ಪ್ರಜ್ಞೇಶ್ ಗುಣೇಶ್ವರನ್ ಮೊದಲ ಸುತ್ತಿನಲ್ಲಿ ನಿರ್ಗಮನ

Update: 2020-01-21 18:16 GMT

ಮೆಲ್ಬೋರ್ನ್, ಜ.21: ಭಾರತದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗುಣೇಶ್ವರನ್ ಅವರು ಜಪಾನಿನ ತಾತ್ಸುಮಾ ಇಟೊ ವಿರುದ್ಧ 4-6, 2-6, 5-7 ಸೆಟ್‌ಗಳಿಂದ ಸೋತರು.

ಸೋಮವಾರ ನಿಗದಿಯಾಗಿದ್ದ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಈ ಕಾರಣದಿಂದಾಗಿ ಮಂಗಳವಾರಕ್ಕೆ ಮುಂದೂಡಲಾಗಿತ್ತು.

ಯಾವುದೇ ಹೋರಾಟವಿಲ್ಲದೆ ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡ ಪ್ರಜ್ಞೇಶ್ ಮೂರನೇ ಸೆಟ್‌ನಲ್ಲಿ 2-1 ಮುನ್ನಡೆ ಸಾಧಿಸಿದ್ದರು. ಆದರೆ ಜಪಾನಿನ ಆಟಗಾರ ತಕ್ಷಣವೇ ತಿರುಗೇಟು ನೀಡಿದರು. ಅಂತಿಮವಾಗಿ ಜಪಾನಿನ ವೈಲ್ಡ್ ಕಾರ್ಡ್ ಆಟಗಾರ ಇಟೊ ವಿರುದ್ಧ ಗುಣೇಶ್ವರನ್ ಹೋರಾಟ ಮುಂದುವರಿಸಲಾರದೆ ಸೋಲಿಗೆ ಶರಣಾದರು.  ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ : ಪ್ರಜ್ನೇಶ್ ನಿರ್ಗಮಿಸವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರ ಅಭಿಯಾನ ಕೊನೆಗೊಂಡಿತು.

ಪುರುಷರ ಡಬಲ್ಸ್‌ನಲ್ಲಿ ಭಾರತದ ದಿವಿಜ್ ಶರಣ್ ಮತ್ತು ನ್ಯೂಝಿಲ್ಯಾಂಡ್‌ನ ಪಾಲುದಾರ ಆರ್ಟೆಮ್ ಸೀಟಾಕ್ ಮೊದಲ ಸುತ್ತಿನಲ್ಲಿ ಸ್ಪೇನ್ -ಪೋರ್ಚುಗಲ್‌ನ ಜೋಡಿ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಮತ್ತು ಜೊವಾವೊ ಸೂಸಾ ಅವರನ್ನು ಎದುರಿಸಲಿದ್ದಾರೆ. ರೋಹನ್ ಬೋಪಣ್ಣ ಮತ್ತು ಜಪಾನಿನ ಯಸುಟಾಕಾ ಉಚಿಯಾಮಾ ಅವರು ಅಮೆರಿಕದ 13ನೇ ಶ್ರೇಯಾಂಕದ ಬಾಬ್ ಮತ್ತು ಮೈಕ್ ಬ್ರಿಯಾನ್ ಸಹೋದರರನ್ನು ಎದುರಿಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಝಾ ಮತ್ತು ಉಕ್ರೇನ್‌ನ ನಾಡಿಯಾ ಕಿಚಿನೊಕ್ ಅವರು ಮೊದಲ ಸುತ್ತಿನಲ್ಲಿ ಚೀನಾದ ಕ್ಸಿನ್ಯುನ್ ಹಾನ್ ಮತ್ತು ಲಿನ್ ಝೂ ಅವರನ್ನು ಎದುರಿಸಲಿದ್ದಾರೆ.

ಎರಡು ವರ್ಷಗಳ ವಿರಾಮದ ಬಳಿಕ ಟೆನಿಸ್‌ಗೆ ವಾಪಸಾದ ಸಾನಿಯಾ ಇತ್ತೀಚೆಗೆ ಕಿಚೆನೋಕ್ ಜೊತೆ ಹೊಬಾರ್ಟ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News