಿ ನಿಲ್ಲಿಸಿ ಚಾಲಕ ಹೋಗಿದ್ದಾರೆ. ಪ್ರತಿಭಟನೆಗೂ ಆ ಟೆಂಪೋ ರಿಕ್ಷಾಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ವೀಡಿಯೊ ಸ್ಪಷ್ಟವಾಗಿ ಹೇಳುತ್ತಿದೆ. ‘‘ಅನಿವಾರ್ಯವಾಗಿ ಜೀವರಕ್ಷಣೆಗಾಗಿ ಪೊಲೀಸರು ಗೋಲಿಬಾರ್ ಮಾಡಬೇಕಾಯಿತು’’ ಎನ್ನುವ ಪೊಲೀಸ್ ಆಯುಕ್ತರ ಸಮರ್ಥನೆಯೂ ಸುಳ್ಳೆನ್ನುವುದು ವೀಡಿಯೊ ತಿಳಿಸಿದೆ. ಕಾನೂನು ಸುವ್ಯವಸ್ಥೆ ಅವರ ಗುರಿಯೇ ಆಗಿರಲಿಲ್ಲ. ಮೊದಲು ಅವರು ಲಾಠಿ ಚಾರ್ಜ್ ಮತ್ತು ಹಿಂಸೆಯ ಮೂಲಕ ಸಾರ್ವಜನಿಕರನ್ನು ಪ್ರಚೋದಿಸಿರುವ ದೃಶ್ಯಗಳು ಕಂಡು ಬರುತ್ತವೆ. ಪೊಲೀಸರೇ ಕಲ್ಲುಗಳನ್ನೆತ್ತಿ ಸಾರ್ವಜನಿಕರಿಗೆ ಎಸೆಯುತ್ತಿರುವುದೂ ವೀಡಿಯೊಗಳಲ್ಲಿವೆ. ಈ ಮೂಲಕ ಪೊಲೀಸರೇ ಸಾರ್ವಜನಿಕರಿಗೆ ಕಲ್ಲೆಸೆಯುವುದಕ್ಕೆ ಪ್ರೋತ್ಸಾಹವನ್ನು ನೀಡಿದ್ದಾರೆ. ಗೋಲಿಬಾರ್ ನಡೆಸುವಂತಹ ಅನಾಹುತಗಳು ಅಲ್ಲಿ ನಡೆದೇ ಇರಲಿಲ್ಲ. ಬದಲಿಗೆ ಪೊಲೀಸರೇ ಗೋಲಿಬಾರ್ ನಡೆಸಲು ಸಿದ್ಧರಾಗಿ ಬಂದಂತೆ ಇತ್ತು. ಪ್ರತಿಭಟನಾಕಾರರ ಕುರಿತಂತೆ ವೈಯಕ್ತಿಕವಾಗಿ ಅವರಿಗಿದ್ದ ಅಸಹನೆಗಳೇ ಗೋಲಿಬಾರ್‌ಗೆ ಕಾರಣವಾಯಿತು ಎನ್ನುವುದನ್ನೂ ವೀಡಿಯೊ ಹೇಳುತ್ತಿದೆ.

ವೀಡಿಯೊದಲ್ಲಿ ಗೋಲಿಬಾರ್‌ಗೆ ಆದೇಶ ನೀಡುವ ಅಧಿಕಾರಿ ‘‘ಅವರ ಗುಪ್ತಾಂಗಕ್ಕೆ ಗುಂಡು ಬೀಳಬೇಕು....’’ ಎಂದು ಸಲಹೆ ಕೊಡುವುದೂ ವೀಡಿಯೊದಲ್ಲಿದೆ. ಇನ್ನೊಂದೆಡೆ ಮೇಲಧಿಕಾರಿ ಕೈ ಹಿಡಿದು ಎಳೆಯುತ್ತಿದ್ದಾಗ ‘‘ಒಂದು ಬೀಳಲಿ ಸಾರ್...ಒಂದು ಬೀಳಲಿ ಸಾರ್...’’ ಎಂದು ಹೇಳಿ ಗುಂಡು ಹಾರಿಸುತ್ತಿರುವ ಪೊಲೀಸರು ವೀಡಿಯೊದಲ್ಲಿ ದಾಖಲಾಗಿದ್ದಾರೆ. ಮಗದೊಂದೆಡೆ ‘‘ಇಷ್ಟು ಗುಂಡು ಹಾರಿಸಿದರೂ ಒಬ್ಬರೂ ಸಾಯಲಿಲ್ಲವಲ್ಲ....’’ ಎಂದು ಮೇಲಧಿಕಾರಿಗಳು ಕಿರಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯಗಳಿವೆ. ಇವೆಲ್ಲವೂ, ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸುವುದಕ್ಕಲ್ಲ, ‘ನಿರ್ದಿಷ್ಟ ಸಮುದಾಯದ ಜನರನ್ನು ಕೊಂದು ಹಾಕುವುದಕ್ಕಾಗಿಯೇ’ ಗುಂಡು ಹಾರಿಸಿದ್ದರು ಎನ್ನುವುದನ್ನು ಹೇಳುತ್ತದೆ. ಕೆಲವೆಡೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದಾರಾದರೂ, ಪೊಲೀಸರು ಕಲ್ಲು ತೂರಾಟದಿಂದ ಗಾಯಗೊಂಡ ಯಾವುದೇ ದೃಶ್ಯಗಳೂ ಇಲ್ಲ. ಆದರೆ ಪೊಲೀಸರ ಕ್ರೌರ್ಯದ ಪರಮಾವಧಿಗೆ ಅಮಾಯಕರು ತಲೆ ಒಡೆದು ರಕ್ತ ಸುರಿಸಿ ಬೀದಿಯಲ್ಲಿ ಬೀಳುವ ದೃಶ್ಯಗಳನ್ನು ವೀಡಿಯೊ ಹೊಂದಿದೆೆ. ಒಬ್ಬ ಮಾಜಿ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ವೀಡಿಯೊಗಳಾಗಿರುವ ಕಾರಣ, ಇವುಗಳಿಗೆ ತಕ್ಷಣ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಬೇಕಾಗಿತ್ತು. ಒಂದು ವೇಳೆ ಅದು ನಕಲಿಯಾಗಿದ್ದರೆ, ಅದನ್ನಾದರೂ ಹೇಳಬಹುದಿತ್ತು. ಆದರೆ ಇಡೀ ಪೊಲೀಸ್ ಇಲಾಖೆ ವೌನವಾಗಿ ಆ ವೀಡಿಯೊವನ್ನು ಒಪ್ಪಿಕೊಂಡಿದೆ.

