ಸೆರೆನಾ ವಿಲಿಯಮ್ಸ್ ಆಕ್ಲೆಂಡ್ ಚಾಂಪಿಯನ್

Update: 2020-01-12 18:19 GMT

ಆಕ್ಲೆಂಡ್, ಜ.12: ಅಮೆರಿಕದ ಸೆರೆನಾ ವಿಲಿಯಮ್ಸ್ ಸುಮಾರು ಮೂರು ವರ್ಷಗಳಲಿ ಡಬ್ಲ್ಯುಟಿಎ ಪಂದ್ಯಾವಳಿಯಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಜಯಸುವ ಮೂಲಕ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದ್ದಾರೆ.

ನ್ಯೂಝಿಲ್ಯಾಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಆಕ್ಲೆಂಡ್ ಕ್ಲಾಸಿಕ್ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ 23 ಬಾರಿ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಸಿರುವ 38ರ ಹರೆಯದ ಸೆರೆನಾ ಆಸ್ಟ್ರೇಲಿಯನ್ ಓಪನ್‌ಗೆ ತಯಾರಿ ನಡೆಸಿದ್ದಾರೆ.

    ರವಿವಾರ ನಡೆದ ಎಎಸ್‌ಬಿ ಕ್ಲಾಸಿಕ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ತನ್ನ ದೇಶದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಂಡರು. ಸೆಪ್ಟಂಬರ್ 1, 2017 ರಂದು ಮಗಳು ಒಲಿಂಪಿಯಾ ಹುಟ್ಟಿದ ಬಳಿಕ ಸೆರಾನಾ ವಿಲಿಯಮ್ಸ್ ಆಡಿದ ತನ್ನ ಹಿಂದಿನ ಐದು ಫೈನಲ್‌ಗಳನ್ನು ಕಳೆದುಕೊಂಡಿದ್ದರು. ಅದಕ್ಕೂ ಮೊದಲು ಅವರು ವೃತ್ತಿಜೀವನದಲ್ಲಿ ಸತತ ಎರಡು ಫೈನಲ್‌ಗಳನ್ನು ಕಳೆದುಕೊಂಡಿರಲಿಲ್ಲ. ಪ್ರಶಸ್ತಿ ಜಯಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಸೆರೆನಾ ‘‘ನನಗೆ ಸಂತಸವಾಗಿದೆ. ಇದು ಬಹಳ ಸಮಯವಾಗಿದೆ’’ ಎಂದರು. ಸೆರೆನಾ ವಿಲಿಯಮ್ಸ್ ತನ್ನ ವೃತ್ತಿಜೀವನದ 73 ನೇ ಪ್ರಶಸ್ತಿಯೊಂದಿಗೆ ಬಿಲಿಟಿ ಜೀನ್ ಕಿಂಗ್ (39) ಮತ್ತು ಕಿಮಿಕೊ ಡೇಟ್-ಕ್ರುಮ್ (38) ಬಳಿಕ ಡಬ್ಲುಟಿಎ ಪಂದ್ಯಾವಳಿಯನ್ನು ಗೆದ್ದ ಮೂರನೇ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮತ್ತು ನಾಲ್ಕು ವಿಭಿನ್ನ ದಶಕಗಳಲ್ಲಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ್ತಿ ಎನಿಸಿಕೊಂಡರು.

  ಜನವರಿ 20 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆರೆನಾ ಪ್ರಶಸ್ತಿಯ ಕಡೆಗೆ ಕಣ್ಣಿಟ್ಟಿದ್ದಾರೆ.

ಸೆರೆನಾರಿಗೆ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಲು ಸೆರೆನಾ ವಿಲಿಯಮ್ಸ್ ಇನ್ನೊಂದು ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಬೇಕಾಗಿದೆ.

ಸೆರೆನಾ ವಿಲಿಯಮ್ಸ್ ಏಳು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2017 ರ ಜನವರಿಯಲ್ಲಿ ಕೊನೆಯ ಬಾರಿ ಗ್ರಾನ್ ಸ್ಲಾಮ್ ಜಯಿಸಿದ್ದರು. ಎಂಟು ವಾರಗಳ ಗರ್ಭಿಣಿಯಾಗಿದ್ದಾಗ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಹೋದರಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿ ಪ್ರಶಸ್ತಿ ಬಾಚಿಕೊಂಡಿದ್ದರು. ಸೆರೆನಾ ವಿಲಿಯಮ್ಸ್ ಈ ವರ್ಷವನ್ನು ವಿಶ್ವ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದೊಂದಿಗೆ ಆರಂಭಿಸಿದ್ದರು ಮತ್ತು ಯುಎಸ್, ಒಲಿಂಪಿಕ್ ಅರ್ಹತಾ ಸ್ಥಾನಗಳಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಆಸ್ಟ್ರೇಲಿಯದ ಅಗ್ನಿ ಸಂತ್ರಸ್ತರಿಗೆ ಪ್ರಶಸ್ತಿಯ ಮೊತ್ತ ಅರ್ಪಣೆ: ಆಕ್ಲೆಂಡ್ ಕ್ಲಾಸಿಕ್ ಪ್ರಶಸ್ತಿಯನ್ನು ಜಯಿಸಿರುವ ಸೆರೆನಾ ವಿಲಿಯಮ್ಸ್ ತನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು (43,000 ಯುಎಸ್ ಡಾಲರ್) ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.

ನಾನು 20 ವರ್ಷಗಳಿಂದ ಆಸ್ಟ್ರೇಲಿಯದಲ್ಲಿ ಆಡುತ್ತಿದ್ದೇನೆ ಮತ್ತು ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚಿನಿಂದ ಪ್ರಾಣಿಗಳು ಬಲಿಯಾಗಿವೆೆ. ಮತ್ತು ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ನಾನು ಪಂದ್ಯಾವಳಿಯ ಆರಂಭದಲ್ಲೇ ನಾನು ಜಯಿಸಿದರೆ ಪ್ರಶಸ್ತಿಯ ಮೊತ್ತವನ್ನು ಪರಿಹಾರ ನಿಧಿಗೆ ಅರ್ಪಿಸಲು ನಿರ್ಧರಿಸಿದ್ದೆ. ನನ್ನ ಬಹುಮಾನದ ಹಣವನ್ನು ಒಳ್ಳೆಯ ಕಾರ್ಯಕ್ಕಾಗಿ ದಾನ ಮಾಡುತ್ತೇನೆ ಎಂದು ಸೆರೆನಾ ಹೇಳಿದ್ದಾರೆ.

ಪ್ರಶಸ್ತಿಯ ಹಣವನ್ನು ದಾನ ಮಾಡುವುದರ ಜೊತೆಗೆ ಸೆರೆನಾ ವಿಲಿಯಮ್ಸ್ ಅವರುಆಕ್ಲೆಂಡ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಧರಿಸಿದ್ದ ಉಡುಗೆಯನ್ನು ಆಸ್ಟ್ರೇಲಿಯದ ಮನವಿಗೆ ಹಣ ಸಂಗ್ರಹಿಸಲು ಅದನ್ನು ಹರಾಜಿಗೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News