ಸುಳ್ಳು ಸುದ್ದಿ ಹರಡುವುದು ವಿದೇಶ ಸಚಿವರ ಕೆಲಸ ಅಲ್ಲ: ಜೈಶಂಕರ್ ಗೆ ಗುಹಾ

Update: 2020-02-13 10:55 GMT

ಹೊಸದಿಲ್ಲಿ: ಜವಾಹರಲಾಲ್ ನೆಹರೂ ಅವರ ಸಚಿವ ಸಂಪುಟದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಹೊರಗಿಡಲಾಗಿತ್ತೇ ಅಥವಾ ಇಲ್ಲವೇ ಎಂಬ ವಿಚಾರದ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಅವರ ನಡುವೆ ಇಂದು ಟ್ವಿಟರ್ ನಲ್ಲಿ ವಾಕ್ಸಮರ ನಡೆದಿದೆ.

ನಾರಾಯಣ ಬಸು ಅವರು ಬರೆದಿರುವ `ವಿಪಿ ಮೆನನ್: ದಿ ಅನ್‍ ಸಂಗ್ ಆರ್ಕಿಟೆಕ್ಟ್ ಆಫ್ ಮಾಡರ್ನ್ ಇಂಡಿಯಾ' ಕೃತಿ ಬಿಡುಗಡೆ ಸಮಾರಂಭದಲ್ಲಿ ಬುಧವಾರ ಭಾಗವಹಿಸಿದ್ದ ಜೈಶಂಕರ್ ``ನೆಹರೂ ಅವರಿಗೆ 1947ರಲ್ಲಿ ತಮ್ಮ ಸಚಿವ ಸಂಪುಟದಲ್ಲಿ ಪಟೇಲ್ ಅವರಿರುವುದು ಬೇಕಿರಲಿಲ್ಲ ಹಾಗೂ ಸಚಿವ ಸಂಪುಟದ ಆರಂಭಿಕ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟಿದ್ದರು ಎಂಬುದು ಈ ಕೃತಿ ಮೂಲಕ ತಮಗೆ ತಿಳಿದು ಬಂತು'' ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

ಗುರುವಾರ ಈ ಕುರಿತಂತೆ ಟ್ವೀಟ್ ಮಾಡಿ ಜೈಶಂಕರ್ ಹೇಳಿಕೆಯನ್ನು ಸರಿಪಡಿಸಿದ ಗುಹಾ ಅದೊಂದು `ಮಿಥ್ಯೆ' ಎಂದರಲ್ಲದೆ  ಸಚಿವರು `ನಕಲಿ ಸುದ್ದಿ' ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ThePrintನಲ್ಲಿ ಶ್ರೀನಾಥ್ ರಾಘವನ್ ಅವರ ಇತ್ತೀಚಿಗಿನ ಲೇಖನ "ನೆಹರೂ ಯಾವತ್ತೂ ತಮ್ಮ ಸಚಿವ ಸಂಪುಟ ಪಟ್ಟಿಯಿಂದ ಪಟೇಲ್ ಅವರನ್ನು ಹೊರಗಿಟ್ಟಿರಲಿಲ್ಲ. ಲೂಯಿಸ್ ಮೌಂಟ್ ಬ್ಯಾಟನ್ ಹಾಗೂ ವಿಪಿ ಮೆನನ್ ಈ ವಿಚಾರ ತಪ್ಪಾಗಿ ಹೇಳಿದ್ದಾರೆ'' ಎಂಬುದನ್ನು ಗುಹಾ ತಮ್ಮ ಟ್ವೀಟ್‍ ನಲ್ಲಿ ಉಲ್ಲೇಖಿಸಿದರು.

ಪಟೇಲ್ ಅವರನ್ನು ಸಂಪುಟಕ್ಕೆ ಸೇರಿಸಿರುವ ಕುರಿತು ನೆಹರೂ ಮತ್ತು ಪಟೇಲ್ ಅವರ ನಡುವಿನ ಪತ್ರ ವಿನಿಮಯದ ಬಗ್ಗೆ ಅಶೋಕ ವಿವಿಯಲ್ಲಿ ಅಂತರಾಷ್ಟ್ರೀಯ ಸಂಬಂಧಗಳು ಹಾಗೂ ಇತಿಹಾಸ ಪ್ರೊಫೆಸರ್ ಆಗಿರುವ ರಾಘವನ್ ಬರೆದಿದ್ದಾರಲ್ಲದೆ ಪಟೇಲ್ ಅವರನ್ನು ಸಂಪುಟಕ್ಕೆ ಸೇರಿಸಿರಲಿಲ್ಲ ಎಂಬ ವಿ ಪಿ ಮೆನನ್ ಹಾಗೂ ಮೌಂಟ್ ಬ್ಯಾಟನ್ ವಾದ ತಪ್ಪು ಎಂದೂ ಹೇಳಿದ್ದರು.

ಗುಹಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಜೈಶಂಕರ್, "ಕೆಲ ವಿದೇಶಾಂಗ ಸಚಿವರು ಪುಸ್ತಕಗಳನ್ನೂ ಓದುತ್ತಾರೆ. ಪ್ರೊಫೆಸರುಗಳಿಗೂ ಇದೊಂದು ಉತ್ತಮ ಹವ್ಯಾಸ. ಹಾಗಿದ್ದಲ್ಲಿ ನಾನು ನಿನ್ನೆ ಬಿಡುಗಡೆ ಮಾಡಿದ ಕೃತಿ ಓದುವಂತೆ ಬಲವಾಗಿ ಶಿಫಾರಸು ಮಾಡುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಗುಹಾ ಪಟೇಲ್ ಅವರನ್ನು ಸಂಪುಟಕ್ಕೆ ಸೇರಲು ಆಹ್ವಾನಿಸಿ ನೆಹರೂ ಬರೆದ ಪತ್ರದ ಫೋಟೋ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಜೈಶಂಕರ್ ಇನ್ನಷ್ಟೇ ಉತ್ತರಿಸಬೇಕಿದ್ದರೂ, ತಾವು ಜೆಎನ್‍ಯುವಿನಲ್ಲಿ ಪಿಎಚ್‍ಡಿ ಮಾಡುವಾಗ ಓದಿದ್ದ ಪುಸ್ತಕಗಳನ್ನು ಓದಲು ಜೈಶಂಕರ್ ಅವರಿಗೆ ಗುಹಾ ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News