ದೇಶವನ್ನು ಛಿದ್ರಛಿದ್ರಗೊಳಿಸುತ್ತಿರುವ ಅಸಲಿ ‘ತುಕ್ಡೇ ತುಕ್ಡೇ ಗ್ಯಾಂಗ್’ ಯಾರು?

Update: 2020-01-24 18:38 GMT

ಭಾಗ-3

1944ರಲ್ಲಿ ಭಾರತ ಸರಕಾರದ ಗೃಹಖಾತೆಯಿಂದ ಬಿಹಾರ ಸರಕಾರಕ್ಕೆ ಕಳುಹಿಸಲಾಗಿದ್ದ ಸುತ್ತೋಲೆಯೊಂದು (No. F 201/44 Ests. Dated March 16, 1944) ಆರೆಸ್ಸೆಸ್ ಒಂದು ಫ್ಯಾಶಿಸ್ಟ್ ಸಂಘಟನೆ ಎಂಬುದನ್ನು ಸಾರಿಹೇಳುತ್ತದೆ: ‘‘.......ಸುದೀರ್ಘ ಕಾಲದ ಚರ್ಚೆಯ ನಂತರ ಆರೆಸ್ಸೆಸ್ ಒಂದು ಫ್ಯಾಶಿಸ್ಟ್ ಮಾದರಿಯ ಫೌಜನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿರುವ ರಾಜಕೀಯ-ವಾಣಿಜ್ಯ ಸಂಘಟನೆಯಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು.’’ ಮುಂದೆ ಫೆಬ್ರವರಿ 4, 1948ರಂದು ರಾಷ್ಟ್ರವಿರೋಧಿ ಚಟುವಟಿಕೆಗಳಿಗಾಗಿ ಆರೆಸ್ಸೆಸ್‌ನ್ನು ನಿಷೇಧಿಸಲಾಯಿತು. ಆ ಸಂದರ್ಭದಲ್ಲಿ ಸರಕಾರ ಹೊರಡಿಸಿದ ಪ್ರಕಟನೆ ಕೂಡ ಆರೆಸ್ಸೆಸ್‌ನ್ನು ದ್ವೇಷ ಬಿತ್ತುವುದರಲ್ಲಿ ಹಾಗೂ ಹಿಂಸಾಚಾರದಲ್ಲಿ ನಿರತವಾದ ಸಂಸ್ಥೆಯೆಂದು ಸ್ಪಷ್ಟವಾಗಿ ಘೋಷಿಸಿದೆ. ‘‘........ಆರೆಸ್ಸೆಸ್ ಸದಸ್ಯರು ಕಿಚ್ಚಿಡುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನೊಳಗೊಂಡ ಹಿಂಸಾಚಾರದ ಕೃತ್ಯಗಳನ್ನು ವೈಯಕ್ತಿಕವಾಗಿ ದೇಶದ ವಿವಿಧೆಡೆಗಳಲ್ಲಿ ನಡೆಸಿದ್ದಾರೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಶೇಖರಿಸಿದ್ದಾರೆ ಎಂದು ಕಂಡುಕೊಳ್ಳಲಾಗಿದೆ. ಜನರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಬಂದೂಕುಗಳನ್ನು ಸಂಗ್ರಹಿಸಬೇಕು, ಸರಕಾರದ ವಿರುದ್ಧ ಅತೃಪ್ತಿ ಸೃಷ್ಟಿಸಬೇಕು ಮತ್ತು ಪೊಲೀಸ್ ಹಾಗೂ ಸೇನೆಗಳನ್ನು ದುಷ್ಕೃತ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಬೇಕು ಎನ್ನುವ ಕರಪತ್ರಗಳನ್ನು ಅವರು ವಿತರಿಸುತ್ತಿರುವುದಾಗಿ ಕಂಡುಬಂದಿದೆ’’ ಎನ್ನುತ್ತದೆ ಆ ಪ್ರಕಟನೆ.