ಈ ವೀಡಿಯೊ ಬಿಡುಗಡೆಯಾಗಿರುವ ದಿನವೇ ಮುಖ್ಯಮಂತ್ರಿ ಯಡಿಯೂರಪ್ಪ ‘‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾದರೆ ನಾನು ಜವಾಬ್ದಾರಿ’’ ಎಂದು ಹೇಳಿದ್ದಾರೆ. ಬಿಜೆಪಿಯೊಳಗೆ ಅವರಿಗಾಗುತ್ತಿರುವ ತೊಂದರೆಯನ್ನೇ ಸರಿಪಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿರುವ ಯಡಿಯೂರಪ್ಪ ಪೌರತ್ವ ಕಾಯ್ದೆಗೆ ತಾನು ಜವಾಬ್ದಾರಿ ಎಂದು ಹೇಳಿರುವುದೇ ಹಾಸ್ಯಾಸ್ಪದವಾಗಿದೆ. ಒಂದು ವೇಳೆ ಅಂತಹ ಜವಾಬ್ದಾರಿ ವಹಿಸುವವರೇ ಆಗಿದ್ದರೆ, ಈ ವೀಡಿಯೊಗಳನ್ನು ನೋಡಿದ ಬಳಿಕವಾದರೂ ಮಂಗಳೂರು ಪೊಲೀಸ್ ಆಯುಕ್ತರನ್ನು ವಜಾಗೊಳಿಸಿ, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬಹುದಿತ್ತು. ಗೋಲಿಬಾರ್‌ನಿಂದ ಮೃತಪಟ್ಟ ಸಂತ್ರಸ್ತರ ಕುಟುಂಬಗಳೊಂದಿಗೆ ಕ್ಷಮೆಯಾಚಿಸಿ ಪರಿಹಾರವನ್ನು ಅವರು ಮರಳಿಸಬೇಕಾಗಿತ್ತು. ಆದರೆ ಅಂತಹದು ಯಾವುದೂ ಸಂಭವಿಸಿಲ್ಲ. ಹೀಗಿರುವಾಗ, ಮುಖ್ಯಮಂತ್ರಿಯ ‘ನಾನು ಜವಾಬ್ದಾರಿ’ ಎಂಬ ಹೇಳಿಕೆಯನ್ನು ಜನಸಾಮಾನ್ಯರು ನಂಬುವುದು ಹೇಗೆ? ಸರಕಾರ ಇನ್ನೂ ನ್ಯಾಯಾಂಗ ತನಿಖೆಗೆ ತಡ ಮಾಡುತ್ತದೆ ಎಂದಾದರೆ, ಇಡೀ ಪ್ರಕರಣದ ಹಿಂದೆ ಸರಕಾರವೇ ಶಾಮೀಲಾಗಿದೆ ಎಂದು ಭಾವಿಸಬೇಕಾಗುತ್ತದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಸಿಎಎ ವಿರುದ್ಧದ ಪ್ರತಿಭಟನೆ ತೀವ್ರವಾಗುತ್ತಿದೆ. ಮಂಗಳೂರಿನಲ್ಲಿ ಪೊಲೀಸರು ಹಾಡಹಗಲೇ ನಡೆಸಿದ ಹಿಂಸಾಚಾರವನ್ನು ಕಂಡೂ ವೌನವಾಗಿ ಉಳಿದರೆ, ಅದು ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತೈಲವನ್ನು ಸುರಿದಂತಾಗಬಹುದು. ಆದುದರಿಂದ, ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರು ಪೊಲೀಸ್ ಹಿಂಸಾಚಾರದ ಕುರಿತು ತನ್ನ ವೌನವನ್ನು ಮುರಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News