ಪ್ರಾಬಲ್ಯ ಮುಂದುವರಿಸುವತ್ತ ಭಾರತದ ಚಿತ್ತ

Update: 2020-01-25 17:13 GMT

ಆಕ್ಲೆಂಡ್, ಜ.25: ನ್ಯೂಝಿಲ್ಯಾಂಡ್ ವಿರುದ್ಧ ಇಲ್ಲಿನ ಈಡನ್‌ಪಾರ್ಕ್‌ನಲ್ಲಿ ರವಿವಾರ ನಡೆಯಲಿರುವ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಆಡುವ 11ರ ಬಳಗದಲ್ಲಿ ದೊಡ್ಡಮಟ್ಟದ ಬದಲಾವಣೆ ಮಾಡದಿದ್ದರೂ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಯಾದರೆ ಅಚ್ಚರಿಯಿಲ್ಲ. ಮೊದಲ ಪಂದ್ಯದಲ್ಲಿ 400ಕ್ಕೂ ಅಧಿಕ ಸ್ಕೋರ್‌ಗೆ ಸಾಕ್ಷಿಯಾಗಿದ್ದ ಈಡನ್‌ಪಾರ್ಕ್‌ನಲ್ಲಿ ರವಿವಾರವೂ ರನ್ ಹೊಳೆ ಹರಿಯುವ ಎಲ್ಲ ಸಾಧ್ಯತೆಗಳಿವೆ.

ಗಾತ್ರದಲ್ಲಿ ಕಿರಿದಾಗಿರುವ ಈಡನ್‌ಪಾರ್ಕ್ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಮಾತ್ರ ಪ್ರತಿ ಓವರ್‌ಗೆ 8ಕ್ಕಿಂತ ಕಡಿಮೆ ರನ್ ನೀಡಿ ಮಿತವ್ಯಯಿ ಎನಿಸಿದ್ದರು. ಮುಹಮ್ಮದ್ ಶಮಿ(4 ಓವರ್‌ಗಳಲ್ಲಿ 53/0)ಹಾಗೂ ಶಾರ್ದುಲ್ ಠಾಕೂರ್(3 ಓವರ್, 1/44)ನ್ಯೂಝಿಲ್ಯಾಂಡ್ ಬ್ಯಾಟ್ಸ್‌ಮನ್‌ಗಳಿಂದ ಚೆನ್ನಾಗಿ ದಂಡಿಸಲ್ಪಟ್ಟಿದ್ದರು.

ಶಮಿ ಆಡುವ 11ರ ಬಳಗದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ಠಾಕೂರ್ ಇನ್ನೋರ್ವ ವೇಗಿ ನವದೀಪ್ ಸೈನಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.

ಭಾರತವು ಮೂವರು ಸ್ಪೆಷಲಿಸ್ಟ್ ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೋ ಅಥವಾ ಕುಲದೀಪ್ ಯಾದವ್ ಅವರು ಯಜುವೇಂದ್ರ ಚಹಾಲ್ ಹಾಗೂ ರವೀಂದ್ರ ಜಡೇಜರೊಂದಿಗೆ ಆಡುತ್ತಾರೊ? ಎಂದು ಕಾದು ನೋಡಬೇಕಾಗಿದೆ. ವಾಷಿಂಗ್ಟನ್ ಸುಂದರ್ ಭಾರತ ತಂಡದಲ್ಲಿರುವ ಇನ್ನೋರ್ವ ಸ್ಪಿನ್ ಆಯ್ಕೆಯಾಗಿದ್ದಾರೆ.

ಒಂದು ವೇಳೆ ಭಾರತ ಹೆಚ್ಚುವರಿ ಸ್ಪಿನ್ನರ್‌ನ್ನು ಕಣಕ್ಕಿಳಿಸಿದರೆ, ಆಲ್‌ರೌಂಡರ್ ಶಿವಂ ದುಬೆ ಮೂರನೇ ವೇಗದ ಬೌಲರ್ ಆಗಲಿದ್ದಾರೆ. ಜಡೇಜ ಹಾಗೂ ಚಹಾಲ್ ಶುಕ್ರವಾರ ತಲಾ ಒಂದು ವಿಕೆಟ್ ಪಡೆದು 36 ಎಸೆತಗಳಲ್ಲಿ 50 ರನ್ ಬಿಟ್ಟುಕೊಟ್ಟಿದ್ದರು.

ಚಹಾಲ್ ಹಾಗೂ ಕುಲದೀಪ್ 2019ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಬಳಿಕ ಈ ತನಕ ಒಟ್ಟಿಗೆ ಆಡಿಲ್ಲ. ಭಾರತದ ಬ್ಯಾಟಿಂಗ್ ಸ್ಥಿರತೆ ಪಡೆದಂತೆ ಕಂಡುಬಂದರೂ ಟೀಮ್ ಮ್ಯಾನೇಜ್‌ಮೆಂಟ್ ಎಲ್ಲರನ್ನು ಒಟ್ಟಾಗಿಸುವ ನಿರೀಕ್ಷೆಯಲ್ಲಿದೆ.

ಬ್ಯಾಟಿಂಗ್‌ನಲ್ಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಸಂತಸಗೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 29 ಎಸೆತಗಳಲ್ಲಿ ಔಟಾಗದೆ 58 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭಾರತ 5 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದೆ.

ಮುಂಬೈ ಬ್ಯಾಟ್ಸ್‌ಮನ್ ಅಯ್ಯರ್ ಶ್ರೇಷ್ಠ ಫಾರ್ಮ್ ನಲ್ಲಿದ್ದಾರೆ. ಕಳೆದ ವರ್ಷದ ಸೆಪ್ಟಂಬರ್‌ನ ಬಳಿಕ 11 ಇನಿಂಗ್ಸ್ ಗಳಲ್ಲಿ 34.14ರ ಸರಾಸರಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಮನೀಷ್ ಪಾಂಡೆ ಹಾಗೂ ದುಬೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ವಿಕೆಟ್‌ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.

ಮತ್ತೊಂದೆಡೆ, ಕಿವೀಸ್ ಮೊದಲ ಪಂದ್ಯದಲ್ಲಿ 15 ರಿಂದ 20 ರನ್ ಕೊರತೆ ಎದುರಿಸಿದ್ದು, ಫೀಲ್ಡಿಂಗ್‌ನ ವೇಳೆ ಭಾರತಕ್ಕೆ ಎರಡು ಬಾರಿ ಜೀವದಾನ ನೀಡಿತ್ತು. ಅಚ್ಚರಿಯೆಂಬಂತೆ ಭಾರತವು ಈಡನ್ ಪಾರ್ಕ್‌ನ ವಾತಾವರಣಕ್ಕೆ ಬೇಗನೆ ಹೊಂದಿಕೊಂಡಿದೆ.

 ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಹೊರತಾಗಿಯೂ ಎರಡನೇ ಪಂದ್ಯದಲ್ಲ್ಲಿ ನ್ಯೂಝಿಲ್ಯಾಂಡ್ ಫೇವರಿಟ್ ತಂಡವಾಗಿದೆ. ಹಿರಿಯ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಆಕ್ರಮಣಕಾರಿ ಅರ್ಧಶತಕ ಗಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ನ್ಯೂಝಿಲ್ಯಾಂಡ್ 2ನೇ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News