ಆರೆಸ್ಸೆಸ್ ಬಗ್ಗೆ ಮೃದು ನಿಲುವು ತಳೆದಿದ್ದ ಅಂದಿನ ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲರ ನೆನಪಿನಲ್ಲಿ ಮೋದಿ ಸರಕಾರ ಇಂದು ಗುಜರಾತ್‌ನಲ್ಲಿ ಬೃಹತ್ತಾದ ಪ್ರತಿಮೆಯೊಂದನ್ನು ಸ್ಥಾಪಿಸಿದೆ. ಆದರೆ ಅಂದು ಗಾಂಧೀಜಿ ಕೊಲೆಯಾದಾಗ ಸೆಷ್ಟ್ಟಂಬರ್ 11, 1948ರಂದು ಗೋಳ್ವಾಲ್ಕರ್‌ರಿಗೆ ಬರೆದ ಪತ್ರವೊಂದರಲ್ಲಿ ಇದೇ ಸರ್ದಾರ್ ಏನು ಹೇಳಿದ್ದರು ಗೊತ್ತೇ? ‘‘ಹಿಂದೂಗಳನ್ನು ಒಂದುಗೂಡಿಸಿ ಅವರಿಗೆ ಸಹಾಯ ಮಾಡುವುದು ಒಂದು ವಿಷಯ, ಆದರೆ ಹಿಂದೂಗಳ ಪಡಿಪಾಟಲುಗಳಿಗಾಗಿ ನಿರಪರಾಧಿ, ಅಸಹಾಯಕ ಸ್ತ್ರೀ, ಪುರುಷರು ಮತ್ತು ಮಕ್ಕಳ ಮೇಲೆ ಸೇಡು ತೀರಿಸಲು ಹೊರಡುವುದು ಬೇರೆಯೇ ವಿಷಯ. ........ಆರೆಸ್ಸೆಸಿಗರ ಭಾಷಣಗಳೆಲ್ಲವೂ ಕೋಮು ವಿಷದಿಂದ ತುಂಬಿವೆ. ಹಿಂದೂಗಳಲ್ಲಿ ಹುಮ್ಮಸ್ಸು ಮೂಡಿಸಿ ರಕ್ಷಣೆಗಾಗಿ ಅವರನ್ನು ಸಂಘಟಿಸುವುದಕ್ಕೋಸ್ಕರ ವಿಷವನ್ನು ಹರಡುವ ಅವಶ್ಯಕತೆಯಿರಲಿಲ್ಲ. ಆ ವಿಷದ ಅಂತಿಮ ಪರಿಣಾಮಕ್ಕೆ ಗಾಂಧೀಜಿಯ ಅಮೂಲ್ಯ ಜೀವ ಬಲಿಯಾದುದನ್ನು ದೇಶ ಅನುಭವಿಸಬೇಕಾಯಿತು. ........ಈ ಪರಿಸ್ಥಿತಿಗಳಲ್ಲಿ ಸರಕಾರ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ......ಇದಾಗಿ ಆರು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆಯಾದರೂ..... ಅವರು ತಮ್ಮ ಹಳೆ ಚಟುವಟಿಕೆಗಳಿಗೆ ಮರುಜೀವ ತುಂಬುವ ಯತ್ನಗಳನ್ನು ಜಾರಿಯಲ್ಲಿಟ್ಟಿದ್ದಾರೆ.........’’

