ಹ್ಯಾಟ್ರಿಕ್ ಗೆಲುವಿನತ್ತ ಭಾರತದ ಚಿತ್ತ

Update: 2020-02-26 18:18 GMT

ಮೆಲ್ಬೋರ್ನ್, ಫೆ.26: ಎರಡು ಸುಲಭದ ಗೆಲುವಿನ ಬಳಿಕ ಭಾರತ ಗುರುವಾರ ನಡೆಯಲಿರುವ ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್‌ನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿ 17 ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 18 ರನ್‌ಗಳ ಗೆಲುವು ದಾಖಲಿಸಿತ್ತು. ಈ ಎರಡು ಗೆಲುವಿನೊಂದಿಗೆ ‘ಎ’ ಗ್ರೂಪ್‌ನಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ಎರಡು ಪಂದ್ಯಗಳಿಂದ 4 ಅಂಕಗಳನ್ನು ಪಡೆದಿರುವ ಭಾರತ ಇನ್ನೊಂದು ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಹಾದಿ ಸುಲಭವಾಗುತ್ತದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ವನಿತೆಯರ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಜಯ ಗಳಿಸಿ ನಾಕೌಟ್ ಹಂತ ತಲುಪಲು ಎದುರು ನೋಡುತ್ತಿದೆ. ಕಳೆದ ಎರಡು ಪಂದ್ಯಗಳಲ್ಲೂ ಭಾರತದ ವನಿತೆಯರ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. 16 ಹರೆಯದ ಶೆಫಾಲಿ ವರ್ಮಾ ಅವರು ಬಾಂಗ್ಲಾ ವಿರುದ್ಧ 17 ಎಸೆತಗಳಲ್ಲಿ 39 ರನ್ ಮತ್ತು ಆಸ್ಟ್ರೇಲಿಯ ವಿರುದ್ಧ 29 ರನ್ ಗಳಿಸಿದ್ದರು. ಜೆಮೀಮಾ ರೋಡ್ರಿಗಸ್ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 26 ಮತ್ತು 34 ರನ್ ಗಳಿಸಿದ್ದರು.

ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಅಗ್ರ ಸರದಿಯ ಬ್ಯಾಟ್ಸ್ ಮನ್‌ಗಳು ದೊಡ್ಡ ಕೊಡುಗೆ ನೀಡಿಲ್ಲ. ಅಸೌಖ್ಯದ ಕಾರಣದಿಂದಾಗಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹೊರಗುಳಿದಿದ್ದ ಸ್ಟಾರ್ ಓಪನರ್ ಸ್ಮತಿ ಮಂಧಾನ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಸೇವೆಗೆ ವಾಪಸಾಗುವುದನ್ನು ನಿರೀಕ್ಷಿಸಲಾಗಿದೆ. ಮಧ್ಯಮ ಸರದಿಯ ಬ್ಯಾಟ್ಸ್‌ವುಮನ್ ದೀಪ್ತಿ ಶರ್ಮಾ ಆಸ್ಟ್ರೇಲಿಯ ವಿರುದ್ಧ ಔಟಾಗದೆ 49 ರನ್ ಕೊಡುಗೆ ನೀಡಿದ್ದರು. ವೇದಾ ಕೃಷ್ಣಮೂರ್ತಿ ಬಾಂಗ್ಲಾದೇಶ ವಿರುದ್ಧ 11 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಬೌಲಿಂಗ್ ವಿಭಾಗದ ಪ್ರದರ್ಶನ ಚೆನ್ನಾಗಿತ್ತು. ಇದರಿಂದಾಗಿ ಭಾರತಕ್ಕೆ ಕಳೆದ ಎರಡು ಪಂದ್ಯಗಳಲ್ಲಿ ಸುಲಭವಾಗಿ ಜಯ ಗಳಿಸಲು ಸಾಧ್ಯವಾಗಿದೆ. ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಮೊದಲ ಎರಡು ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ವೇಗಿ ಶಿಖಾ ಪಾಂಡೆ ಈ ವರೆಗೆ 5 ವಿಕೆಟ್‌ಗಳನ್ನು ಗಳಿಸಿದ್ದಾರೆ.

  ನ್ಯೂಝಿಲ್ಯಾಂಡ್ ತಂಡದ ಹೆಡ್ ಟು ಹೆಡ್ ಸಾಧನೆ ಕಳೆದ ಮೂರು ಪಂದ್ಯಗಳಲ್ಲಿ ಉತ್ತಮವಾಗಿದೆ. ಕಳೆದ ಮೂರು ಪಂದ್ಯಗಳಲ್ಲೂ ಭಾರತದ ವಿರುದ್ಧ ನ್ಯೂಝಿಲ್ಯಾಂಡ್ ಜಯ ಗಳಿಸಿದೆ. ವರ್ಷದ ಹಿಂದೆ ಮೂರು ಪಂದ್ಯಗಳ ಟ್ವೆಂಟಿ-20 ಪಂದ್ಯಗಳಲ್ಲಿ ನ್ಯೂಝಿಲ್ಯಾಂಡ್ ತಂಡ ಭಾರತದ ವಿರುದ್ಧ 3-0 ಜಯ ಸಾಧಿಸಿತ್ತು. ಆದರೆ 2018ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ 34 ರನ್‌ಗಳ ಜಯ ಗಳಿಸಿತ್ತು. ಹರ್ಮನ್‌ಪ್ರೀತ್ ಕೌರ್ 103 ರನ್ ದಾಖಲಿಸಿದ್ದರು.

ನ್ಯೂಝಿಲ್ಯಾಂಡ್ ತಂಡದಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ ಸರದಿಯ ಆಟಗಾರ್ತಿಯರಿದ್ದಾರೆ. ಆಲ್‌ರೌಂಡರ್ ಸೋಫಿ ಡಿವೈನ್ , ಅಗ್ರಸರದಿಯ ಬ್ಯಾಟ್ಸ್ ವುಮೆನ್ ಸುಝೀ ಬ್ಯಾಟ್ಸ್ , ವೇಗಿ ಲೀ ತಹುಹು ಮತ್ತು ಲೆಗ್ ಸ್ಪಿನ್ನರ್ ಅಮೆಲಿಯಾ ಕೇರ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಾರೆ. ಶ್ರೀಲಂಕಾ ವಿರುದ್ಧ ನ್ಯೂಝಿಲ್ಯಾಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಆಲ್‌ರೌಂಡರ್ ಸೋಫಿ ಡಿವೈನ್ 55 ಎಸೆತಗಳಲ್ಲಿ 75 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News