ಕನ್ನಡ ದ್ರೋಹಿಗಳಿಂದ ಕನ್ನಡಮ್ಮನಿಗೆ ‘ಪೆಟ್ರೋಲ್ ಬಾಂಬ್’ ಬೆದರಿಕೆ!

Update: 2020-01-13 05:53 GMT

ಒಂದು ಕಾಲವಿತ್ತು. ಸಮಾಜದ ಶಾಂತಿಯನ್ನು ಕೆಡಿಸುವ ಕಿಡಿ ಹಾರಿಸುವ ಯಾವುದೇ ಸಮಾವೇಶಗಳಿಗೆ ಅನುಮತಿ ನೀಡಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿತ್ತು. ನಿಧಾನಕ್ಕೆ ಇಂತಹ ರಾಜಕೀಯ ಸಮಾವೇಶಗಳು ‘ಹಿಂದೂ ಸಮಾಜೋತ್ಸವ’ ಎಂಬ ಹೆಸರಲ್ಲಿ ಬೀದಿಗಿಳಿದವು. ಸಮಾಜ ಒಡೆಯುವ ತಮ್ಮ ದ್ವೇಷ ಭಾಷಣಗಳಿಗೆ ಹಿಂದೂ ಧರ್ಮವನ್ನು ದುರ್ಬಳಕೆ ಮಾಡಿಕೊಂಡರು. ‘ಹಿಂದೂ ಸಮಾಜೋತ್ಸವದಲ್ಲಿ ಹಿಂದೂಗಳ ಅಭಿವೃದ್ಧಿ, ದಲಿತರ ಸಾಮಾಜಿಕ ಸ್ಥಿತಿಗತಿ, ಬಿಲ್ಲವರನ್ನು ಕಾಡುವ ನಿರುದ್ಯೋಗ’ ಇತ್ಯಾದಿಗಳು ಚರ್ಚೆಯಾಗುತ್ತಿರಲಿಲ್ಲ ಅಥವಾ ಹಿಂದೂ ಧರ್ಮ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮಗಳೂ ವೇದಿಕೆಯಲ್ಲಿ ನಡೆಯುತ್ತಿರಲಿಲ್ಲ. ಹಿಂದೂ ಧರ್ಮದ ಉತ್ಸವದ ಹೆಸರಿನಲ್ಲಿ ಇತರ ಧರ್ಮಗಳನ್ನು ಬಹಿರಂಗವಾಗಿ ನಿಂದಿಸಿ, ಸಾರ್ವಜನಿಕರನ್ನು ಪ್ರಚೋದಿಸುವುದೇ ಇದರ ಗುರಿಯಾಗಿತ್ತು. ಹಿಂದೂ ಧರ್ಮದ ಅಮೃತದ ಬದಲಿಗೆ ರಾಜಕೀಯದ ಕಾರ್ಕೋಟಕ ವಿಷವನ್ನು ಹಿಂದೂ ಧರ್ಮದ ಹೆಸರಲ್ಲಿ ಹರಡುತ್ತಿದ್ದರು. ಪೊಲೀಸ್ ಇಲಾಖೆಗಳೂ ಇದನ್ನು ಅಸಹಾಯಕವಾಗಿ ನೋಡುವ ಸ್ಥಿತಿ ನಿರ್ಮಾಣವಾಯಿತು. ಇಂದು ವ್ಯತಿರಿಕ್ತವಾದ ಸನ್ನಿವೇಶಗಳನ್ನು ಸಮಾಜದಲ್ಲಿ ಕಾಣಬಹುದು.

