ದಿಲ್ಲಿ ಚುನಾವಣೆಯಲ್ಲಿ ಕಂಡ ರಾಜಕೀಯ ಬದಲಾವಣೆ

Update: 2020-02-13 18:26 GMT

ಆಮ್ ಆದ್ಮಿ ಪಕ್ಷ ತಾನು ಕೈಗೊಂಡ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಮತ ಯಾಚಿಸಿತೇ ಹೊರತು ಧರ್ಮದ, ಜಾತಿಯ, ಪ್ರಾಂತದ, ರೈತರ, ದೇಶದ ಅಥವಾ ಸೈನಿಕರ ಹೆಸರನ್ನು ಹೇಳಿ ಮತಯಾಚಿಸಲಿಲ್ಲ. ಅಭಿವೃದ್ಧಿಗೆ ಪೂರಕವಾಗಿರದ ಯಾವುದೇ ವಿಷಯವನ್ನಾಧರಿಸಿ ಮತಯಾಚಿಸಿದರೂ ಯಾರಿಗೂ ಸೊಪ್ಪುಹಾಕದೇ ಜನರು ಅಭಿವೃದ್ಧಿಗೆ ಮತ ಹಾಕಿರುವುದು ನಿಜವಾಗಿಯೂ ಶ್ಲಾಘನೀಯ.


ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಎಂಬ ಜೂಜಾಟದಲ್ಲಿ ಪ್ರತೀ ಬಾರಿಯೂ ಮತದಾರನಿಗೆ ಸೋಲಾಗುತ್ತದೆ ಎನ್ನುವ ಸಂದರ್ಭದಲ್ಲಿ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ನೈಜವಾಗಿ ಪ್ರತಿಫಲಿಸಿದ್ದು ಇತ್ತೀಚೆಗೆ ನಡೆದ ದಿಲ್ಲಿಯ ಚುನಾವಣೆಯಲ್ಲಿ ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವ ಎಲ್ಲಿದೆ ಎಂದು ಹುಡುಕುವ ಸಮಯದಲ್ಲಿ ಆಮ್ ಆದ್ಮಿ ಪಕ್ಷ ಗೆದ್ದಿರುವುದು ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸಿದ್ದಕ್ಕೆ ಉತ್ತಮ ಉದಾಹರಣೆ. ನೈಜ ಸಮಸ್ಯೆಗಳು ಮತ್ತು ಐದು ವರ್ಷದ ಅಧಿಕಾರಾವಧಿಯಲ್ಲಿ ಸರಕಾರ ನೀಡಿದ ಯೋಜನೆಗಳನ್ನು ಆಧಾರವಾಗಿಟ್ಟುಕೊಂಡು ಅಧಿಕ್ಕಾರಕ್ಕೇರಲಿರುವ ಕೇಜ್ರಿವಾಲ್ ಸರಕಾರ ಮೂಡಿಸಿದ ಅಭಿವೃದ್ಧಿಯ ಛಾಪು ಜನರ ಮನದಲ್ಲಿ ಹಾಸುಹೊಕ್ಕಾಗಿ ಕುಳಿತಿದೆ ಎಂಬ ಮಾಹಿತಿಯನ್ನು ಚುನಾವಣಾ ಮತದಾನದ ಮುಖಾಂತರ ಜನರು ಸ್ಪಷ್ಟಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷವು ನೀಡಿದ ಉಚಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಆರೋಗ್ಯ ಸೇವೆ, ಉಚಿತ ವಿದ್ಯುಚ್ಛಕ್ತಿ ವ್ಯವಸ್ಥೆ, ಹೆಣ್ಣುಮಕ್ಕಳಿಗೆ ಉಚಿತ ಡಿ.ಟಿ.ಎಸ್. ಬಸ್ ಮತ್ತು ಮೆಟ್ರೋ ಪ್ರಯಾಣ ವ್ಯವಸ್ಥೆ, ಐಸಿಟಿ ಆಧಾರಿತ ಶಾಲೆಗಳು, ಗ್ರಂಥಾಲಯ ಮತ್ತು ಅತ್ಯಾಧುನಿಕ ತರಗತಿಗಳ ನಿರ್ಮಾಣ, ಶಾಲಾ ಸುಧಾರಣಾ ಕ್ರಮಗಳು, ಸಂತೋಷದಾಯಕ ಪಠ್ಯಕ್ರಮ ಮತ್ತು ಶಿಕ್ಷಕರಿಗೆ ವಿದೇಶದಲ್ಲಿ ತರಬೇತಿ, ಖಾಸಗಿ ಶಾಲೆಗಳಿಗೆ ಒಮ್ಮೆಯೂ ಶುಲ್ಕ ಹೆಚ್ಚಿಸಲು ಅನುಮತಿಸದಿರುವುದು ಹಾಗೂ ಸರಕಾರಿ ಸೇವೆಗಳನ್ನು ಮನೆ ಮನೆಗೆ ತಲುಪಿಸಿದ್ದು ಮತ್ತು ಹಿರಿಯ ನಾಗರಿಕರಿಗೆೆ ರೈಲಿನಲ್ಲಿ ತೀರ್ಥಯಾತ್ರೆಗೆ ಕಳುಹಿಸಿದ್ದು ಹೀಗೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಮಾಡಿ, ಇಡೀ ದೇಶಕ್ಕೆ ಮಾದರಿಯಾಗುವ ಹಾಗೆ ಬಜೆಟ್‌ನ ಇಪ್ಪತ್ತಾರು ಪ್ರತಿಶತದಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ದಿಲ್ಲಿಯ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಉತ್ತುಂಗಕ್ಕೆ ಕೊಂಡ್ಯೊಯ್ದು, ದೇಶಕ್ಕೆ ಮಾದರಿಯಾದದ್ದನ್ನು ಎಲ್ಲರೂ ಮೆಚ್ಚಲೇಬೇಕು.

