ಶಾಹೀನ್ ಬಾಗ್ ಪ್ರತಿಭಟನೆಯಿಂದ ಬಂದ್ ಆಗಿದ್ದ ನೊಯ್ಡಾ-ದಿಲ್ಲಿ ರಸ್ತೆ ವಾಹನಗಳಿಗೆ ಮುಕ್ತ

Update: 2020-02-22 18:48 GMT

ಹೊಸದಿಲ್ಲಿ, ಫೆ. 22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ನಡುವೆ ಕಳೆದ 70 ದಿನಗಳಿಂದ ಮುಚ್ಚಿದ್ದ ಆಗ್ನೇಯ ದಿಲ್ಲಿಯ ಶಾಹೀನ್‌ಬಾಗ್ ರಸ್ತೆಯನ್ನು ಶನಿವಾರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಪೊಲೀಸರು ನೋಯ್ಡೆ ಹಾಗೂ ದಿಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಈ ಎರಡು ನಗರಗಳ ನಡುವೆ ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ದಿಲ್ಲಿ ಹಾಗೂ ನೋಯ್ಡಗಳಲ್ಲಿ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಈ ಪ್ರದೇಶದಲ್ಲಿ ರಸ್ತೆ ಸಂಚಾರಕ್ಕೆ ತಡೆ ಒಡ್ಡಿರುವುದು ಪ್ರತಿಭಟನೆಗೆ ವಿರೋಧ ವ್ಯಕ್ತವಾಗಲು ಹಾಗೂ ಸುಪ್ರೀಂ ಕೋರ್ಟ್ ಸಂಧಾನಕಾರರನ್ನು ಕಳುಹಿಸಲು ಕಾರಣವಾಗಿತ್ತು.

 ಜಾಮೀಯಾ ಮಿಲ್ಲಿಯ ಇಸ್ಲಾಮಿಯಾ ವಿ.ವಿ. ಸಮೀಪ ಪ್ರತಿಭಟನೆ ಸಂದರ್ಭ ನಡೆದ ಘರ್ಷಣೆಯಲ್ಲಿ 200 ವಿದ್ಯಾರ್ಥಿಗಳು ಹಾಗೂ 30 ಪೊಲೀಸರು ಗಾಯಗೊಂಡ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ಮಧ್ಯಭಾಗದಿಂದ ದಿಲ್ಲಿಯ ಶಾಹೀನ್ ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಕೇಂದ್ರವಾಗಿತ್ತು.

ಮಹಿಳೆಯರ ನೇತೃತ್ವದ ಪ್ರತಿಭಟನೆಯಿಂದ ದಿಲ್ಲಿ ಹಾಗೂ ನೋಯ್ಡ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಆಡಳಿತಾರೂಡ ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಭಟನಾಕಾರರನ್ನು ರಕ್ಷಿಸಲು ಪರ್ಯಾಯ ರಸ್ತೆಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ನಾವೇ ಅಳವಡಿಸಿದೆವು ಎಂದು ಪೊಲೀಸರು ಒಪ್ಪಿಕೊಂಡಿದ್ದರು.

ರಸ್ತೆ ತಡೆ ಬಗ್ಗೆ ಪ್ರಶ್ನಿಸಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ಸಾದನಾ ರಾಮಚಂದ್ರನ್ ಅವರನ್ನು ಸಂಧಾನಕಾರರನ್ನಾಗಿ ಸೋಮವಾರ ನಿಯೋಜಿಸಿತ್ತು. ಇನ್ನೊಂದು ಸ್ಥಳದಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಪ್ರತಿಭಟನಾಕಾರರ ಮನವೊಲಿಸುವಂತೆ ಅವರಿಗೆ ತಿಳಿಸಲಾಗಿತ್ತು.

ಸಂಧಾನಕಾರರು ಶುಕ್ರವಾರ ಈ ರಸ್ತೆಗಳನ್ನು ಪರಿಶೀಲಿಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಲು ಯಾವುದೇ ಸ್ಪಷ್ಟ ಕಾರಣಗಳಿಲ್ಲ ಎಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News