×
Ad

ಭಾರತದ ವರ್ಚಸ್ಸಿಗೆ ಕಳಂಕ ತಂದ ಮೋದಿ: ರಾಹುಲ್ ಗಾಂಧಿ

Update: 2020-01-28 21:51 IST

ಜೈಪುರ, ಜ. 28: ಕೇಂದ್ರದ ಮೋದಿ ಸರಕಾರದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಭಾರತದ ವರ್ಚಸ್ಸಿಗೆ ಕಳಂಕ ತಂದಿದ್ದಾರೆ. ಹೂಡಿಕೆದಾರರು ದೂರ ಸರಿಯುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ, ಯುವಕರು ತಮ್ಮ ಧ್ವನಿಯನ್ನು ದಮನಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಭಾತೃತ್ವದ, ಪ್ರೀತಿ ಹಾಗೂ ಏಕತೆಯ ದೇಶ ಎಂಬ ಕಾರಣಕ್ಕೆ ಜಗತ್ತಿನಲ್ಲಿ ಭಾರತಕ್ಕೆ ಗೌರವ ಹಾಗೂ ವರ್ಚಸ್ಸು ಇದೆ. ದ್ವೇಷ, ವಿಭಜನಕಾರಿ ದೇಶ ಎಂಬುದು ಪಾಕಿಸ್ತಾನದ ಬಗ್ಗೆ ಜಗತ್ತಿನಲ್ಲಿರುವ ಕಲ್ಪನೆ. ಆದರೆ, ಭಾರತದ ವರ್ಚಸ್ಸಿಗೆ ನರೇಂದ್ರ ಮೋದಿ ಹಾನಿ ಉಂಟು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಜೈಪುರದಲ್ಲಿ ಮಂಗಳವಾರ ನಡೆದ ‘ಯುವ ಆಕ್ರೋಶ್’ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಭಾರತವನ್ನು ಜಗತ್ತಿನ ಅತ್ಯಾಚಾರದ ರಾಜಧಾನಿ ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು. ಹಳೆಯ ಮಾನದಂಡ ಪರಿಗಣಿಸಿದರೆ, ಭಾರತದ ಜಿಡಿಪಿ ಕೇವಲ 2.5ರಷ್ಟು ಮಾತ್ರ ಏರಿಕೆಯಾಗುತ್ತಿದೆ. ಇದು ಅವಮಾನಕರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 ‘‘ಯುಪಿಎ ಸರಕಾರದ ಅವಧಿಯಲ್ಲಿ ಜಿಡಿಪಿಯ ಬೆಳವಣಿಗೆ ದರ ಶೇ. 9 ಇತ್ತು. ಲೆಕ್ಕಾಚಾರದ ವ್ಯವಸ್ಥೆ ಬದಲಾಯಿಸುವ ಮೂಲಕ ಮೋದಿ ಸರಕಾರ ಜಿಡಿಪಿ ಬೆಳವಣಿಗೆ ದರವನ್ನು ನಿಧಾನಗೊಳಿಸಿತು. ಈ ವ್ಯವಸ್ಥೆಯ ಪ್ರಕಾರ ಜಿಡಿಪಿ ಬೆಳವಣಿಗೆ ದರ ಕೇವಲ ಶೇ. 5. ಯುಪಿಎ ಸರಕಾರದ ಅವಧಿಯಲ್ಲಿ ಇದ್ದ ವ್ಯವಸ್ತೆಯಲ್ಲಿ ಲೆಕ್ಕ ಹಾಕಿದರೆ ಇದು ಕೇವಲ ಶೇ. 2.5. ಇದು ಅವಮಾನಕರ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದರು, ಆದರೆ, ಕಳೆದ ಒಂದು ವರ್ಷದಲ್ಲಿ 1 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News