ನಾನು ರಬ್ಬರ್ ಸ್ಟ್ಯಾಂಪ್ ಅಲ್ಲ: ಕೇರಳ ರಾಜ್ಯಪಾಲ

Update: 2020-01-16 14:56 GMT

ತಿರುವನಂತಪುರ, ಜ. 16: ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕುರಿತಂತೆ ಕೇರಳ ರಾಜ್ಯ ಸರಕಾರವನ್ನು ಅದರ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ನಾನು ರಬ್ಬರ್ ಸ್ಟ್ಯಾಂಪ್ ಅಲ್ಲ. ಮಾಧ್ಯಮ ವರದಿಗಳ ಮೂಲಕ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಲ್ಲಿ ಮನವಿ ಸಲ್ಲಿಸಿರುವುದು ನನಗೆ ತಿಳಿಯಿತು. ಸರಕಾರದ ಈ ನಡೆ ಶಿಷ್ಟಾಚಾರದ ಉಲ್ಲಂಘನೆ. ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಬೇಕಿದ್ದರೆ, ಅದು ಮೊದಲು ಸರಕಾರದ ಮುಖ್ಯಸ್ಥನಾಗಿರುವ ನನಗೆ ಮಾಹಿತಿ ನೀಡಬೇಕಿತ್ತು. ಮನವಿ ಸಲ್ಲಿಕೆ ಸಾಂವಿಧಾನಿಕವೆ ಎಂದು ಪರಿಶೀಲಿಸುತ್ತೇನೆ’’ ಎಂದು ತಿರುವನಂತಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಖಾನ್ ಹೇಳಿದರು.

ರಾಜ್ಯದ ಸ್ಥಳೀಯ ಸರಕಾರದ ಇಲಾಖೆಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸುವ ಸರಕಾರದ ಆಧ್ಯಾದೇಶ ತಿರಸ್ಕರಿಸಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಖಾನ್, ಬಹಿರಂಗವಾಗಿ ರಾಜ್ಯ ಸರಕಾರವನ್ನು ಟೀಕಿಸಿದರು. ಆಧ್ಯಾದೇಶವನ್ನು ತಿರಸ್ಕರಿಸಿರುವುದಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ನನ್ನ ನಿಲುವಿಗೂ ಯಾವುದೇ ಸಂಬಂಧ ಇಲ್ಲ. ನನಗೆ ಅದರ ಬಗ್ಗೆ ಕೆಲವು ಸಂಶಯ ಇತ್ತು. ಅಲ್ಲದೆ, ಸರಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಯಾರೊಬ್ಬರೂ ಕಾನೂನಿಗೆ ಅತೀತರಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿರುವುದರಲ್ಲಿ ನನಗೇನೂ ಸಮಸ್ಯೆ ಇಲ್ಲ ಎಂದು ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News