ಅಲ್ಪಸಂಖ್ಯಾತರು, ಕಮ್ಯುನಿಸ್ಟರು, ಎಡಪಂಥೀಯರು, ಪ್ರಗತಿಪರರ ನಿರ್ನಾಮವೇ ಸಂಘಪರಿವಾರದ ಗುರಿ

ಈ ಗುರಿ ಸಾಧನೆಯ ಪ್ರಥಮಹಂತದ ಭಾಗವಾಗಿ ಕಮ್ಯುನಿಸ್ಟರು, ಎಡಪಂಥೀಯರು, ಪ್ರಗತಿಪರರನ್ನೆಲ್ಲಾ ‘ನಗರ ನಕ್ಸಲರು’ ಎಂದು ಕರೆದು ಸೆರೆಮನೆಗೆ ತಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ. ಎರಡನೆಯ ಹಂತವೆಂದರೆ ಈಗಾಗಲೇ ಸಾಕಷ್ಟು ಕಿರುಕುಳ ದೌರ್ಜನ್ಯ ನೀಡುತ್ತಾ ಬಂದಿರುವ ಅಲ್ಪಸಂಖ್ಯಾತರನ್ನು ಬಂಧನಕೇಂದ್ರಗಳಿಗೆ ತುಂಬುವುದು. ಮೂರನೇ ಹಂತವೇ ಹಿಟ್ಲರನ ಅಂತಿಮ ಪರಿಹಾರ (Final Solution). ತಮಗೇನೂ ಆಗದು ಎಂದು ಕ್ರೈಸ್ತ ಬಾಂಧವರೇನಾದರೂ ಯೋಚಿಸುತ್ತಿದ್ದರೆ ಅದಕ್ಕಿಂತ ದೊಡ್ಡ ತಪ್ಪುಇನ್ನೊಂದಿರದು. ಸಂಘಪರಿವಾರದ ‘ತುಕ್ಡೇತುಕ್ಡೇ ಗ್ಯಾಂಗ್’ ನ ಪಟ್ಟಿಯಲ್ಲಿ ಮುಂದಿನ ಸರದಿ ಕ್ರೈಸ್ತರದು ಎನ್ನುವುದರಲ್ಲಿ ಅನುಮಾನ ಬೇಡ. ಏಕೆಂದರೆ ಸಂಘಪರಿವಾರದ ಬೈಬಲ್ ಆಗಿರುವ, ಪ್ರತಿಯೊಬ್ಬ ಕಾರ್ಯಕರ್ತನಿಗೂ ಕಡ್ಡಾಯವಾಗಿರುವ ಗೋಳ್ವಾಲ್ಕರ್‌ರ ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್’ ಮತ್ತು ‘ಬಂಚ್ ಆಫ್ ಥಾಟ್ಸ್’ ಗಳಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರನ್ನು ಮೂರು ಮುಖ್ಯ ಅಪಾಯಗಳೆಂದು ಕರೆಯಲಾಗಿದೆ. ‘‘ಇಸ್ಲಾಮಿನ, ಕ್ರೈಸ್ತ ಧರ್ಮದ ಮತ್ತು ಇಂದಿನ ಕಮ್ಯುನಿಸಂನ ರಕ್ತಸಿಕ್ತ ವಿಸ್ತರಣೆಯ ಇತಿಹಾಸದ ಎದುರು ಹಿಂದೂಗಳ ಇತಿಹಾಸ ಭಿನ್ನವಾಗಿ ಪ್ರಜ್ವಲಿಸುತ್ತದೆ....’’ (ಬಂಚ್ ಆಫ್ ಥಾಟ್ಸ್)

ಮೊದಲನೆಯ ಆಂತರಿಕ ಅಪಾಯವಾದ ಮುಸ್ಲಿಮರ ವಿರುದ್ಧ ವಿಷಕಾರುವ ಗೋಳ್ವಾಲ್ಕರ್ ‘‘.....ಪಾಕಿಸ್ತಾನ ಸೃಷ್ಟಿಯಾದ ತಕ್ಷಣ ಅವರೆಲ್ಲರೂ ದೇಶಪ್ರೇಮಿಗಳಾಗಿಬಿಟ್ಟರೆಂದು ನಂಬುವ ಭ್ರಮೆಗೊಳಗಾದರೆ ಅದು ಆತ್ಮಹತ್ಯೆಗೈದಂತೆ. ತದ್ವಿರುದ್ಧವಾಗಿ, ಪಾಕಿಸ್ತಾನ ಸ್ಥಾಪನೆಯಾದ ಬಳಿಕ ಮುಸ್ಲಿಮರ ಅಪಾಯ ನೂರುಪಟ್ಟು ಹೆಚ್ಚಿದೆಯಲ್ಲದೆ ಅವರ ಭವಿಷ್ಯದ ಆಕ್ರಮಣಕಾರಿ ಉದ್ದೇಶಗಳಿಗೆ ಪಾಕಿಸ್ತಾನವು ಒಂದು ಜಿಗಿಯುವ ಫಲಕದಂತಾಗಿದೆ. ......ದೇಶದೊಳಗೆ ಅನೇಕ ‘ಮಿನಿ ಪಾಕಿಸ್ತಾನ’ಗಳಿವೆ.....’’ ಎನ್ನುತ್ತಾರೆ.

