ಪೌರತ್ವ ಕೊಡುವ ಸರಕಾರ ‘ದಲಿತರ ಪೌರತ್ವ’ ಕಿತ್ತು ಕೊಂಡದ್ದೇಕೆ?

Update: 2020-01-20 04:54 GMT

‘‘ದಲಿತ ವಿರೋಧಿಗಳಿಂದ ಸಿಎಎಗೆ ವಿರೋಧ’’ ಎಂದು ದೇಶದ ಗೃಹ ಸಚಿವರಾಗಿರುವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಬಹುಶಃ ದೇಶದಲ್ಲಿ ದಲಿತರ ಸ್ಥಿತಿಗತಿಗಳಿಗೆ ಸ್ಪಂದಿಸಿ ಮೋದಿ ನೇತೃತ್ವದ ಸರಕಾರ ನೀಡಿದ ಮೊತ್ತ ಮೊದಲ ಹೇಳಿಕೆ ಇದಾಗಿದೆ. ಆದುದರಿಂದ ಗೃಹ ಸಚಿವರನ್ನು ನಾವು ಅಭಿನಂದಿಸಬೇಕಾಗಿದೆ. ಆದರೆ ನಾವು ಪೂರ್ಣವಾಗಿ ಈ ಹೇಳಿಕೆಗೆ ಸಂಭ್ರಮಿಸುವಂತಿಲ್ಲ. ಯಾಕೆಂದರೆ ಅವರು ಹೇಳಿಕೆ ನೀಡಿರುವುದು ಭಾರತದ ದಲಿತರ ಕುರಿತಂತೆ ಅಲ್ಲ, ಪಾಕಿಸ್ತಾನದಲ್ಲಿರುವ ದಲಿತರ ಕುರಿತಂತೆ. ಪಾಕಿಸ್ತಾನದಲ್ಲಿ ದಲಿತರು ‘ಹಿಂದೂ’ ಎನ್ನುವ ಕಾರಣಕ್ಕಾಗಿ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಈ ದೌರ್ಜನ್ಯದಿಂದ ನೊಂದು ಅವರು ಭಾರತಕ್ಕೆ ಬಂದಿದ್ದಾರೆ. ಅವರಿಗೆ ಆಶ್ರಯ ನೀಡುವುದು ಸರಕಾರದ ಉದ್ದೇಶ ಎಂದು ಅಮಿತ್ ಶಾ ಸ್ಪಷ್ಟ ಪಡಿಸಿದ್ದಾರೆ. ಕನಿಷ್ಠ ಪಾಕಿಸ್ತಾನ ದಲಿತರನ್ನು ‘ಹಿಂದೂ’ ಎಂದು ತಪ್ಪು ತಿಳಿದು ದೌರ್ಜನ್ಯ ಎಸಗಿರಬಹುದು. ಆದರೆ ಭಾರತ ಅವರನ್ನು ಎಂದಾದರೂ ‘ಹಿಂದೂ’ ಎಂದು ಭಾವಿಸಿ ಆ ಸ್ಥಾನಮಾನವನ್ನು ನೀಡಿದೆಯೇ? ಇಂದು ದಲಿತರಿಗೆ ಅತ್ಯಂತ ಅಪಾಯಕಾರಿಯಾಗಿರುವ ದೇಶವೊಂದಿದ್ದರೆ ಅದು ಭಾರತವೇ ಆಗಿದೆ. ಪಾಕಿಸ್ತಾನದಲ್ಲಿ ದಲಿತರ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿದರೆ, ಭಾರತದಲ್ಲಿ ದಲಿತರು ದೈಹಿಕ ದೌರ್ಜನ್ಯವನ್ನು ಮಾತ್ರವಲ್ಲ, ಮಾನಸಿಕ ದೌರ್ಜನ್ಯವನ್ನೂ ಅನುಭವಿಸಿದ್ದಾರೆ.