ಆಮ್ ಆದ್ಮಿ ಪಕ್ಷದಲ್ಲಿರುವ ಹೆಚ್ಚಿನ ಶಾಸಕರು ದೇಶ ವಿದೇಶದ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದಂತಹವರು ಮತ್ತು ಸ್ವತಃ ಕೇಜ್ರಿವಾಲ್‌ರವರೇ ಒಬ್ಬ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯಾಗಿದ್ದವರು. ಈ ತರಹದ ರಾಜಕೀಯ ಚಿತ್ರಣ ದೇಶದ ಯಾವ ರಾಜ್ಯದಲ್ಲೂ ಇರಲಿಕ್ಕಿಲ್ಲ. ಈ ಚುನಾವಣೆಯಲ್ಲಿ ಮತದಾರರು ತೋರಿದ ಪ್ರಬುದ್ಧತೆ ಭಾರತವನ್ನು ಮುನ್ನಡೆಸಲು ಬೇಕಾಗುವ ನಾಗರಿಕರ ಉತ್ಕೃಷ್ಟ ಗುಣಲಕ್ಷಣವನ್ನು ಸೂಚಿಸುತ್ತದೆ. ಗೆಲುವಿನ ಬಳಿಕ ಜನರನ್ನುದ್ದೇಶಿಸಿ ಮಾತನಾಡುತ್ತಾ ಸ್ವತಃ ಕೇಜ್ರಿವಾಲ್‌ರವರೇ ಹೇಳಿದ ಹಾಗೆ, ಇದು ಒಂದು ವಿಶಿಷ್ಟ ರಾಜಕೀಯ ಬದಲಾವಣೆ. ಜನರು ವೋಟ್ ಹಾಕಿದ್ದು ಉತ್ತಮ ರಸ್ತೆಗಳಾಗಿದ್ದಕ್ಕೆ, ಗುಣಮಟ್ಟದ ಶಿಕ್ಷಣ ಪಡೆದದ್ದಕ್ಕೆ, ಉಚಿತ ನೀರು, ಮತ್ತು ವಿದ್ಯುಚ್ಛಕ್ತಿ ನೀಡಿದ್ದಕ್ಕೆ ಮತ್ತು ಗುಣಮಟ್ಟದ ಆರೋಗ್ಯ ಭಾಗ್ಯಕ್ಕೆ. ಮಾಧ್ಯಮಗಳ ಚರ್ಚೆ ಮತ್ತು ಸಾರವನ್ನು ಪರಿಗಣಿಸದೆ ತಮ್ಮ ಸ್ವಂತ ಅನುಭವವನ್ನು ಮತ್ತು ಸರಕಾರ ಮಾಡಿಕೊಟ್ಟ ಸವಲತ್ತುಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ್ದು ಗಮನಾರ್ಹವಾದ ಸಂಗತಿ.