ಇತ್ತೀಚೆಗಷ್ಟೇ ಉಡುಪಿಯಲ್ಲಿ ಮುಸ್ಲಿಮರು ಮತ್ತು ಬಿಲ್ಲವ ಸಮಾಜದ ನಾಯಕರು ‘ಸೌಹಾರ್ದ ಸಮಾವೇಶ’ವೊಂದನ್ನು ಹಮ್ಮಿಕೊಳ್ಳಲು ಮುಂದಾದರು. ವಿಪರ್ಯಾಸವೆಂದರೆ ‘ಸೌಹಾರ್ದ ಸಮಾವೇಶ’ದಿಂದ ಸಮಾಜ ಒಡೆಯುತ್ತದೆ ಎಂದು ನಿರ್ದಿಷ್ಟ ಸಂಘಟನೆಯೊಂದು ಬೆದರಿಕೆಗಳನ್ನು ಹಾಕಿತು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇಂದು ಸ್ಥಿತಿ ಹೇಗಿದೆಯೆಂದರೆ, ಉದ್ವಿಗ್ನಕಾರಿ ಭಾಷಣಗಳನ್ನು ಬೀದಿ ಬೀದಿಗಳಲ್ಲಿ ಮಾಡಬಹುದು. ಆದರೆ ‘ಸೌಹಾರ್ದ ಸಮಾವೇಶ’ಗಳನ್ನು ‘ಸಮಾಜವನ್ನು ಒಡೆಯುತ್ತಾರೆ’ ಎಂಬ ಹೆಸರಿನಲ್ಲಿ ನಿಷೇಧಿಸಲಾಗುತ್ತದೆ. ಬಿಲ್ಲವರು ಮತ್ತು ಮುಸ್ಲಿಮರ ನಡುವೆ, ದಲಿತರು ಮತ್ತು ಬಿಲ್ಲವರ ನಡುವೆ...ಹೀಗೆ ವಿವಿಧ ಸಮುದಾಯಗಳ ನಡುವೆ ಸೌಹಾರ್ದ ಸೃಷ್ಟಿಯಾಗುವುದರ ಕುರಿತಂತೆಯೇ ನಿರ್ದಿಷ್ಟ ಸಂಘಟನೆಗಳಿಗೆ ಆತಂಕವಿದೆ ಎನ್ನುವುದನ್ನು ಇದು ಹೇಳುತ್ತದೆ. ಆದುದರಿಂದಲೇ, ‘ಸ್ನೇಹ’ ‘ಸೌಹಾರ್ದ’ ಮೊದಲಾದ ಪದಗಳು ನಿಧಾನಕ್ಕೆ ನಿಷೇಧಕ್ಕೆ ಒಳಗಾಗುವ ಹಂತದಲ್ಲಿವೆ. ಈ ನಿರ್ದಿಷ್ಟ ಸಂಘಟನೆಗಳ ‘ದ್ವೇಷದ ದಿಗ್ವಿಜಯ’ ಮುಂದುವರಿದಿದೆ.

ಚಿಕ್ಕಮಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಡೆಯಲು ಗರಿಷ್ಠ ಪ್ರಯತ್ನವನ್ನು ಮಾಡಿತು. ಸಾಹಿತ್ಯ ಸಮ್ಮೇಳನದ ವಿರುದ್ಧ ಈ ನಾಡಿನ ಕನ್ನಡ ಮತ್ತು ಸಂಸ್ಕೃತಿ ಸಚಿವರೇ ಯುದ್ಧ ಹೂಡಿದ್ದು ವಿಶೇಷವಾಗಿದೆ. ಪೊಲೀಸರು, ರಾಜಕಾರಣಿಗಳ ಬೆದರಿಕೆಗಳ ನಡುವೆಯೇ ಮೊದಲ ದಿನದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಸರಕಾರದ ಹಣವನ್ನೇ ನಿರಾಕರಿಸಿ, ಜನಸಾಮಾನ್ಯರೇ ಹಣಸಂಗ್ರಹಿಸಿ ನಡೆಸಿದ ಅರ್ಥಪೂರ್ಣವಾದ ‘ಜನಸಮ್ಮೇಳನ’ವಾಯಿತು. ಸಮ್ಮೇಳನಾಧ್ಯಕ್ಷರೂ ತಮ್ಮ ಭಾಷಣವನ್ನು ‘ಪಂಪ ರನ್ನ ಪೊನ್ನ’ರಿಗೆ ಸೀಮಿತಗೊಳಿಸದೇ ಮಲೆನಾಡಿನ ಜನಸಾಮಾನ್ಯರ ಸಮಸ್ಯೆಗಳೆಡೆಗೆ ಬೆಳಕು ಚೆಲ್ಲಲು ಯಶಸ್ವಿಯಾದರು. ಮಲೆ ನಾಡಿನ ಉದ್ಧಾರಕ್ಕೆ ಹಲವು ಮಹತ್ವದ ಸಲಹೆಗಳನ್ನೂ ನೀಡಿದರು.ಇಡೀ ಸಮ್ಮೇಳನದಲ್ಲಿ ನಾಡು ನುಡಿಯ ಹಿರಿಮೆಯನ್ನು ಎತ್ತಿ ಹಿಡಿಯಲಾಯಿತು. ಯಾವುದೇ ರಾಜಕೀಯ ಭಾಷಣಗಳೋ, ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ವಿಚಾರ ಸಂಕಿರಣಗಳೋ ಅಲ್ಲಿ ನಡೆದಿರಲಿಲ್ಲ. ಆದರೆ ಮರುದಿನದ ಸಮ್ಮೇಳನವನ್ನು ‘ಪೊಲೀಸರ ಬೆದರಿಕೆ’ಯ ಕಾರಣಕ್ಕಾಗಿ ಸ್ಥಗಿತಗೊಳಿಸಲಾಯಿತು.

