ಬಜರಂಗ್ ಫೈನಲ್‌ಗೆ, ಜಿತೇಂದರ್, ದೀಪಕ್ ಹೋರಾಟ ಅಂತ್ಯ

Update: 2020-01-18 17:12 GMT

ರೋಮ್, ಜ.18: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ರೋಮ್ ರ್ಯಾಂಕಿಂಗ್ ಸಿರೀಸ್ ಕುಸ್ತಿ ಸ್ಪರ್ಧೆಯ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಕನಿಷ್ಠ ಪಕ್ಷ ಬೆಳ್ಳಿ ಪದಕವನ್ನು ದೃಢಪಡಿಸಿದ್ದಾರೆ.

ಅಮೆರಿಕದ ಝೈನ್ ಅಲ್ಲೆನ್ ರೆಥರ್‌ಫೋರ್ಡ್ ವಿರುದ್ಧ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಬಜರಂಗ್ 5-4 ಅಂತರದಿಂದ ಜಯ ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಇನ್ನೋರ್ವ ಕುಸ್ತಿಪಟು ಜೋಸೆಫ್ ಕ್ರಿಸ್ಟೋಫರ್‌ರನ್ನು 4-2 ಅಂತರದಿಂದ ಸೋಲಿಸಿದರು. ಸೆಮಿ ಫೈನಲ್‌ನಲ್ಲಿ ಉಕ್ರೇನ್‌ನ ವಾಸಿಲ್ ಶುಪ್ಟರ್‌ರನ್ನು 6-4 ಅಂತರದಿಂದ ಮಣಿಸಿದರು. ಬಜರಂಗ್ ಶನಿವಾರ ತಡರಾತ್ರಿ ನಡೆಯಲಿರುವ ಫೈನಲ್‌ನಲ್ಲಿ ಅಮೆರಿಕದ ಇನ್ನೋರ್ವ ಕುಸ್ತಿಪಟು ಜೋರ್ಡನ್ ಮೈಕಲ್ ಒಲಿವೆರ್‌ರನ್ನು ಎದುರಿಸಲಿದ್ದಾರೆ.

 74 ಕೆ.ಜಿ. ವಿಭಾಗದಲ್ಲಿ ಜಿತೇಂದರ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ದೀಪಕ್ ಪೂನಿಯಾ(86ಕೆಜಿ ವಿಭಾಗ) ಹೋರಾಟಕ್ಕೆ ತೆರೆ ಬಿದ್ದಿದೆ. ಜಿತೇಂದರ್ ಮೊದಲ ಸ್ಪರ್ಧೆಯಲ್ಲಿ ಉಕ್ರೇನ್‌ನ ಡೆನಿಸ್ ಪಾವ್‌ಲೊವ್‌ರನ್ನು 10-1 ಅಂತರದಿಂದ ಮಣಿಸಿದ್ದರು. ಆದರೆ, ಕ್ವಾರ್ಟರ್ ಫೈನಲ್‌ನಲ್ಲಿ ಟರ್ಕಿಯ ಸೊನೆರ್ ಡಿಮಿರ್ಟಸ್ ವಿರುದ್ಧ 0-4 ಅಂತರದಿಂದ ಸೋತಿದ್ದಾರೆ.

ಡಿಮೆರ್ಟಸ್ ಫೈನಲ್ ತಲುಪಿದ ಕಾರಣ ಜಿತೇಂದರ್‌ಗೆ ರೆಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ, ಕಝಖ್‌ಸ್ತಾನದ ಡ್ಯಾನಿಯರ್ ಕೈಸನೊವ್ ವಿರುದ್ಧ 2-9 ಅಂತರದಿಂದ ಸೋತಿರುವ ಜಿತೇಂದರ್ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದರು. 86 ಕೆ.ಜಿ. ವಿಭಾಗದಲ್ಲಿ ದೀಪಕ್ ಮೊದಲ ಸುತ್ತಿನಲ್ಲಿ ಪುರ್ಟೊರಿಕೊದ ಎಥಾನ್ ಅಡ್ರಿಯನ್ ರಾಮೊಸ್ ವಿರುದ್ಧ 1-11 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News