ಆಮ್ ಆದ್ಮಿ ಪಕ್ಷ ತಾನು ಕೈಗೊಂಡ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಮತ ಯಾಚಿಸಿತೇ ಹೊರತು ಧರ್ಮದ, ಜಾತಿಯ, ಪ್ರಾಂತದ, ರೈತರ, ದೇಶದ ಅಥವಾ ಸೈನಿಕರ ಹೆಸರನ್ನು ಹೇಳಿ ಮತಯಾಚಿಸಲಿಲ್ಲ. ಅಭಿವೃದ್ಧಿಗೆ ಪೂರಕವಾಗಿರದ ಯಾವುದೇ ವಿಷಯವನ್ನಾಧರಿಸಿ ಮತಯಾಚಿಸಿದರೂ ಯಾರಿಗೂ ಸೊಪ್ಪುಹಾಕದೇ ಜನರು ಅಭಿವೃದ್ಧಿಗೆ ಮತ ಹಾಕಿರುವುದು ನಿಜವಾಗಿಯೂ ಶ್ಲಾಘನೀಯ. ಪ್ರಜಾಪ್ರಭುತ್ವದಲ್ಲಿ ಜನರ ಅಭಿವೃದ್ಧಿಯೇ ಚುನಾವಣೆಗಳ ಮಂತ್ರವಾಗಬೇಕು ಹೊರತು ಜನಪ್ರತಿನಿಧಿಗಳ ಸುಳ್ಳು ಆಶ್ವಾಸನೆಗಳಲ್ಲ. ಹಾಗಾಗಿ ದಿಲ್ಲಿ ಚುನಾವಣೆಯಲ್ಲಿ ಗೆದ್ದದ್ದು ಪ್ರಬುದ್ಧ ಜನತೆಯೆ ಹೊರತು ಬೇರಾರು ಅಲ್ಲ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಜನಪರ ಅಭಿವೃದ್ಧಿ ಕಾರ್ಯಗಳಿಗೆ ಚಿಂತಿಸಬೇಕಿದೆ ಮತ್ತು ಅನುಷ್ಠಾನಗೊಳಿಸಬೇಕಿದೆ. ವಿದ್ಯಾವಂತರು ಉಳಿದ ಎಲ್ಲಾ ವರ್ಗದ ಜನರಲ್ಲಿ ಅರಿವು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಮುಂದಿನ ಚುನಾವಣೆಗಳಲ್ಲಾದರೂ ದೇಶದ ಎಲ್ಲಾ ಜನರು ಪ್ರಬುದ್ಧರಾಗಿ ನಿಷ್ಠೆಯಿಂದ ಜನಪರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲಿ, ದೇಶ ಮುಂದುವರಿಯುವಲ್ಲಿ ಯಾವ ಆತಂಕಗಳು, ಅಡೆತಡೆಗಳು ಇರುವುದಿಲ್ಲ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News