ಟೆಸ್ಟ್ ತಂಡದಲ್ಲಿ ಕೆ.ಎಲ್. ರಾಹುಲ್ ಅನುಪಸ್ಥಿತಿ ಪ್ರಶ್ನಿಸಿದ ಕಪಿಲ್‌ದೇವ್

Update: 2020-02-25 17:59 GMT

ಹೊಸದಿಲ್ಲಿ, ಫೆ.25: ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಹೀನಾಯವಾಗಿ ಸೋತಿರುವ ವಿರಾಟ್ ಕೊಹ್ಲಿ ಬಳಗವನ್ನು ಟೀಕಿಸಿದ ಭಾರತದ ಮಾಜಿ ನಾಯಕ ಕಪಿಲ್‌ದೇವ್, ಟೆಸ್ಟ್ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ‘‘ಶ್ರೇಷ್ಠ ಕ್ರಿಕೆಟ್ ಆಡಿರುವ ನ್ಯೂಝಿಲ್ಯಾಂಡ್ ತಂಡವನ್ನು ನಾವೆಲ್ಲರೂ ಶ್ಲಾಘಿಸಬೇಕಾಗಿದೆ. ಮೂರು ಏಕದಿನ ಪಂದ್ಯಗಳು ಹಾಗೂ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡ ಅಮೋಘ ಪ್ರದರ್ಶನ ನೀಡಿದೆ. ನಾವು ಈ ಪಂದ್ಯವನ್ನು ವಿಮರ್ಶಾತ್ಮಕವಾಗಿ ನೋಡಿದಾಗ ಹೇಗೆ ಇಷ್ಟೊಂದು ಬದಲಾವಣೆ ಮಾಡಲು ಸಾಧ್ಯ ಎಂದು ನನಗರ್ಥವಾಗುವುದಿಲ್ಲ. ಪ್ರತಿ ಪಂದ್ಯಕ್ಕೂ ಹೊಸ ತಂಡ ಇರುತ್ತದೆ. ತಂಡದಲ್ಲಿ ಯಾರೂ ಕೂಡ ಖಾಯಂ ಆಗಿರುವುದಿಲ್ಲ. ಆಟಗಾರರ ಸ್ಥಾನಕ್ಕೆ ಭದ್ರತೆ ಇಲ್ಲ. ಇದು ಆಟಗಾರರ ಮೇಲೆ ಪರಿಣಾಮಬೀರುತ್ತದೆ’’ ಎಂದು ಎಬಿಪಿ ಸುದ್ದಿವಾಹಿನಿಗೆ ಕಪಿಲ್ ತಿಳಿಸಿದ್ದಾರೆ.

ಭಾರತದ ಬ್ಯಾಟಿಂಗ್ ಸರದಿಯಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರಂತಹ ಆಟಗಾರರು ಎರಡೂ ಇನಿಂಗ್ಸ್‌ನಲ್ಲಿ ರನ್ ಗಳಿಸಲು ವಿಫಲರಾಗಿದ್ದರು. ಕಿವೀಸ್ ವಿರುದ್ಧ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂಬ ಸತ್ಯವನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ.

‘‘ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಿದ್ದರೂ ಎರಡೂ ಇನಿಂಗ್ಸ್‌ನಲ್ಲಿ 200 ರನ್ ಗಳಿಸಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಡಲು ವಿಫಲವಾಗಿರುವುದೇ ಇದಕ್ಕೆ ಕಾರಣ. ನಾವು ಯೋಜನೆ ಹಾಗೂ ರಣನೀತಿಯತ್ತ ಹೆಚ್ಚು ಗಮನ ನೀಡಬೇಕಾಗಿದೆ’’ ಎಂದು ಕಪಿಲ್ ಹೇಳಿದರು.

 ಟ್ವೆಂಟಿ-20 ಸರಣಿಯಲ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದ ಕೆ.ಎಲ್.ರಾಹುಲ್‌ರನ್ನು ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಳಿಸದೇ ಇರುವುದಕ್ಕೆ ಅಚ್ಚರಿವ್ಯಕ್ತಪಡಿಸಿದ ಕಪಿಲ್,‘‘ಈ ವಿಚಾರ ನನಗೆ ಅರ್ಥವಾಗುತ್ತಿಲ್ಲ. ನಾವು ಆಡುತ್ತಿದ್ದ ಕಾಲಕ್ಕೂ, ಈಗ ನಡೆಯುತ್ತಿರುವುದಕ್ಕೆ ತುಂಬಾ ವ್ಯತ್ಯಾಸವಿದೆ. ನಾವು ತಂಡವನ್ನು ಕಟ್ಟುವಾಗ ಆಟಗಾರರಿಗೆ ಆತ್ಮವಿಶ್ವಾಸ ತುಂಬಬೇಕಾಗುತ್ತದೆ. ಬಹಳಷ್ಟು ಬದಲಾವಣೆ ಮಾಡುವುದು ಒಳ್ಳೆಯದಲ್ಲ. ರಾಹುಲ್ ಶ್ರೇಷ್ಠ ಫಾರ್ಮ್‌ನಲ್ಲಿದ್ದರು. ಆದರೆ, ಅವರಿಗೆ ವಿಶ್ರಾಂತಿ ನೀಡಲಾಗಿದೆ. ನನ್ನ ಪ್ರಕಾರ ಫಾರ್ಮ್‌ನಲ್ಲಿರುವ ಆಟಗಾರ ಪಂದ್ಯ ಆಡುವ ಅಗತ್ಯವಿದೆ’’ ಎಂದರು.

ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಬೇಕಾದರೆ ಶನಿವಾರದಿಂದ ಕ್ರೈಸ್ಟ್ ಚರ್ಚ್‌ನಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News