ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಅನ್ಯಗ್ರಹ ಜೀವಿಗಳ ಸಮ್ಮೇಳನ!

Update: 2020-01-26 18:16 GMT

ಮಾನ್ಯರೇ,
 
 ಈ ಬಾರಿ ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆದಿದೆ. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಾಂಬ್ ಬೆದರಿಕೆಯೊಡ್ಡಿ ಸಾಹಿತ್ಯ ಸಮ್ಮೇಳನವನ್ನು ತಡೆಯಲಾಗಿದೆ. ಇದರ ವಿರುದ್ಧ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿ ಒಂದು ಮಾತೂ ಆಡಿಲ್ಲ. ಆತ್ಮಾಭಿಮಾನವಿಲ್ಲದ ಬರಹಗಳನ್ನು ಸಾಹಿತ್ಯವೆಂದು ಕರೆಯಲಾಗುವುದಿಲ್ಲ. ಪ್ರಭುತ್ವದ ಭಟ್ಟಂಗಿತನ ಎಂದು ಕರೆಯಲಾಗುತ್ತದೆ. ಆಳದಲ್ಲಿ ಪ್ರತಿಭಟನಾ ಗುಣವೊಂದು ಕಲೆಯಲ್ಲಿ ಇರುತ್ತದೆ. ಅದು ಇಲ್ಲದೆ ಇದ್ದರೆ ಸಾಹಿತ್ಯ ಬೂಸಾ ಅನ್ನಿಸಿಕೊಳ್ಳುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ನಾನು ಗಮನಿಸಿದ್ದೇನೆ. ಪ್ರತ್ಯೇಕ ಉಪನ್ಯಾಸಗಳಲ್ಲಿ ಆಸಕ್ತಿಯಿಂದ ಕೇಳುವ ಕೇಳುಗರು 10 ಜನರೂ ಇರುವುದಿಲ್ಲ. ಒಟ್ಟು ಜನಸಂದಣಿ, ಪುಸ್ತಕ ಮಾರಾಟ, ಊಟದ ಅಬ್ಬರದಲ್ಲಿ ವೇದಿಕೆಯಲ್ಲಿ ಮಾತನಾಡುವವರು ಏನು ಆಡಿದ್ದಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಇಡೀ ಸಾಹಿತ್ಯ ಸಮ್ಮೇಳನ ಬೆರಳೆಣಿಕೆಯ ಸಾಹಿತಿಗಳ, ಸಂಘಟಕರ ತುರಿಕೆಯಾಗಿ ಮುಗಿದು ಹೋಗುತ್ತದೆ. ಒಂದೇ ಒಂದು ಪ್ರಯೋಜನವೆಂದರೆ, ಕೆಲವರನ್ನು ಆ ಸಭೆಗಳಲ್ಲಿ ಪರಿಚಯಿಸಿಕೊಳ್ಳಬಹುದು. ಅದಕ್ಕಾಗಿ ಬೇರೆ ವೇದಿಕೆಯನ್ನು ಕೂಡ ಮಾಡಿಕೊಳ್ಳಬಹುದಾಗಿದೆ.

ಜನರ ಜೀವ ಸಂಕಟದಲ್ಲಿರುವಾಗ ನೃತ್ಯ, ಸಂಗೀತ ಯಾರಿಗೆ ಬೇಕು? ಇಡೀ ದೇಶ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಸರಕಾರದ ಆಸ್ಥಾನ ನರ್ತಕಿಯರ ಸಮ್ಮೇಳನವಾಗಿ ಸಾಹಿತ್ಯ ಸಮ್ಮೇಳನವನ್ನು ಭಾವಿಸಬಹುದು. ಸಮ್ಮೇಳನಾಧ್ಯಕ್ಷರು ಪ್ರಧಾನ ನರ್ತಕಿಯಾದರೆ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ವಿದೂಷಕರಾಗಿ ಪ್ರಭುತ್ವವನ್ನು ಒಲಿಸಿಕೊಳ್ಳಬಹುದು. ಉಳಿದಂತೆ ವರ್ತಮಾನ ಸಂಗತಿಗಳಿಂದ ಮಾರು ದೂರದಲ್ಲಿದೆ ಈ ಸಾಹಿತ್ಯ ಸಮ್ಮೇಳನ. ಇದೊಂದು ರೀತಿ, ಅನ್ಯಗ್ರಹ ಜೀವಿಗಳ ಸಮ್ಮೇಳನ. ಈ ಭೂಮಿಗೂ ಅವರಿಗೂ ಯಾವ ಸಂಬಂಧವೂ ಇಲ್ಲ.  

Writer - ನರಹರಿ ಪ್ರಿಯ, ಬೆಂಗಳೂರು

contributor

Editor - ನರಹರಿ ಪ್ರಿಯ, ಬೆಂಗಳೂರು

contributor

Similar News