ಎರಡನೆಯ ಅಪಾಯವಾದ ಕ್ರೈಸ್ತರ ಕುರಿತು ವಿವರಿಸುತ್ತ, ನಮ್ಮ ನಾಡಿನಲ್ಲಿರುವ ಕ್ರೈಸ್ತ ಸದ್ಗಹಸ್ತರ ಪಾತ್ರ ಹೇಗಿದೆಯೆಂದರೆ ಅವರ ಉದ್ದೇಶ ನಮ್ಮ ಜೀವನದ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳನ್ನು ನಾಶಗೊಳಿಸುವುದಷ್ಟೆ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ಮತ್ತು ಸಾಧ್ಯವಾದರೆ ಇಡೀ ದೇಶದಲ್ಲಿ, ರಾಜಕೀಯ ಯಜಮಾನಿಕೆಯನ್ನು ಸ್ಥಾಪಿಸುವುದಾಗಿದೆ.

ಅಲ್ಪಸಂಖ್ಯಾತರ ಸಮಸ್ಯೆಗೆ ಆತ ಹಿಟ್ಲರ್‌ನಿಂದ ಕಲಿತು ಸೂಚಿಸಿದ ಪರಿಹಾರ ಹೀಗಿದೆ: ‘‘ಹಿಂದೂಸ್ಥಾನದಲ್ಲಿರುವ ವಿದೇಶೀಯ ಜನಾಂಗಗಳು ಒಂದೋ ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು.......... ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ ಹಿಂದೂ ಜನಾಂಗದೊಳಕ್ಕೆ ಸೇರಿಕೊಳ್ಳಬೇಕು. ಇಲ್ಲಾ ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ ದೇಶದೊಳಗಿರಬಹುದು. ಅವರಿಗೆ ಬೇರಾವ ಮಾರ್ಗವೂ ಇಲ್ಲ; ಕನಿಷ್ಠ ಪಕ್ಷ, ಇರಬಾರದು.

ಜರ್ಮನಿ ತನ್ನ ಸ್ವಂತ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡುವುದಕ್ಕೋಸ್ಕರ ದೇಶದೊಳಗಿದ್ದ ಸೆಮಿಟಿಕ್ ಜನಾಂಗಗಳಾದ ಯಹೂದಿಗಳನ್ನು ಖಾಲಿ ಮಾಡಿ ಇಡೀ ವಿಶ್ವಕ್ಕೆ ಆಘಾತ ನೀಡಿತು. ಇಲ್ಲಿ ವ್ಯಕ್ತವಾಗಿರುವುದು ಅತ್ಯುನ್ನತ ಮಟ್ಟದ ಜನಾಂಗ ಗರ್ವ. ಮೂಲಭೂತ ವ್ಯತ್ಯಾಸಗಳನ್ನು ಹೊಂದಿರುವ ಜನಾಂಗಗಳನ್ನೂ ಸಂಸ್ಕೃತಿಗಳನ್ನೂ ಒಂದು ಏಕೀಕೃತ ಸಮಗ್ರವಾಗಿಸುವುದು ಹೆಚ್ಚುಕಮ್ಮಿ ಅಸಾಧ್ಯವೆನ್ನುವುದನ್ನೂ ಜರ್ಮನಿ ತೋರಿಸಿಕೊಟ್ಟಿದೆ. ಹಿಂದೂಸ್ಥಾನದಲ್ಲಿರುವ ನಮಗೆ ಇದೊಂದು ಒಳ್ಳೆಯ ಪಾಠ. ನಾವು ಅದನ್ನು ಕಲಿತು ಅದರ ಲಾಭ ಪಡೆದುಕೊಳ್ಳಬೇಕು.’’ (ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್)

ಗೋಳ್ವಾಲ್ಕರ್ ಸೂಚಿಸಿದ ಪರಿಹಾರವನ್ನೇ ಮೋದಿ ಸರಕಾರ ಈಗ ಕಾರ್ಯರೂಪಕ್ಕಿಳಿಸಲು ಹೊರಟಿರುವಂತೆ ಕಾಣಿಸುವುದಿಲ್ಲವೇ?

