ದಿಲ್ಲಿ ಡಿಸಿಎಂ ಸಿಸೋಡಿಯಾರ ಒಎಸ್‌ಡಿಯನ್ನು ಬಂಧಿಸಿದ ಸಿಬಿಐ

Update: 2020-02-07 14:06 GMT

ಹೊಸದಿಲ್ಲಿ,ಫೆ.7: ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಗೋಪಾಲಕೃಷ್ಣ ಮಾಧವ ಅವರನ್ನು 2.26ಲ.ರೂ.ಲಂಚ ಪ್ರಕರಣದಲ್ಲಿ ಬಂಧಿಸಿರುವ ಸಿಬಿಐ ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇನ್ನೋರ್ವ ಐಎಎಸ್ ಅಧಿಕಾರಿಯ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಸಿಬಿಐ ಬುಧವಾರ ಧೀರಜ್ ಗುಪ್ತಾ ಎಂಬ ಮಧ್ಯವರ್ತಿಯನ್ನು ಬಂಧಿಸಿದ್ದು,ಆತ ನೀಡಿದ್ದ ಮಾಹಿತಿಯ ಮೇರೆಗೆ ಗುರುವಾರ ಸಂಜೆೆ ಮಾಧವರನ್ನು ಬಂಧಿಸಿತ್ತು.ಗುಪ್ತಾ ಮಾಧವ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ವಿಚಾರಣೆ ವೇಳೆ ಮಾಧವ ಐಎಎಸ್ ಅಧಿಕಾರಿಯೂ ಭಾಗಿಯಾಗಿರುವುದಾಗಿ ಆರೋಪಿಸಿದ್ದರು.

ಪ್ರಕರಣದಲ್ಲಿ ಸಿಸೋದಿಯಾ ಭಾಗಿಯಾಗಿರುವುದು ಈವರೆಗೆ ಕಂಡು ಬಂದಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.

ದಿಲ್ಲಿ ಸರಕಾರದ ತೆರಿಗೆ ಇಲಾಖೆಯಲ್ಲಿ ಜಿಎಸ್‌ಟಿ ಅಧಿಕಾರಿಯಾಗಿರುವ ಮಾಧವ 2015ರಿಂದ ಸಿಸೋದಿಯಾರ ಒಎಸ್‌ಡಿ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗುಪ್ತಾ ಮಾಧವ ಸೇರಿದಂತೆ ಕೆಲವು ಜಿಎಸ್‌ಟಿ ಅಧಿಕಾರಿಗಳ ಪರವಾಗಿ ಸರಕು ಸಾಗಣೆದಾರರಿಗೆ ಜಿಎಸ್‌ಟಿ ವಿಧಿಸದಿರಲು ಅವರಿಂದ ಲಂಚವನ್ನು ಸಂಗ್ರಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿಸೋದಿಯಾ,‘ಲಂಚ ಸ್ವೀಕರಿಸುತ್ತಿದ್ದ ಜಿಎಸ್‌ಟಿ ಅಧಿಕಾರಿಯನ್ನು ಸಿಬಿಐ ಬಂಧಿಸಿರುವ ಮಾಹಿತಿ ಲಭಿಸಿದೆ. ಈ ಅಧಿಕಾರಿ ನನ್ನ ಕಚೇರಿಯಲ್ಲಿ ಒಎಸ್‌ಡಿಯೂ ಆಗಿ ನಿಯೋಜಿತಗೊಂಡಿದ್ದರು. ಸಿಬಿಐ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕಳೆದ ಐದು ವರ್ಷಗಳಲ್ಲಿ ಇಂತಹ ಹಲವಾರು ಅಧಿಕಾರಿಗಳ ಬಂಧನವಾಗುವಂತೆ ಮಾಡಿದ್ದೇನೆ ’ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News