ಭಾರತದಲ್ಲಿ ಅವರ ಸಾಮಾಜಿಕ ಘನತೆ ಅತ್ಯಂತ ತಳಮಟ್ಟದಲ್ಲಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕುಖ್ಯಾತವಾಗಿರುವ ‘ಉನಾ’ ಇರುವುದು ಪಾಕಿಸ್ತಾನದಲ್ಲಿ ಅಲ್ಲ, ಭಾರತದಲ್ಲಿ. ‘ಸಾಮಾಜಿಕ ಅಸಮಾನತೆ ನಿಲ್ಲದೇ ಇದ್ದರೆ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುತ್ತೇವೆ’ ಎಂದು ಹೇಳಿರುವುದು ಪಾಕಿಸ್ತಾನದ ದಲಿತರಲ್ಲ. ಭಾರತದಲ್ಲೇ ಇರುವ ತಮಿಳು ನಾಡಿನ ದಲಿತರು. ದಲಿತರಿರುವ ಕೇರಿಗೆ ಅಡ್ಡವಾಗಿ ಬೃಹತ್ ಗೋಡೆಯೊಂದನ್ನು ನಿರ್ಮಿಸಿ ಅದು ಕುಸಿದು ಭಾರೀ ಸಾವು ನೋವು ಸಂಭವಿಸಿದ್ದು ಪಾಕಿಸ್ತಾನದಲ್ಲಲ್ಲ, ಖೈರ್ಲಾಂಜಿ, ಕಂಬಾಲಪಳ್ಳಿ ಮೊದಲಾದ ದುರಂತಗಳು ನಡೆದಿರುವುದು ಪಾಕಿಸ್ತಾನದಲ್ಲಿ ಅಲ್ಲ, ಭಾರತದಲ್ಲಿ. ಹೀಗಿರುವಾಗ ಯಾವ ಸೌಭಾಗ್ಯವನ್ನು ಅರಸಿಕೊಂಡು ಪಾಕಿಸ್ತಾನದ ದಲಿತರು ಭಾರತಕ್ಕೆ ಬರಬೇಕು? ಅಮಿತ್ ಶಾ ಕಾಳಜಿ ವಹಿಸಬೇಕಾಗಿರುವುದು ಪಾಕಿಸ್ತಾನದಲ್ಲಿರುವ ದಲಿತರ ಕುರಿತಂತೆ ಅಲ್ಲ, ಭಾರತದಲ್ಲಿರುವ ದಲಿತರ ಕುರಿತಂತೆ. ಕಳೆದ ಐದು ವರ್ಷಗಳಿಂದ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚುತ್ತಿವೆ. ದಲಿತರ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವುದಕ್ಕೆ ಸಕಲ ರೀತಿಯಲ್ಲೂ ಸರಕಾರ ಶ್ರಮಿಸುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಿದ ದಲಿತರ ಮೇಲೆ ಪೊಲೀಸರು ಮತ್ತು ಸಂಘಪರಿವಾರದ ಮುಖಂಡರು ಜಂಟಿಯಾಗಿ ದೌರ್ಜನ್ಯ ಎಸಗಿದರು. ಸುಮಾರು 10ಕ್ಕೂ ಅಧಿಕ ಮಂದಿ ಗೋಲಿಬಾರ್‌ಗೆ ಬಲಿಯಾದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಹಲವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಕೋರೆಗಾಂವ್ ವಿಜಯ ದಿವಸ್ ಆಚರಣೆಯಲ್ಲಿ ಭಾಗವಹಿಸಿದ ದಲಿತರ ಮೇಲೂ ಇದೇ ರೀತಿಯ ಹಲ್ಲೆ ನಡೆದವು. ದಲಿತರನ್ನು ಸಂಘಟಿಸಿದ ಕಾರಣಕ್ಕಾಗಿಯೇ ವಿವಿಧ ನಾಯಕರು ‘ಅರ್ಬನ್ ನಕ್ಸಲ್’ ಹೆಸರಿನಲ್ಲಿ ಜೈಲು ಸೇರಿದ್ದಾರೆ.

