ನಡಾಲ್, ಝ್ವೆರೆವ್ ಕ್ವಾರ್ಟರ್ ಫೈನಲ್ ಗೆ

Update: 2020-01-27 18:03 GMT

ಮೆಲ್ಬೋರ್ನ್,ಜ.27: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಹಾಗೂ ಏಳನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು 6-3, 3-6, 7-6(6), 7-6(4) ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ 12ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕಿರ್ಗಿಯೊಸ್ 19 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್‌ರನ್ನು ಪಂದ್ಯದ ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಮಣಿಸಿದರು. ನಡಾಲ್ ಟೂರ್ನಿಯಲ್ಲಿ ಮೊದಲ ಬಾರಿ ಸೆಟ್‌ನ್ನು ಕಳೆದುಕೊಂಡರು. ಅಗ್ರ ಶ್ರೇಯಾಂಕದ ನಡಾಲ್ ಅಂತಿಮ-8ರ ಸುತ್ತಿನಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಝ್ವೆರೆವ್ ರಶ್ಯದ ಆ್ಯಂಡ್ರೆ ರುಬ್ಲೆವ್‌ರನ್ನು 6-4, 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ರುಬ್ವೆವ್‌ರ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಝ್ವೆರೆವ್ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದರು.

ರುಬ್ಲೆವ್ ದೋಹಾ ಹಾಗೂ ಅಡಿಲೇಡ್‌ನಲ್ಲಿ ಪ್ರಶಸ್ತಿ ಜಯಿಸಿ ಮೆಲ್ಬೋರ್ನ್‌ಗೆ ಆಗಮಿಸಿದ್ದರು. ನವೆಂಬರ್‌ನಲ್ಲಿ ನಡೆದ ಡೇವಿಸ್ ಕಪ್ ಫೈನಲ್ಸ್‌ನ ಎಲ್ಲ ನಾಲ್ಕು ಸಿಂಗಲ್ಸ್ ಪಂದ್ಯಗಳನ್ನು ಜಯಿಸಿದ್ದರು. ಆದರೆ,ಸೋಮವಾರ ಅತ್ಯುತ್ತಮ ಪ್ರದರ್ಶನ ನೀಡಿದ ಝ್ವೆರೆವ್ ಪ್ರತಿ ಸೆಟ್‌ನಲ್ಲಿ ಎದುರಾಳಿಯ ಸರ್ವ್‌ನ್ನು ತುಂಡರಿಸಿದರು. ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಝ್ವೆರೆವ್ ಮುಂದಿನ ಸುತ್ತಿನಲ್ಲಿ ಸ್ವಿಸ್‌ನ ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ. ವಾವ್ರಿಂಕ ಕ್ವಾ.ಫೈನಲ್‌ಗೆ: ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸ್ಟಾನ್ ವಾವ್ರಿಂಕ ವಿಶ್ವದ ನಂ.4ನೇ ಆಟಗಾರ ಡ್ಯಾನಿಲ್ ಮೆಡ್ವಡೆವ್‌ರನ್ನು ಮಣಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಾವ್ರಿಂಕ ಅವರು ಮೆಡ್ವಡೆವ್‌ರನ್ನು 6-2, 2-6, 4-6, 7-6(7/2), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ವಾವ್ರಿಂಕ ಮುಂದಿನ ಸುತ್ತಿನಲ್ಲಿ ಜರ್ಮನಿಯ ಝ್ವೆರೆವ್‌ರನ್ನು ಎದುರಿಸಲಿದ್ದಾರೆ.

 18ನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ವಾವ್ರಿಂಕ, ರೋಜರ್ ಫೆಡರರ್, ರಫೆಲ್ ನಡಾಲ್, ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ಬಳಿಕ ಈ ಸಾಧನೆ ಮಾಡಿರುವ ಸಕ್ರಿಯ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News