ಬಿಜೆಪಿಯ ನೋಟಿಸ್ ಕೊಡುವ ನಾಟಕ

Update: 2020-02-05 05:15 GMT

ಮಹಾತ್ಮಾ ಗಾಂಧೀಜಿಯವರನ್ನು ಅವಹೇಳನ ಮಾಡಿದ್ದಕ್ಕಾಗಿ ಕಾರವಾರದ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆಗೆ ಬಿಜೆಪಿ ವರಿಷ್ಠ ಮಂಡಳಿ ನೋಟಿಸ್ ನೀಡಿದೆ. ಬಿಜೆಪಿಯ ಈ ಕ್ರಮ ಕೇವಲ ನಾಟಕವಲ್ಲದೆ ಬೇರೇನೂ ಅಲ್ಲ. ಅನಂತಕುಮಾರ್ ಹೆಗಡೆ ಇಂತಹ ಮಾತನ್ನು ಇದೇ ಮೊದಲ ಬಾರಿ ಆಡಿಲ್ಲ, ನೋಟಿಸ್ ಬಂದಿದೆ ಎಂದು ಅವರು ಮಾತಾಡುವುದನ್ನು ನಿಲ್ಲಿಸುವುದಿಲ್ಲ. ಅಸಲಿಗೆ ಇದು ಅವರು ತಾನಾಗಿ ಆಡಿದ ಮಾತಲ್ಲ. ಅವರು ಪಾತ್ರಧಾರಿ ಮಾತ್ರ. ಸೂತ್ರಧಾರರು ನಾಗಪುರದಲ್ಲಿದ್ದಾರೆ. ಅನಂತಕುಮಾರ್ ಆ ಸೂತ್ರಧಾರರು ಆಡಿಸುವ ಗೊಂಬೆ ಮಾತ್ರ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಮಾಡಲು ಕಾರ್ಯ ತಂತ್ರ ರೂಪಿಸಿರುವ ನಾಗಪುರದ ಗುರುಗಳು ಇಂತಹ ಮಾತುಗಳನ್ನು ಇಂತಹವರಿಂದ ಆಡಿಸಿ ಜನರ ಪ್ರತಿಕ್ರಿಯೆ ಏನು ಬರುತ್ತದೆ ಎಂದು ನೋಡಿ ಮತ್ತೆ ಹೊಸ ತಂತ್ರ ರೂಪಿಸುತ್ತಾರೆ. ಇದರಲ್ಲಿ ಬಿಜೆಪಿ ಪಾತ್ರ ನಗಣ್ಯ. ಅದು ಕೂಡ ರಿಮೋಟ್ ಹಿಡಿದುಕೊಂಡು ಕುಳಿತವರು ಬದಲಿಸಿದಂತೆ ತನ್ನ ನಿಲುವುಗಳನ್ನು ಬದಲಿಸುತ್ತಾ ಹೋಗುತ್ತದೆ. ಇದರಲ್ಲಿ ಅಚ್ಚರಿಯೇನೂ ಇಲ್ಲ. ಉತ್ತರ ಕನ್ನಡದ ಅಮಾಯಕ ಜನ ಮಾತ್ರ ಈ ಸೂತ್ರದ ಗೊಂಬೆಯ ಆಟವನ್ನು ನಿಜವೆಂದು ನಂಬಿ ಪ್ರತಿವರ್ಷ ಇವರನ್ನು ಲೋಕಸಭೆಗೆ ಆರಿಸಿ ಕಳಿಸುತ್ತಿದ್ದಾರೆ.