ಸಂಘಪರಿವಾರದ ದೇಶದ್ರೋಹದ ಪರಿಕಲ್ಪನೆ ಮತ್ತು ಸಂವಿಧಾನ ವಿರೋಧಗಳ ಮೂಲ

ಇವತ್ತು ಯಾರು ಸಂಘಪರಿವಾರದ ಸಂವಿಧಾನವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತಾರೋ ಅವರನ್ನೆಲ್ಲ ದೇಶದ್ರೋಹಿಗಳೆಂದು ಬಿಂಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಸಂಘಪರಿವಾರದ ಗುಲಾಮಿ ಮಾಧ್ಯಮಗಳೂ ಇದಕ್ಕೆ ಸಾಥ್ ನೀಡುತ್ತಿವೆ. ಅಂದಹಾಗೆ ಮಾಧ್ಯಮಗಳನ್ನು ಗುಲಾಮರನ್ನಾಗಿಸುವ ಐಡಿಯಾ ಕೂಡ ಹಿಟ್ಲರ್‌ನ ಜರ್ಮನಿಯಿಂದಲೇ ಆಮದು ಮಾಡಿಕೊಂಡಿರುವುದಾಗಿದೆ. ಸಂಘಪರಿವಾರಕ್ಕೆ ಬೇಕಾಗಿರುವುದು ಅಂಬೇಡ್ಕರರ ಸಂವಿಧಾನ ಅಲ್ಲ, ಕೆಳಜಾತಿಗಳು ಮತ್ತು ಸ್ತ್ರೀಯರ ಬಗ್ಗೆ ಹೀನಾಯ ಹಾಗೂ ಅಮಾನವೀಯ ಉಲ್ಲೇಖಗಳಿರುವ ಮನುವಿನ ಸಂವಿಧಾನ ಅಥವಾ ‘ಮನುಸ್ಮತಿ’. ಸಂಘಪರಿವಾರಿಗರ ಇಂದಿನ ನಡೆನುಡಿಗಳು ಅವರ ಪರಮೋಚ್ಚ ಗುರು ಗೋಳ್ವಾಲ್ಕರ್ ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತಿವೆ ಎಂಬುದಕ್ಕೆ ಗೋಳ್ವಾಲ್ಕರ್‌ರ ಕೃತಿಗಳಿಂದ ಆಯ್ದ ಈ ಎರಡು ಸ್ಯಾಂಪಲ್ ಹೇಳಿಕೆಗಳೇ ಸಾಕ್ಷಿ:

‘‘..........ಯಾರು ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರವನ್ನು ಕೊಂಡಾಡಿ....... ಗುರಿಸಾಧನೆಗಾಗಿ ದುಡಿಯುತ್ತಾರೋ ಅವರು ಮಾತ್ರ ರಾಷ್ಟ್ರೀಯವಾದಿ ದೇಶಭಕ್ತರು. ಮಿಕ್ಕವರೆಲ್ಲರೂ ಒಂದೋ ದೇಶದ್ರೋಹಿಗಳು ಮತ್ತು ರಾಷ್ಟ್ರೀಯ ಧ್ಯೇಯೋದ್ದೇಶದ ಶತ್ರುಗಳು ಅಥವಾ ಒಂದಿಷ್ಟು ಉದಾರತೆಯಿಂದ ಕರೆಯುವುದಾದರೆ, ಮೂರ್ಖರು. (ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್)

‘‘ನಮ್ಮ ಸಂವಿಧಾನ ಕೂಡ ಕೇವಲ ಪಾಶ್ಚಾತ್ಯ ದೇಶಗಳ ವಿವಿಧ ಸಂವಿಧಾನಗಳಿಂದ ಆಯ್ದ ವಿವಿಧ ಕಲಮುಗಳನ್ನು ಕ್ಲಿಷ್ಟಕರವಾಗಿ, ಒಂದಕ್ಕೊಂದು ಸಂಬಂಧವಿಲ್ಲದಂತೆ ಜೋಡಿಸಿ ಮಾಡಿರುವುದಾಗಿದೆ. ಅದರಲ್ಲಿ ನಮ್ಮದೇ ಎನ್ನುವಂಥಾದ್ದು ಏನೇನೂ ಇಲ್ಲ. ನಮ್ಮ ರಾಷ್ಟ್ರೀಯ ಗುರಿಯೇನು ಮತ್ತು ಜೀವನದ ಕೇಂದ್ರವಸ್ತು ಏನೆಂಬುದರ ಕುರಿತು ಅದರ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದಾದರೂ ಶಬ್ದವನ್ನು ಉಲ್ಲೇಖಿಸಲಾಗಿದೆಯೇ? ಇಲ್ಲ.’’ (ಬಂಚ್ ಆಫ್ ಥಾಟ್ಸ್)

