ಖಾಸಗಿ ಬಸ್ ನಿರ್ವಾಹಕರಿಗೊಂದು ಪತ್ರ

Update: 2020-01-12 18:03 GMT

ಮಾನ್ಯರೇ,

ನಾನು ದಿನಾ ಬಸ್ಸಲ್ಲಿ ಪ್ರಯಾಣಿಸುವ ಓರ್ವ ಪ್ರಯಾಣಿಕ. ನನ್ನ ಗಮನಕ್ಕೆ ಬಂದ ಒಂದು ವಿಚಾರವನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಸರಕಾರಿ ಬಸ್‌ಗಳಲ್ಲಿ ನಿರ್ವಾಹಕರು ಬಸ್‌ನ ಒಳಗಡೆ ಇದ್ದು, ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ಬಸ್ಸಿನ ಬಾಗಿಲಿನಲ್ಲಿ ನಿಲ್ಲುವ ಕ್ರಮವಿಲ್ಲ. ಬಸ್ ನಿಂತ ತಕ್ಷಣ ಕಂಡಕ್ಟರ್ ಹೆಚ್ಚಾಗಿ ಬಸ್‌ನ ಒಳಗಡೆ ಇರುತ್ತಾರೆ. ಕೆಳವೊಮ್ಮ ಕೆಳಗೆ ಇಳಿದು ಮತ್ತೆ ಹತ್ತುತ್ತಾರೆ ಮತ್ತು ಪ್ರಯಾಣಿಕರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಖಾಸಗಿ ಬಸ್ ನಿರ್ವಾಹಕರು ಮತ್ತು ಅವರ ಸಹಾಯಕರು ಬಸ್‌ನ ಎರಡೂ ಬಾಗಿಲಿನಲ್ಲೇ ನಿಂತಿರುತ್ತಾರೆ. ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ಇವರನ್ನು ತಾಗಿಕೊಂಡೇ ಇಳಿಯಬೇಕು, ಹತ್ತಬೇಕು. ಬಸ್‌ನ ಬಾಗಿಲು ಇರುವುದು 2 ಅಡಿ ಅಗಲ. ಇಂತಹದ್ದರಲ್ಲಿ ಬಸ್ ಸಿಬ್ಬಂದಿ ಬಾಗಿಲಿನಲ್ಲಿ ಏಕೆ ನಿಲ್ಲಬೇಕು? ಖಾಸಗಿ ಬಸ್ ಅಂದರೆ ಮಂಗಳೂರಿನ ಸಿಟಿ ಬಸ್ ಮತ್ತು ಪುತ್ತೂರು, ಉಪ್ಪಿನಂಗಡಿ ಮುಂತಾದ ಕಡೆ ಸಂಚರಿಸುವ ಬಸ್‌ಗಳ ವಿಚಾರವನ್ನು ಹೇಳುತ್ತಿದ್ದೇನೆ.

ಸಮಯ ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ಪ್ರಯಾಣಿಕರು ಇಳಿಯುವಾಗ ಮತ್ತು ಹತ್ತುವಾಗ ವಿಪರೀತ ತುರ್ತು, ಪ್ರಯಾಣಿಕರಲ್ಲಿ ಮಿಂಚಿನ ಚಲನೆ ಇರಬೇಕು. ನಿರ್ವಾಹಕರಿಗೆ ಬಸ್ ಹತ್ತುವಾಗ ಪ್ರಯಾಣಿಕರಲ್ಲಿರುವ ಪ್ರೀತಿ ಇಳಿಯುವಾಗ ಇರುವುದಿಲ್ಲ. ಕೆಲವು ಬಸ್‌ಗಳಲ್ಲಿ ಮಹಿಳೆಯರು ಮತ್ತು ಹಿರಿಯರು ಸ್ವಲ್ಪ ನಿಧಾನವಾಗಿ ಚಲಿಸುವುದನ್ನು ಕಂಡರೆ ಬಸ್‌ನ ಸಿಬ್ಬಂದಿ ಗದರಿಸುವುದು ಕೂಡ ನಡೆಯುತ್ತದೆ. ಇನ್ನು ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಹೊರಡುವ ಸರಕಾರಿ ಬಸ್‌ಗಳಲ್ಲಿ ನಿಯಮಿತ ನಿಲುಗಡೆ ಇರುವ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌ಗಳಿಗೆ ಅವಕಾಶ ಕೊಡುತ್ತಿರಲಿಲ್ಲ. ಸುಮಾರು ಒಂದು ವರ್ಷದ ಹಿಂದೆ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಯಿತು. ಸದ್ರಿ ಸರಕಾರಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಬಂದ ತಕ್ಷಣ ವಿದ್ಯಾರ್ಥಿನಿಯರು ಬಸ್‌ನ ಪ್ರತಿ ಕಿಟಕಿ ಸೀಟ್‌ನಲ್ಲಿ ಒಬ್ಬರಂತೆ ಕುಳಿತುಕೊಳ್ಳುತ್ತಾರೆ. ಇದರಿಂದ ಬಳಿಕ ಬಸ್ ಹತ್ತುವ ಪುರುಷರಿಗೆ ಮಹಿಳಾ ಸೀಟಿನಲ್ಲಿ ಕುಳಿತುಕೊಳ್ಳುವಂತೆಯೂ ಇಲ್ಲ, ಬೇರೆ ಸೀಟ್‌ನಲ್ಲೂ ಕುಳಿತುಕೊಳ್ಳುವಂತೆಯೂ ಇಲ್ಲ. ಒಟ್ಟಿನಲ್ಲಿ ಇದೊಂದು ಹೊಸ ಪ್ರಯಾಣ ಸಂಕಟ. ಇದರತ್ತ ಕೂಡ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ. 

Writer - ಡಿ.ಕೆ. ಇಬ್ರಾಹೀಂ ಕಲ್ಲಡ್ಕ

contributor

Editor - ಡಿ.ಕೆ. ಇಬ್ರಾಹೀಂ ಕಲ್ಲಡ್ಕ

contributor

Similar News