2ನೇ ಸ್ಥಾನ ಉಳಿಸಿಕೊಂಡ ರಾಹುಲ್

Update: 2020-02-17 18:22 GMT

ದುಬೈ, ಫೆ.17: ಭಾರತದ ಕೆ.ಎಲ್.ರಾಹುಲ್ ಸೋಮವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಪೈಕಿ ನಂ.2 ಸ್ಥಾನದಲ್ಲಿ ಮುಂದುವರಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅಗ್ರ-10ರಿಂದ ಹೊರಗುಳಿದಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ರಾಹುಲ್ ಭಾರತ ತಂಡ ಸರಣಿಯನ್ನು 5-0 ಅಂತರದಿಂದ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ರಾಹುಲ್ 56ರ ಸರಾಸರಿಯಲ್ಲಿ ಒಟ್ಟು 224 ರನ್ ಗಳಿಸಿದ್ದರು. ಮತ್ತೊಂದೆಡೆ ಇದೇ ಸರಣಿಯಲ್ಲಿ ಕಿವೀಸ್ ವಿರುದ್ಧ ನಾಲ್ಕು ಇನಿಂಗ್ಸ್‌ನಲ್ಲಿ ಆಡಿದ್ದ ಕೊಹ್ಲಿ 105 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಇನಿಂಗ್ಸ್‌ಗಳಲ್ಲಿ 136 ರನ್ ಗಳಿಸಿದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಅವರು ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಹಿಂದಿಕ್ಕಿ 9ನೇ ಸ್ಥಾನವನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 10 ಸ್ಥಾನ ಮೇಲಕ್ಕೇರಿ 16ನೇ ಸ್ಥಾನ ತಲುಪಿದ್ದಾರೆ. ಡಿಕಾಕ್ 3 ಪಂದ್ಯಗಳ ಸರಣಿಯಲ್ಲಿ 31, 65 ಹಾಗೂ 35 ರನ್ ಗಳಿಸಿದ್ದರು. ಪಾಕ್‌ನ ಬಾಬರ್ ಆಝಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಆ ಬಳಿಕ ರಾಹುಲ್ ಹಾಗೂ ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್‌ರಿದ್ದಾರೆ. ಬೌಲಿಂಗ್ ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಅಫ್ಘಾನಿಸ್ತಾನದ ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ ಅಗ್ರಸ್ಥಾನದಲ್ಲಿದ್ದಾರೆ. ಟೀಮ್ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಮೂರನೇ ಸ್ಥಾನ ಉಳಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಗಿಂತ 2 ಅಂಕದಿಂದ ಹಿಂದಿದೆೆ. ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಭಾರತ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News