ಸಂಘಪರಿವಾರ ಎಂಬ ‘ತುಕ್ಡೇ ತುಕ್ಡೇ ಗ್ಯಾಂಗ್’ ಮತ್ತು ನೆಹರೂ

ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂಗೆ ಹಿಂದೂ ಕೋಮುವಾದದ ಅಪಾಯದ ಬಗ್ಗೆ ಹೆಚ್ಚುಕಮ್ಮಿ ಭವಿಷ್ಯಸೂಚಕ ಎನ್ನಬಹುದಾದ, ಶೀಘ್ರಗ್ರಾಹಿ ಒಳನೋಟವಿತ್ತು. ಹಿಂದೂತ್ವವಾದದ ಕಂಟಕವನ್ನು ನೆಹರೂರಷ್ಟು ಸ್ಪಷ್ಟವಾಗಿ ಮುಂಗಂಡವರು ಬೇರಾರೂ ಇಲ್ಲ. ಉದಾಹರಣೆಗೆ, ಒಮ್ಮೆ ನೆಹರೂ ವಿದೇಶ ಯಾತ್ರೆಯಲ್ಲಿದ್ದ ವೇಳೆ ಅಕ್ಟೋಬರ್ 7, 1949ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಜೊತೆ ಮಾತುಕತೆ ನಡೆಸಿದ ಸರ್ದಾರ್ ಪಟೇಲ್‌ರು ಆರೆಸ್ಸೆಸ್ ಮಂದಿಗೆ ಕಾಂಗ್ರೆಸ್ ಸದಸ್ಯತ್ವದ ಬಾಗಿಲನ್ನು ತೆರೆಯುವಂತೆ ಸಮಿತಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ನವೆಂಬರ್ 7ರಂದು ಭಾರತಕ್ಕೆ ಮರಳಿ ಬಂದಾಕ್ಷಣ ಈ ನಿರ್ಣಯವನ್ನು ನೆಹರೂ ವಜಾಗೊಳಿಸಿದ್ದರು. ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯಲುದ್ದೇಶಿದ್ದ ಸಂಘಪರಿವಾರದ ಫ್ಯಾಶಿಸ್ಟ್ ಚಳವಳಿಯನ್ನು ನೆಹರೂ ನೇರವಾಗಿ ಎದುರಿಸಿದರು. ಜಾತ್ಯತೀತತೆಯ ಆದರ್ಶವನ್ನು ಉಳಿಸುವುದಕ್ಕಾಗಿ ಸಂಘಪರಿವಾರದ ವಿರುದ್ಧ ಜೀವಮಾನಪೂರ್ತಿ ಹೋರಾಡಿದರು. ಆದುದರಿಂದಲೇ ಕೋಮುವಾದಿಗಳಿಗೆ ನೆಹರೂ ಅಂದರೆ ಭಯಂಕರ ಸಿಟ್ಟು! ಮೋದಿ ಸರಕಾರ ಇಂದು ನೆಹರೂ ನೆನಪನ್ನೇ ಅಳಿಸಲು ಹೊರಟಿರುವುದರ ಹಿಂದೆ ಅಡಗಿರುವ ಅಸಲಿಯತ್ತು ಇದೇ ಆಗಿದೆ.

ಕೊನೆಹನಿ: ಹಿಂದೂಗಳೂ ವಲಸಿಗರೇ!