ಆದಿವಾಸಿಗಳ ಪರವಾಗಿ ಹೋರಾಟ ನಡೆಸಿದವರನ್ನೂ ‘ನಕ್ಸಲೀಯರು’ ಎಂದು ಆರೋಪಿಸಿ ಜೈಲಿಗೆ ತಳ್ಳಲಾಗಿದೆ. ಇದು ದಲಿತರ ಮೇಲೆ ನಡೆಯುತ್ತಿರುವ ನೇರ ದೌರ್ಜನ್ಯಗಳಾಗಿವೆ. ಇದೇ ಸಂದರ್ಭದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುತ್ತಾ ದಲಿತರನ್ನು ಪರೋಕ್ಷವಾಗಿ ಅಸಹಾಯಕರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಮೇಲ್ವರ್ಗದ ಬಡವರಿಗೆ ಶೇ. 10ರಷ್ಟು ಮೀಸಲಾತಿಯೂ ಇದರ ಭಾಗವಾಗಿಯೇ ಸರಕಾರ ಅನುಷ್ಠಾನಕ್ಕೆ ತಂದಿದೆ. ಇಂದು ಮೇಲ್‌ಜಾತಿಗಳನ್ನು ‘ಬಡವರು’ ಎಂದು ಪರಿಗಣಿಸಿ ಮೀಸಲಾತಿ ನೀಡುವ ಮೂಲಕ ಅವರನ್ನು ಇನ್ನಷ್ಟು ಬಲಿಷ್ಠರನ್ನಾಗಿಸುತ್ತಾ, ಪರೋಕ್ಷವಾಗಿ ದಲಿತರನ್ನು ತುಳಿಯುವ ತೋಳುಗಳಿಗೆ ಶಕ್ತಿ ತುಂಬುತ್ತಿದೆ. ಮೀಸಲಾತಿಯ ಪರಿಕಲ್ಪನೆಗೂ ಬಡತನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಸಂಘಟಿತವಾಗಿ ಬೀದಿಗಿಳಿದಿರುವ ಮೇಲ್‌ಜಾತಿಯ ಜನರು ಎಲ್ಲ ಪಕ್ಷಗಳಿಗೂ ಬೇಕಾಗಿದ್ದಾರೆ. ಹಂತಹಂತವಾಗಿ ಸಂವಿಧಾನವನ್ನು ದುರ್ಬಲಗೊಳಿಸಿ ದಲಿತರನ್ನು ಸ್ವಾತಂತ್ರ ಪೂರ್ವದ ಸ್ಥಿತಿಗೆ ಕೊಂಡೊಯ್ಯುವುದೇ ಸರಕಾರದ ಅಜೆಂಡಾವಾಗಿದೆ. ದೇವಸ್ಥಾನದಲ್ಲಿ, ಬೀದಿಯಲ್ಲಿ, ಶಾಲೆಯಲ್ಲಿ, ಮದುವೆ ಮಂಟಪದಲ್ಲಿ ಜಾತೀಯತೆಯನ್ನು ಅನುಭವಿಸುವ ಬದುಕನ್ನು ಹಂಬಲಿಸಿ ಪಾಕಿಸ್ತಾನ, ಬಾಂಗ್ಲಾದಲ್ಲಿರುವ ದಲಿತರು ಭಾರತಕ್ಕೆ ಬಂದಿದ್ದಾರೆಯೇ?

ಹಾಗಾದರೆ ಅಸ್ಸಾಮಿನ ಡಿಟೆನ್‌ಶನ್ ಸೆಂಟರ್‌ನಲ್ಲಿ ದಲಿತರು ಇಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ. ಈ ಡಿಟೆನ್‌ಶನ್ ಸೆಂಟರ್‌ನಲ್ಲಿರುವ ಶೇ. 70ರಷ್ಟು ಜನರು ಆದಿವಾಸಿಗಳು, ಬುಡಕಟ್ಟು ಜನರೇ ಆಗಿದ್ದಾರೆ. ಈ ಬಂಧನ ಕೇಂದ್ರದಲ್ಲಿರುವವರು ಬಹುತೇಕರು ಕೂಲಿ ಕಾರ್ಮಿಕರಾಗಿದ್ದಾರೆ. ಅವರೆಲ್ಲರೂ ವಿದೇಶದಿಂದ ಬಂದ ಕಾರಣಕ್ಕಾಗಿ ಡಿಟೆನ್‌ಶನ್ ಸೆಂಟರ್ ಸೇರಿಲ್ಲ. ಅಧಿಕಾರಿಗಳಿಗೆ ತೋರಿಸಲು ಸೂಕ್ತ ದಾಖಲೆಗಳು ಅವರಲ್ಲಿಲ್ಲ ಎನ್ನುವ ಕಾರಣಕ್ಕಾಗಿ ಬಂಧನಕೇಂದ್ರಕ್ಕೆ ತಳ್ಳಲ್ಪಟ್ಟಿದ್ದಾರೆ. ಅಸ್ಸಾಮಿನ ಚಹಾ ತೋಟವೂ ಸೇರಿದಂತೆ ವಿವಿಧೆಡೆ ಕೂಲಿನಾಳಿ ಮಾಡಿ ಬದುಕುತ್ತಿದ್ದ ಈ ದಲಿತರ ಕೈಯಲ್ಲಿ ‘ನಿಮ್ಮ ದಾಖಲೆ ತೋರಿಸಿ, ಇಲ್ಲವೇ ಪೌರತ್ವ ಕಳೆದುಕೊಂಡು ಜೈಲು ಸೇರಿ’ ಎಂದವರು ಯಾರು? ತಲೆಮಾರಿನಿಂದ ಕಾಡಿನಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವವರ ಪೌರತ್ವವನ್ನು ಕಿತ್ತುಕೊಂಡು ಅವರನ್ನು ಬಂಧನ ಕೇಂದ್ರಕ್ಕೆ ತಳ್ಳುವಾಗ ಅಮಿತ್ ಶಾ ಅವರಿಗೆ ‘ಅವರೆಲ್ಲರೂ ದಲಿತರು’ ಎನ್ನುವ ಪ್ರಜ್ಞೆ ಎಲ್ಲಿ ಹೋಗಿತ್ತು? ಅವರಿಗೆ ಪೌರತ್ವ ಕೊಡುವ ಬಗ್ಗೆ ಅಮಿತ್ ಶಾ ಮಾತನಾಡುತ್ತಿದ್ದಾರೆ, ಆದರೆ ಅವರ ಪೌರತ್ವವನ್ನು ಕಿತ್ತುಕೊಂಡದ್ದು ಯಾಕೆ ಎನ್ನುವ ಪ್ರಶ್ನೆಗೆ ಮೊದಲು ಶಾ ಉತ್ತರಿಸಬೇಕು. ಇದೀಗ ಸಿಎಎ ಕಾಯ್ದೆಯ ಮೂಲಕ ಇವರಿಗೆ ಪೌರತ್ವ ಕೊಡುವ ಬಗ್ಗೆ ಅಮಿತ್ ಶಾ ಮಾತನಾಡುತ್ತಿದ್ದಾರೆ. ಆದರೆ ಹಾಗೆ ಕೊಡಬೇಕಾದರೆ ತಾವು ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಅಸ್ಸಾಮಿಗೆ ಬಂದವರು ಎನ್ನುವ ದಾಖಲೆಗಳನ್ನು ಕೊಡಬೇಕು. ಅದನ್ನು ಅವರು ಎಲ್ಲಿಂದ ಕೊಡುತ್ತಾರೆ? ಯಾಕೆಂದರೆ ಇರುವವರಲ್ಲಿ ಬಹುತೇಕರು ಅಸ್ಸಾಮಿನಲ್ಲೇ ಹುಟ್ಟಿದವರು. ಅವರ ತಂದೆ ತಾಯಿಗಳು ಯಾವಾಗ, ಯಾಕಾಗಿ ಅಸ್ಸಾಮಿಗೆ ಬಂದರು ಎನ್ನುವ ಅರಿವೂ ಅವರಿಗಿಲ್ಲ. ಅವರಿಗೆ ಪೌರತ್ವವನ್ನು ಕೊಡುವ ಬಗೆ ಹೇಗೆ? ಅಂದರೆ ಉದ್ದೇಶ ಸ್ಪಷ್ಟ.

ಸರಕಾರಕ್ಕೆ ತಲೆನೋವಾಗಿರುವ ದಲಿತರು, ಬುಡಕಟ್ಟು ಜನರು, ಆದಿವಾಸಿಗಳು ಮತ್ತು ಬಡ ಕಾರ್ಮಿಕ ಮುಸ್ಲಿಮರನ್ನು ಬಂಧನ ಕೇಂದ್ರದಲ್ಲಿಟ್ಟು ಸಾಮೂಹಿಕವಾಗಿ ಸಮಸ್ಯೆ ನಿವಾರಿಸುವುದು. ಸಿಎಎ ಕಾಯ್ದೆಯ ಮೂಲಕ ದಲಿತರ ಹೆಸರಲ್ಲಿ ತಮಗೆ ಬೇಕಾದ ಮಂದಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವುದು. ಇದೇ ಸಂದರ್ಭದಲ್ಲಿ, ಹಿಂದೂ ಹೆಸರಲ್ಲಿ ವಿದೇಶಿ ಉಗ್ರರು ಕೂಡ ಅಧಿಕಾರಿಗಳಿಗೆ ಲಂಚ ಕೊಟ್ಟು ಭಾರತದ ಪೌರರಾಗುವ ಅವಕಾಶವೂ ಇದೆ. ಸಿಎಎ ಎನ್ನುವ ಗೊಂದಲಗಳನ್ನು ಸೃಷ್ಟಿಸಿ ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕುವುದು ಕೂಡ ಸರಕಾರದ ಇನ್ನೊಂದು ಮುಖ್ಯ ಉದ್ದೇಶವಾಗಿದೆ. ಆದುದರಿಂದಲೇ ಬೆಲೆಯೇರಿಕೆ, ಹಣದುಬ್ಬರ ಮೊದಲಾದ ಸಮಸ್ಯೆಗಳಿಗಾಗಿ ಬೀದಿಗಿಳಿಯಬೇಕಾದ ಪೌರರು ತಮ್ಮ ಪೌರತ್ವಕ್ಕಾಗಿ ಬೀದಿಗಿಳಿಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಸರಕಾರದ ವೈಫಲ್ಯಗಳ ಚರ್ಚೆ ಬದಿಗೆ ಸಂಚಿದೆ. ಇದರ ಅನುಕೂಲವನ್ನು ಸರಕಾರ ತನ್ನದಾಗಿಸಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News