  ಅನಂತಕುಮಾರ್‌ರ ಅವಾಂತರಗಳು ಒಂದೆರಡಲ್ಲ. ಕಳೆದ ಲೋಕಸಭಾ ಚುನಾವಣೆಗೆ ಮುನ್ನ ‘‘ನಾವು ಸಂವಿಧಾನ ಬದಲಿಸಲು ಬಂದಿದ್ದೇವೆ, ಬದಲಿಸಿಯೇ ತೀರುತ್ತೇವೆ’’ ಎಂದು ಬಹಿರಂಗವಾಗಿ ಹೇಳಿದ್ದರು. ಶಿರಸಿಯಲ್ಲಿ ಕಾರ್ಯನಿರತ ಸರಕಾರಿ ವೈದ್ಯರ ಮೇಲೆ ಹಲ್ಲೆ ಮಾಡಿದರು. ಬುದ್ಧಿಜೀವಿಗಳನ್ನು ಹೀನಾಯವಾಗಿ ಬೈಯುತ್ತ ಬಂದರು.. ಆದರೂ ಬಿಜೆಪಿ ಆನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ನೀಡಿತ್ತು. ಮತ್ತೆ ಆರಿಸಿ ಬಂದರು. ಬಿಜೆಪಿಯಲ್ಲಿ ಇಂತಹ ಮಾತನ್ನಾಡುವುದು ಅನಂತಕುಮಾರ್ ಒಬ್ಬರೇ ಅಲ್ಲ. ವಿರೋಧಿಗಳನ್ನು ಗುಂಡು ಹಾಕಿ ಸಾಯಿಸುವ ಮಾತು ಸುರೇಶ ಅಂಗಡಿ, ಸೇರಿದಂತೆ ಬಹುತೇಕ ಕೇಂದ್ರ ಮತ್ತು ರಾಜ್ಯದ ಮಂತ್ರಿಗಳಿಂದ ಬರುತ್ತಲೇ ಇವೆ. ಅವರ್ಯಾರ ಮೇಲೂ ಬಿಜೆಪಿ ಕ್ರಮ ಕೈಗೊಂಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಹಾಡಿ ಹೊಗಳಿದರು. ಇದು ನಾಗಪುರದಲ್ಲಿರುವ ಸಂವಿಧಾನೇತರ ಅಧಿಕಾರ ಕೇಂದ್ರದ ಗುರುಗಳಿಗೆ ತುಂಬ ಇಷ್ಟವಾದ ಮಾತು. ಆ ಗುರುಗಳ ಸೂಚನೆಯಂತೆ ಬಿಜೆಪಿ ಈಕೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂತು. ಇಂತಹದೇ ಪ್ರಚೋದನಕಾರಿ ಮಾತುಗಳನ್ನಾಡುತ್ತಾ ಬಂದ ಯೋಗಿ ಆದಿತ್ಯನಾಥರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕುರ್ಚಿ ತಾನಾಗಿ ಸಿಕ್ಕಿತು.

ಬಿಜೆಪಿಯಲ್ಲಿ ಆಂತರಿಕವಾಗಿ ಎಂತಹ ಪರಿಸ್ಥಿತಿ ಇದೆ ಎಂದರೆ ಪಕ್ಷದ ಟಿಕೆಟ್ ಪಡೆಯಬೇಕೆಂದರೆ, ಮಂತ್ರಿಯಾಗಬೇಕೆಂದರೆ ಈ ರೀತಿ ಉದ್ರೇಕಕಾರಿ ಮಾತುಗಳನ್ನು ಆಡಿ ಸಂಘದ ನಾಯಕರನ್ನು ಒಲಿಸಿಕೊಳ್ಳಬೇಕಾಗುತ್ತದೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಹೊನ್ನಾಳಿಯ ರೇಣುಕಾಚಾರ್ಯ, ಮಂಗಳೂರಿನ ಸಂಸದರು ಪದೇ ಪದೇ ಪ್ರಚೋದಕ ಮಾತುಗಳನ್ನು ಆಡುವುದು ತಮ್ಮ ರಾಜಕೀಯ ಸ್ಥಾನ ಮಾನದ ಭಡ್ತಿಗಾಗಿ ಅಲ್ಲದೆ ಬೇರೇನೂ ಅಲ್ಲ. ಇದರಲ್ಲಿ ಎರಡು ವಿಧ. ಅನಂತಕುಮಾರ್ ಹೆಗಡೆ ಅಂತಹವರು ಆರೆಸ್ಸೆಸ್ ಶಾಖೆಯಲ್ಲೇ ಬೆಳೆದವರು. ಅವರು ಸಂಘದ ಗುರುಗಳ ಆಣತಿಯಂತೆ ಶಿಸ್ತಿನ ಸಿಪಾಯಿಗಳಾಗಿ ಇಂತಹ ಹೇಳಿಕೆಗಳನ್ನು ಆಗಾಗ ನೀಡುತ್ತಾರೆ. ಪಾಟೀಲರಂತಹವರು ಹಾಗಲ್ಲ, ಬಿಜೆಪಿಯಲ್ಲಿ ತಮ್ಮ ಕುರ್ಚಿಯ ಹಿತಾಸಕ್ತಿ ಕಾಪಾಡಿಕೊಳ್ಳಲು ಅನಗತ್ಯವಾಗಿ, ಅಪ್ರಚೋದಿತವಾಗಿ ಇಂತಹ ಹೇಳಿಕೆಗಳನ್ನು ನೀಡಿ ಮನರಂಜನೆ ಒದಗಿಸುತ್ತಾರೆ. ಒಟ್ಟಾರೆ ಇವರ ಮಾತುಗಳು ಸಮಾಜವನ್ನು ಕಟ್ಟುವ, ದೇಶವನ್ನು ನಾಶ ಮಾಡುವ ಮಾತುಗಳಲ್ಲದೆ ಬೇರೇನೂ ಅಲ್ಲ.