ಸಾವರ್ಕರ್ ರೂಪಿಸಿದಂತಹ ಹಿಂದುತ್ವ ಸಿದ್ಧಾಂತದ ಪ್ರಮುಖ ಪ್ರತಿಪಾದನೆಗಳೆಂದರೆ ಹಿಂದೂಗಳು ಭಾರತ ಉಪಖಂಡದ ಮೂಲ ನಿವಾಸಿಗಳು ಮತ್ತು ಒಂದೇ ರಾಷ್ಟ್ರೀಯ ಗುಂಪಿಗೆ ಸೇರಿದವರು. ಸಂಘಪರಿವಾರ ಇದನ್ನೇ ತನ್ನ ಸಿದ್ಧಾಂತವಾಗಿ ಅಳವಡಿಸಿಕೊಂಡು ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಮುಂದಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳು ಸಂಘಪರಿವಾರದ ಹಿಂದುತ್ವ ಸಿದ್ಧಾಂತದ ಅಡಿಪಾಯವನ್ನೇ ಬುಡಮೇಲು ಮಾಡುತ್ತವೆ. ಡಿಎನ್‌ಎ ಪರೀಕ್ಷೆಗಳು ವೈಜ್ಞಾನಿಕವಾಗಿ ಸಾಬೀತುಪಡಿಸುವಂತೆ ಹಿಂದೂಗಳು ಭಾರತ ಉಪಖಂಡದ ಮೂಲ ನಿವಾಸಿಗಳು ಅಲ್ಲವೇ ಅಲ್ಲ. ಯವನರು, ಹೂಣರು, ಮುಸ್ಲಿಮರು, ಕ್ರೈಸ್ತರಂತೆ ಹಿಂದೂಗಳ ಪೂರ್ವಜರು ಸಹ ಭಾರತಕ್ಕೆ ವಲಸೆ ಬಂದವರು. ವಾಸ್ತವದಲ್ಲಿ ಹರಪ್ಪ ನಾಗರಿಕತೆ ಅವನತಿ ಹೊಂದುತ್ತಿದ್ದ ಕಾಲದಲ್ಲಿ ಈಗಿನ ಹಿಂದೂಗಳೆನ್ನಲಾದವರ ಪೂರ್ವಜರು ತಮ್ಮ ಅಶ್ವಗಳು ಮತ್ತು ಗೋವುಗಳೊಂದಿಗೆ ಮಧ್ಯ ಏಶ್ಯದ ಸ್ಟೆಪ್ಪಿಹುಲ್ಲುಗಾವಲುಗಳಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ಶಾಶ್ವತವಾಗಿ ತಳವೂರಿದರು. ಹೀಗಾಗಿ ಒಂದೇ ದೋಣಿಯಲ್ಲಿರುವ ಸಂಘಪರಿವಾರಿಗರಿಗೆ ಇತರ ಸಮುದಾಯಗಳನ್ನು ವಲಸಿಗರೆಂದು ದೂಷಿಸಿ ತಿರಸ್ಕರಿಸುವ ಯಾವ ಹಕ್ಕೂ ಇಲ್ಲ.

ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿರುವ ನಿಜವಾದ ‘ತುಕ್ಡೇ ತುಕ್ಡೇ ಗ್ಯಾಂಗ್’ ಯಾರು, ಸಿಎಎ, ಎನ್‌ಆರ್‌ಐಸಿ, ಎನ್‌ಪಿಆರ್ ಮುಂತಾದ ಕಾಯ್ದೆಗಳ ನೈಜ ಉದ್ದೇಶ ಏನು ಎಂಬ ಕಟುಸತ್ಯಗಳನ್ನು ಜನ ಈಗಲಾದರೂ ಅರ್ಥಮಾಡಿಕೊಳ್ಳಲೇಬೇಕು. ಈಗಾಗಲೇ ತುಂಬ ದುರ್ಬಲಗೊಂಡಿರುವ ಪ್ರಜಾಸತ್ತೆ, ಜಾತ್ಯತೀತತೆ ಮತ್ತಿತರ ಮಾನವೀಯ ಮೌಲ್ಯಗಳು ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಸಮಾಧಿಯಾಗಲಿರುವ ವಾಸ್ತವವನ್ನು ಗ್ರಹಿಸಲೇಬೇಕು. ಇಲ್ಲವಾದರೆ ದೇಶದ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಜನಸಾಮಾನ್ಯರಿಗೆ ಎಂಥಾ ಘನಘೋರ ಭವಿಷ್ಯ ಕಾದಿದೆ ಎಂಬ ನಗ್ನಸತ್ಯವನ್ನು ಬಿಚ್ಚಿತೋರಿಸುವ ಅಗತ್ಯವಿಲ್ಲ ಅನಿಸುತ್ತದೆ.

************

ಆಕರಗಳು: ಪ್ರೊ. ಶಂಸುಲ್ ಇಸ್ಲಾಮ್‌ರ (Savarkar- Myths and Facts)  ಮತ್ತು (Know the RSS) ಎ.ಜಿ.ನೂರಾನಿಯವರ (RSS and BJP) ಮತ್ತು (Savarkar and Hindutva) ಲಕ್ಷ್ಮೀಪತಿ ಕೋಲಾರ, ಸುರೇಶ ಭಟ್ ಬಾಕ್ರಬೈಲು ವಿರಚಿತ ಹರಪ್ಪ- ಡಿಎನ್‌ಎ ನುಡಿದ ಸತ್ಯ

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News