ಪೊಲೀಸರು ಹಾಕಿರುವ ಬೆದರಿಕೆಯೇ ಹಾಸ್ಯಾಸ್ಪದವಾಗಿದೆ. ‘‘ಸಮ್ಮೇಳನವನ್ನು ಕೆಡಿಸಲು ಸಾವಿರಾರು ಜನರು ಆಗಮಿಸುವ ಸಾಧ್ಯತೆಗಳಿವೆ. ಅವರು ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ದಾಳಿ ನಡೆಸಬಹುದು. ಭದ್ರತೆಯ ಕಾರಣದಿಂದ ಪೊಲೀಸರು ಸಮ್ಮೇಳನಕ್ಕೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಸಮ್ಮೇಳನ ನಡೆಸಿದರೆ ಆಗುವ ಎಲ್ಲ ಅನಾಹುತಗಳಿಗೂ ಸಂಘಟಕರನ್ನೇ ಹೊಣೆ ಮಾಡಿ ಅವರ ಮೇಲೆ ಮೊಕದ್ದಮೆ ಹೂಡಲಾಗುವುದು’’ ಎಂದು ಪೊಲೀಸ್ ಇಲಾಖೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರನ್ನು ಬೆದರಿಸಿದೆ. ಈ ಸಮ್ಮೇಳನ ನಡೆಯಬಾರದು ಎನ್ನುವ ಶಕ್ತಿಯ ನೇತಾರ ಯಾರು ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಿದೆ. ಒಂದು ವೇಳೆ ದುಷ್ಕರ್ಮಿಗಳು ಸಾಹಿತ್ಯ ಸಮ್ಮೇಳನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸುತ್ತಾರೆ ಎಂದಾದರೆ, ಅದರ ಹಿಂದಿರುವವರನ್ನು ಗುರುತಿಸಿ ಅವರಿಗೆ ಎಚ್ಚರಿಕೆಯನ್ನು ನೀಡಬೇಕೇ ಹೊರತು ಸಂಘಟಕರಿಗಲ್ಲ. ಇಷ್ಟಕ್ಕೂ ಸಂಘಟಕರು ಹಮ್ಮಿಕೊಂಡಿರುವುದು ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡದ ನೆಲದಲ್ಲಲ್ಲದೇ ಹೊರ ರಾಜ್ಯಗಳಲ್ಲಿ ಹೋಗಿ ಹಮ್ಮಿಕೊಳ್ಳಲು ಸಾಧ್ಯವೇ? ಈಗಾಗಲೇ ಕನ್ನಡ ನೆಲವನ್ನು ಹಿಂದಿ ಆಹುತಿ ತೆಗೆದುಕೊಳ್ಳುತ್ತಿದೆ. ಬಿಜೆಪಿ ಬಹಿರಂಗವಾಗಿಯೇ ಹಿಂದಿ ಭಾಷೆಗೆ ಕೊಡೆ ಹಿಡಿಯುತ್ತಿದೆ. ನಮ್ಮ ಸಚಿವರೂ ಹಿಂದಿಯನ್ನು ಪರೋಕ್ಷವಾಗಿ ಆಹ್ವಾನಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರನ್ನು ನೆಪವಾಗಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಸಚಿವರು ಚಿಕ್ಕಮಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಯದಂತೆ ನೋಡಿಕೊಂಡರೇ? ಅಂದರೆ ಮುಂದಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೂ ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ಅಂಗಲಾಚುವುದು ರಾಜ್ಯದಾದ್ಯಂತ ಅನಿವಾರ್ಯವಾಗಲಿದೆಯೇ? ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿಗಳು ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳ ಭಿಕ್ಷೆಯಾಗಿ ಮಾರ್ಪಡಲಿದೆಯೇ? ಎನ್ನುವ ಆತಂಕ ರಾಜ್ಯದ ಸಾಹಿತಿಗಳನ್ನು ಮಾತ್ರವಲ್ಲ, ಸಾಹಿತ್ಯಾಭಿಮಾನಿಗಳನ್ನು ಕಾಡುತ್ತಿದೆ. ಸಾಹಿತ್ಯ ಸಮ್ಮೇಳನವೆಂದರೆ ಕನ್ನಡ ತಾಯಿಯ ಸೇವೆ. ಸರ್ವ ಕನ್ನಡಿಗರು ಸೇರಿ ನಡೆಸಬೇಕಾದ ಈ ಸೇವೆಗೆ ಪೊಲೀಸರು ಕೈಜೋಡಿಸುವುದು ಅತ್ಯಗತ್ಯ. ಒಂದು ವೇಳೆ ಈ ಸಮ್ಮೇಳನಕ್ಕೆ ಯಾರಾದರೂ ಬೆದರಿಕೆ ಒಡ್ಡುತ್ತಾರೆ, ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಸಾರ್ವಜನಿಕರಿಗೆ ಹಾನಿ ಮಾಡುತ್ತಾರೆ ಎಂದರೆ ಅಂತಹ ಕನ್ನಡ ದ್ರೋಹಿಗಳನ್ನು ಹಿಡಿದು ಜೈಲಿಗೆ ತಳ್ಳುವುದು ಪೊಲೀಸ್ ಇಲಾಖೆಯ ಹೊಣೆಗಾರಿಕೆಯಾಗುತ್ತದೆ.

ದುರದೃಷ್ಟವಶಾತ್, ಸಮ್ಮೇಳನ ನಡೆಸಿದರೆ ‘ಸಂಘಟಕರ ಮೇಲೆಯೇ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಪೊಲೀಸರು ಹೇಳಿಕೆ ನೀಡಿ ಸಮ್ಮೇಳನ ನಡೆಯದಂತೆ ನೋಡಿಕೊಂಡರು. ‘ಪೆಟ್ರೋಲ್ ಬಾಂಬ್’ನ್ನು ಸಾಹಿತ್ಯ ಸಮ್ಮೇಳನದಲ್ಲಿ ಸ್ಫೋಟಿಸುವುದಿರಲಿ, ಅದನ್ನು ಹೊಂದುವುದು, ಬೆದರಿಸುವುದೇ ಉಗ್ರವಾದವಾಗಿದೆ. ತಕ್ಷಣ ಆ ಬೆದರಿಕೆಯ ಮೂಲವನ್ನು ಹುಡುಕಿ ಕನ್ನಡ ತಾಯಿಯ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಹೊರಟ ಕಿರಾತಕರನ್ನು ಬಂಧಿಸಬೇಕು. ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಹೊರಟವರು, ಪರೋಕ್ಷವಾಗಿ ಕನ್ನಡ ನಾಡು, ನುಡಿ ಸಂಸ್ಕೃತಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಕುರಿತಂತೆ ತುಟಿ ಬಿಚ್ಚದ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ, ರಾಜ್ಯದಲ್ಲಿ ಪೆಟ್ರೋಲ್ ಬಾಂಬ್ ಸಂಸ್ಕೃತಿಗೆ ತಮ್ಮ ವೌನ ಸಮ್ಮತಿಯಿತ್ತಿದ್ದಾರೆ. ಕಲಬುರಗಿಯಲ್ಲಿ ನಡೆಯುವ ಸಮ್ಮೇಳನಕ್ಕೆ ರಾಜ್ಯಾಧ್ಯಕ್ಷರ ಈ ನಡೆ ಬಹುದೊಡ್ಡ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News