×
Ad

ಕೇರಳ ಪ್ರವಾಸೋದ್ಯಮದ ಟ್ವಿಟರ್ ಹ್ಯಾಂಡಲ್ ನ 'ಬೀಫ್ ಟ್ವೀಟ್'ನಿಂದ ಟ್ವಿಟರ್ ನಲ್ಲಿ ವಾಗ್ಯುದ್ಧ

Update: 2020-01-16 19:34 IST

ತಿರುವನಂತಪುರಂ:  ಬೀಫ್ ಖಾದ್ಯವೊಂದರ ಕುರಿತು ಕೇರಳ ಪ್ರವಾಸೋದ್ಯಮದ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮಾಡಿದ ಟ್ವೀಟ್ ಒಂದು ಟ್ವಿಟರ್ ನಲ್ಲಿ ದೊಡ್ಡ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಬುಧವಾರ @KeralaTourism ರಾಜ್ಯದ ಜನಪ್ರಿಯ ಬೀಫ್ ಫ್ರೈ ಖಾದ್ಯದ ಒಂದು ಫೋಟೋ ಪೋಸ್ಟ್ ಮಾಡಿ ಅದರ ರೆಸಿಪಿ ಲಿಂಕ್ ಕೂಡ ನೀಡಿತ್ತು. ಟ್ವೀಟ್‍ ನಲ್ಲಿ ಬೀಫ್ ಫೋಟೋ ಇದ್ದುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು  ಹಲವು ಜನರು ಹೇಳಿಕೊಂಡಿದ್ದಾರೆ.

"ಪರಿಮಳಯುಕ್ತ ಸಾಂಬಾರ ಪದಾರ್ಥಗಳು, ತೆಂಗಿನಕಾಯಿ ತುಂಡುಗಳು ಹಾಗೂ ಕರಿಬೇವಿನ ಸೊಪ್ಪಿನ ಜತೆ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಲ್ಪಟ್ಟ ಬೀಫ್‍ ನ ಸಣ್ಣ  ಮೆದುವಾದ ತುಂಡುಗಳು. ಬೀಫ್ ಉಲರ್ತಿಯತ್ತು, ಅತ್ಯಂತ ಕ್ಲಾಸಿಕ್ ಖಾದ್ಯದ ರೆಸಿಪಿ''  ಎಂದು ಕೇರಳಟೂರಿಸಂ ಟ್ವೀಟ್‍ ನಲ್ಲಿ ಬರೆಯಲಾಗಿತ್ತು ಹಾಗೂ ಕೊನೆಗೆ ಆ ರೆಸಿಪಿಯಿರುವ ವೆಬ್‍ ಸೈಟ್ ಲಿಂಕ್ ನೀಡಲಾಗಿತ್ತು.

ಇತರ ರಾಜ್ಯಗಳ ಜನರು ಮಕರ ಸಂಕ್ರಾಂತಿ, ಪೊಂಗಲ್ ಹಾಗೂ ಬಿಹು ಆಚರಿಸುತ್ತಿರುವುದರಿಂದ ಈ ಟ್ವೀಟ್ ಅನ್ನು  ಬೇರೆ ಸಮಯದಲ್ಲಿ ಮಾಡಬಹುದಾಗಿತ್ತು ಎಂದು ಕೆಲವರು ಹೇಳಿಕೊಂಡರೆ, ದನಗಳನ್ನು ಪೂಜಿಸುವ ದಿನ ಅದಾಗಿದೆ ಎಂದು ಇನ್ನು ಕೆಲವರು ಹೇಳಿಕೊಂಡರು.
ರಾಹುಲ್ ಈಶ್ವರ್ ಟ್ವೀಟ್ ಮಾಡಿ "ಪ್ರೀತಿಯ @ಕೇರಳಟೂರಿಸಂ, ಪೋರ್ಕ್ ಬಗ್ಗೆ ಈದ್ ದಿನ ಹಾಗೂ ಬೀಫ್ ಬಗ್ಗೆ ಮಕರಸಂಕ್ರಾಂತಿಯಂದು ಪೋಸ್ಟ್ ಮಾಡಬೇಡಿ. ಜನರ ಭಾವನೆಗಳಿಗೆ ನೋವುಂಟು ಮಾಡದೆ ನಮ್ಮ ಆಹಾರ ವೈವಿಧ್ಯತೆಯನ್ನು ಪ್ರದರ್ಶಿಸಿ'' ಎಂದು ಸಲಹೆ ನೀಡಿದ್ದಾರೆ.
"ಜನರು ಬೀಫ್ ತಿನ್ನಲೆಂದೇ ಕೇರಳಕ್ಕೆ ಬರುತ್ತಾರೆಯೇ?'' ಎಂದು  ಒಬ್ಬರು ಪ್ರಶ್ನಿಸಿದರೆ, "ಎಲ್ಲಾ ಹಿಂದುಗಳು ಹಿಂದು ವಿರೋಧಿ ಕೇರಳದಿಂದ ದೂರವಿರಬೇಕು'' ಎಂದು ಇನ್ನೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News