ಸಿಎಎ ಸಂವಿಧಾನ ವಿರೋಧಿ

Update: 2020-01-26 18:13 GMT

ಮಾನ್ಯರೇ,

 ಸಿಎಎ ನನಗೆ ಗೊಂದಲ ಹುಟ್ಟಿಸಿದೆ. ಸಿಎಎ ಕಾಯ್ದೆಯನ್ನು ಅಸ್ಸಾಮಿಗಾಗಿ ಮಾತ್ರ ಜಾರಿಗೆ ತರಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಈ ಕಾಯ್ದೆ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎನ್ನುವುದು ಅಷ್ಟೇ ಸತ್ಯ. ಇಡೀ ದೇಶದ ವಿಷಯ ಬಂದಾಗ ಕಾಯ್ದೆಯಿಂದ ಅಲ್ಪಸಂಖ್ಯಾತರಾಗಿ ಈ ದೇಶದಲ್ಲಿ ಅಭದ್ರತೆಯನ್ನು ಎದುರಿಸುತ್ತಿರುವ ಮುಸ್ಲಿಮರನ್ನು ಹೊರಗಿಡುವುದು ಎಷ್ಟು ಸರಿ? ಪಾಕಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಈ ಕಾನೂನು ಎಂದು ಸರಕಾರ ಹೇಳುತ್ತಿದೆ. ಆದರೆ ಅಸ್ಸಾಮಿನಲ್ಲಿ ಪೌರತ್ವ ನಿರಾಕರಿಸಲ್ಪಟ್ಟಿರುವ ಅಷ್ಟೂ ಲಕ್ಷ ಹಿಂದೂಗಳು ಪಾಕಿಸ್ತಾನದಿಂದ ಬಂದವರೆ? ಖಂಡಿತಾ ಅಲ್ಲ. ಅವರೆಲ್ಲ ದಾಖಲೆ ಒದಗಿಸಲಾಗದೆ ಪೌರತ್ವವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳಂತೆಯೇ ಮುಸ್ಲಿಮರು ಸರಿಯಾದ ದಾಖಲೆ ಒದಗಿಸಲಾಗದೇ ಪೌರತ್ವ ಕಳೆದುಕೊಂಡವರಿದ್ದಾರೆ. ಮುಸ್ಲಿಮರೆಲ್ಲರೂ ಅಕ್ರಮ ನುಸುಳುಕೋರರು ಅಲ್ಲ. ಕರ್ನಾಟಕದಲ್ಲಿ ದಾಖಲೆಗಳೇ ಇಲ್ಲದ ಅಲೆಮಾರಿಗಳು, ಆದಿವಾಸಿಗಳು, ದಲಿತರು ಎಷ್ಟಿಲ್ಲ? ಅವರೆಲ್ಲ ಪಾಕಿಸ್ತಾನದಿಂದ ಬಂದ ನುಸುಳುಕೋರರೆ? ದಾಖಲೆ ಒದಗಿಸಲಾಗದ ಹಿಂದೂ-ಮುಸ್ಲಿಮ್ ಇಬ್ಬರನ್ನೂ ರಕ್ಷಿಸುವ ಕಾಯ್ದೆ ನಮಗೆ ಬೇಕು. ದಾಖಲೆ ಒದಗಿಸಲಾಗದ ಹಿಂದೂಗಳಿಗೆ ಅಕ್ರಮ ದಾರಿಯಲ್ಲಿ ಪೌರತ್ವ ಕೊಟ್ಟು, ಮುಸ್ಲಿಮರನ್ನು ನುಸುಳುಕೋರರು ಎಂದು ಕರೆಯುವುದು ಸಂವಿಧಾನ ವಿರೋಧಿ. ಈ ಕಾರಣದಿಂದಲೇ ಸಿಎಎ ಇಡೀ ದೇಶವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸಿದೆ.

ನಾಳೆ ಈ ಸಮಸ್ಯೆಯನ್ನು ಕರ್ನಾ ಟಕದಲ್ಲಿ ನಾವೆಲ್ಲರೂ ಎದುರಿಸಲಿದ್ದೇವೆ. ದಾಖಲೆ ಒದಗಿಸಲಾಗದ ಹಿಂದೂಗಳು ಸಿಎಎ ಕಾಯ್ದೆಯ ಮೂಲಕ ನಾವು ಪಾಕಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿದ್ದೇವೆ ಎಂದು ಹೊಸದಾಗಿ ಪೌರತ್ವ ಪಡೆದುಕೊಳ್ಳಬೇಕು. ಇಂತಹ ಅವಮಾನ ನಮಗೆ ಬೇಕೆ?

Writer - ಯಶಸ್ವಿನಿ, ಯಾದಗಿರಿ

contributor

Editor - ಯಶಸ್ವಿನಿ, ಯಾದಗಿರಿ

contributor

Similar News