ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರಗಳಲ್ಲಿ 45 ಲೈಂಗಿಕ ಕಿರುಕುಳದ ಪ್ರಕರಣಗಳು

Update: 2020-01-16 14:40 GMT

ಹೊಸದಿಲ್ಲಿ,ಜ.17: ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ವಿವಿಧೆಡೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನಡೆಸುತ್ತಿರುವ ಕ್ರೀಡಾಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ನಡೆದಿರುವ ಕುರಿತು ಕನಿಷ್ಠ 45 ದೂರುಗಳು ವರದಿಯಾಗಿದ್ದು, ಅವುಗಳಲ್ಲಿ 29 ಪ್ರಕರಣಗಳು ತರಬೇತುದಾರ (ಕೋಚ್)ಗಳ ವಿರುದ್ಧವೇ ದಾಖಲಾಗಿವೆ ಎಂದು ರಾಷ್ಟ್ರೀಯ ಆಂಗ್ಲ ದಿನಪತ್ರಿಕೆಯೊಂದು ಗುರುವಾರ ವರದಿ ಮಾಡಿವೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪತ್ರಿಕೆಯು ಈ ಮಾಹಿತಿಯನ್ನು ಪಡೆದುಕೊಂಡಿದೆ. ಬಹುತೇಕ ಪ್ರಕರಣಗಳು ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರಗಳಲ್ಲಿ ವರದಿಯಾಗಿವೆ ಎಂದು ಅದು ಹೇಳಿದೆ. ಜಿಮ್ನಾಸ್ಟಿಕ್ಸ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಬಾಕ್ಸಿಂಗ್ ಹಾಗೂ ಕುಸ್ತಿಯಂತಹ ಕ್ರೀಡೆಗಳಿಗೆ ತರಬೇತಿ ನೀಡಲಾಗುವ ಈ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯದಿಂದ ಹಿಡಿದು ದೈಹಿಕ ಕಿರುಕುಳದಂತಹ ಪ್ರಕರಣಗಳು ವರದಿಯಾಗಿವೆ.

 ಕ್ರೀಡಾತರಬೇತುದಾರರ ವಿರುದ್ಧದ ಅನೇಕ ಪ್ರಕರಣಗಳು ವರದಿಯಾಗದೆ ಇರುವುದರಿಂದ ಸರಕಾರಿ ಕ್ರೀಡಾಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಸಂಖ್ಯೆ ಇನ್ನೂ ಅಧಿಕವಾಗಿರುವ ಸಾಧ್ಯತೆಯಿದೆಯೆಂದು ಮಹಿಳಾ ಸಬಲೀಕರಣ ಕುರಿತ ಸಂಸದೀಯ ಸಮಿತಿ ವರದಿ ತಿಳಿಸಿದೆ.

ಸರಕಾರಿ ಕ್ರೀಡಾಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪದ ಕುರಿತ ತನಿಖೆ ದೀರ್ಘಕಾಲದವರೆಗೆ ಎಳೆಯಲ್ಪಡುತ್ತದೆ ಹಾಗೂ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದಾಗಲೂ ಅವರನ್ನು ಶಿಕ್ಷೆಗೊಳಪಡಿಸದೆ, ವರ್ಗಾವಣೆ, ವೇತನ ಅಥವಾ ಪಿಂಚಣಿಯಲ್ಲಿ ಕಡಿತದಂತಹ ಮೃದುವಾದ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ

 ಸರಕಾರಿ ಕ್ರೀಡಾಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಹುಡುಗಿಯರಲ್ಲಿ ಹೆಚ್ಚಿನವರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಮನವೊಲಿಕೆ ಅಥವಾ ಒತ್ತಡ ಹೇರುವ ಮೂಲಕ ಆರೋಪಿಗಳ ವಿರುದ್ಧದ ಹೇಳಿಕೆಗಳನ್ನು ಬದಲಾಯಿಸುವಂತೆ ಇಲ್ಲವೇ ದೂರುಗಳನ್ನು ಹಿಂತೆಗೆದುಕೊಳ್ಳುಂತೆ ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ.

ಹಿಸಾರ್,ಗಾಂಧಿನಗರ, ತಿರುವನಂತಪುರಂ, ಹೊಸದಿಲ್ಲಿ, ಮುಂಬೈ, ಬೆಂಗಳೂರು, ಔರಂಗಾಬಾದ್ ಸೇರಿದಂತೆ ವಿವಿಧ ನಗರಗಳ ಕ್ರೀಡಾಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳು ದಾಖಲಾಗಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News