ಭಾರತದ ಜತೆಗಿನ ಸಂಬಂಧ : ಶ್ರೀಲಂಕಾ ಅಧ್ಯಕ್ಷ ಹೇಳಿದ್ದೇನು ?
ಹೊಸದಿಲ್ಲಿ: ಭಾರತ ನಮ್ಮ ಸಂಬಂಧಿಕ ರಾಷ್ಟ್ರ, ಇತರ ದೇಶಗಳು ಕೇವಲ ಮಿತ್ರರಾಷ್ಟ್ರಗಳು ಎಂದು ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಸೆ ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಅವರು ಹೊಸದಿಲ್ಲಿಯ ಐಟಿಸಿ ಮೌಲ್ಯ ಶೆರ್ಟಾನ್ ಹೋಟೆಲ್‌ನಲ್ಲಿ "ಹಿಂದೂಸ್ತಾನ್ ಟೈಮ್ಸ್"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶ್ರೀಲಂಕಾ- ಪಾಕಿಸ್ತಾನ ಸಂಬಂಧ, ಸಂವಿಧಾನದ 13ನೇ ತಿದ್ದುಪಡಿ ಅನ್ವಯ ತಮಿಳು ಪ್ರಾಂತೀಯ ಮಂಡಳಿಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಬದಲಾಗಿ ಉದ್ದೇಶಿತ ಬದಲಾವಣೆಗಳು, ಚೀನಾ ಜತೆಗಿನ ಸಂಪರ್ಕ ಮತ್ತಿತರ ವಿಷಯಗಳ ಬಗ್ಗೆ ದೇಶದ ನಿಲುವನ್ನು ಪ್ರಕಟಿಸಿದ್ದಾರೆ.
ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎನ್ನಲಾದ ಪಾಕಿಸ್ತಾನದ ಜತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ, "ಭಯೋತ್ಪಾದನೆ ಎಲ್ಲಿಂದ ನಡೆದರೂ ನಾವು ವಿರೋಧಿಸುತ್ತೇವೆ. ಭಾರತ ಹಾಗೂ ಪಾಕಿಸ್ತಾನದ ಜತೆ ಈ ಬಗ್ಗೆ ಚರ್ಚಿಸಲಾಗಿದೆ. ಇನ್ನೊಂದು ಬಗೆಯ ಭಯೋತ್ಪಾದನೆ ಎನಿಸಿದ ನಾಗರಿಕ ಯುದ್ಧವನ್ನು ಕೊನೆಗೊಳಿಸಲು ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ನಮಗೆ ನೆರವಾಗಿವೆ. ಪಾಕಿಸ್ತಾನ ನಮಗೆ ಶಸ್ತ್ರಾಸ್ತ್ರ ಹಾಗೂ ವಿಮಾನ ನೀಡಿದೆ. ಭಾರತ ಕೂಡಾ ನೆರವಾಗಿದೆ. ಆದರೆ ಅದನ್ನು ಈಗ ಬಹಿರಂಗಪಡಿಸುವುದು ಬೇಡ. ಭಾರತದ ನೆರವಿಲ್ಲದೆ ನಾವು ಯುದ್ಧ ಗೆಲ್ಲುವುದು ಸಾಧ್ಯವೇ ಇರಲಿಲ್ಲ ಎನ್ನುವುದು ನನ್ನ ನಂಬಿಕೆ" ಎಂದು ಹೇಳಿದರು.
ಭಾರತ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನಿಮ್ಮ ಹಿತಾಸಕ್ತಿಯನ್ನು ಕಾಪಾಡುವುದಾಗಿ ಭಾರತ ಹೇಳುತ್ತಲೇ ಬಂದಿದೆ. ಹಸ್ತಕ್ಷೇಪ ಮಾಡುತ್ತಿದೆ ಎನ್ನುವುದು ಚೀನಾದ ಅಭಿಪ್ರಾಯ. ಆದರೆ ಅಂತಿಮವಾಗಿ ಏನು ಹಸ್ತಕ್ಷೇಪ ಎನ್ನುವುದನ್ನು ನಿರ್ಧರಿಸಬೇಕಾದ್ದು ಶ್ರೀಲಂಕಾ ಎಂದು ಸ್ಪಷ್ಟಪಡಿಸಿದರು.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮತ್ತು ಭಾರತ ಜತೆಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಕೇಳಿದಾಗ, "ಯಾವ ದೇಶ ಯಾವ ನಿಲುವು ತೆಗೆದುಕೊಂಡರೂ, ಭಾರತದ ಆಂತರಿಕ ವಿಷಯಗಳಲ್ಲಿ ನಾವು ಷಾಮೀಲಾಗುವುದಿಲ್ಲ. ಆದರೆ ನೆನಪಿಡಿ: "ಭಾರತ ನಮ್ಮ ಸಂಬಂಧಿ; ಇತರ ದೇಶಗಳು ಸ್ನೇಹಿತರು ಎಂದು ನಾನು ಸದಾ ಹೇಳುತ್ತಿರುತ್ತೇನೆ" ಎಂದು ಉತ್ತರಿಸಿದರು.