ಬಿಜೆಪಿಯ ಇನ್ನೊಂದು ಸಮಸ್ಯೆ ಅಂದರೆ ಕುಸಿದು ಬೀಳುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರಡೆ ಸೆಳೆಯಲು ಅದು ಹೆಣಗಾಡುತ್ತಿದೆ. ಕರಾಳ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಚಳವಳಿ ಕೇಂದ್ರ ಸರಕಾರದ ನಿದ್ದೆಗೆಡಿಸಿದೆ. ಅದಕ್ಕಾಗಿ ದಾರಿ ಕಾಣದೆ ಅನಂತಕುಮಾರ್ ಹೆಗಡೆ ಅಂತಹವರಿಂದ ಇಂತಹ ಮಾತುಗಳನ್ನಾಡಿಸಿ ಚರ್ಚೆಯ ದಿಕ್ಕನ್ನು ಬದಲಿಸಲು ಯತ್ನಿಸುತ್ತಿದೆ. ಇದರ ಜೊತೆಗೆ ಅನಂತಕುಮಾರ್ ಅಂತಹವರಿಗೆ ನೋಟಿಸ್ ನೀಡಿ ಜನರ ಕಣ್ಣಲ್ಲಿ ಮಣ್ಣೆರಚುವ ಕಪಟ ನಾಟಕ ಆಡುತ್ತಿದೆ. ಒಂದೆಡೆ ಗೋಡ್ಸೆ ಸಿದ್ಧಾಂತವನ್ನೇ ಪ್ರತಿಪಾದಿಸುತ್ತಾ, ಇನ್ನೊಂದೆಡೆ ಗೋಡ್ಸೆ ನಮ್ಮವನಲ್ಲ ಎಂದು ಹೇಳುತ್ತಾ ಹೆಗಡೆಗೆ ನೋಟಿಸ್ ನೀಡಿ ತನ್ನ ಅಮಾಯಕತ್ವವನ್ನು ತೋರಿಸಲು ಯತ್ನಿಸುತ್ತಿದೆ. ಇದರ ಈ ನಾಟಕ ಈ ದೇಶಕ್ಕೆ ಹೊಸದಲ್ಲ. ಕ್ರಮೇಣ ಜನಸಾಮಾನ್ಯರಿಗೆ ಸತ್ಯ ಗೋಚರವಾಗುತ್ತಿದೆ.

ಬಿಜೆಪಿ ಹೈಕಮಾಂಡ್ ತನಗೆ ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಅನಂತಕುಮಾರ್ ಹೆಗಡೆ ತಾನು ಯಾರನ್ನೂ ಉಲ್ಲೇಖಿಸಿ ಹೇಳಿಲ್ಲ, ಸ್ವಾತಂತ್ರ್ಯ ಹೋರಾಟದ ಅಂದಿನ ಸ್ಥಿತಿಯ ಬಗ್ಗೆ ಹೇಳಿದ್ದೇನೆ. ಹೀಗಾಗಿ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಬಿಜೆಪಿ ವರಿಷ್ಠರು ತಾವು ನೀಡಿದ ನೋಟಿಸ್‌ನ ಬಗ್ಗೆ ಪ್ರಾಮಾಣಿಕರಾಗಿದ್ದರೆ, ಈ ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟಿಸಲಿ. ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ. ಅದಾವುದನ್ನೂ ಮಾಡದೆ ಸುಮ್ಮನೆ ನೋಟಿಸ್ ನೀಡುವುದು ಬರೀ ನಾಟಕವಲ್ಲದೆ ಬೇರೇನೂ ಅಲ್ಲ.

ಅನಂತಕುಮಾರ್ ಹೆಗಡೆ ಆರೆಸ್ಸೆಸ್ ಸ್ವಯಂ ಸೇವಕ, ಸ್ವಾತಂತ್ರ್ಯ ಹೋರಾಟದ ಬಗ್ಗೆ, ಗಾಂಧೀಜಿ ಬಗ್ಗೆ ಸಂಘದ ಅಘೋಷಿತ ನಿಲುವನ್ನೇ ಅವರು ಪ್ರತಿಪಾದಿಸಿದ್ದಾರೆ. ಇದೆಲ್ಲ ಪರಸ್ಪರ ಚರ್ಚಿಸಿ ಆಡಿದ ಜನ ವಂಚನೆಯ ನಾಟಕವಲ್ಲದೆ ಬೇರೇನೂ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News