ಪಿಎಸ್‌ಎಲ್ ವೇತನ ವಾಪಸ್ ನೀಡಲು ಉಮರ್‌ಗೆ ಸೂಚನೆ

Update: 2020-02-28 17:48 GMT

 ಕರಾಚಿ, ಫೆ.28: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ತನಿಖೆ ಬಾಕಿ ಇರುವ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್‌ಗೆ ಪಾಕಿಸ್ತಾನ ಪ್ರೀಮಿಯರ್ ಲೀಗ್(ಪಿಎಸ್‌ಎಲ್)ಆರಂಭಕ್ಕೆ ಮುಂಚಿತವಾಗಿ ಪಡೆದ ವೇತನವನ್ನು ವಾಪಸ್ ನೀಡುವಂತೆ ಸೂಚಿಸಲಾಗಿದೆ.

ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಬೇಕಾಗಿದ್ದ ಉಮರ್‌ಗೆ ಲೀಗ್‌ನಲ್ಲಿ ಭಾಗವಹಿಸಿರುವ ಇತರ ಎಲ್ಲ ಆಟಗಾರರಂತೆಯೇ ಒಟ್ಟು ಒಪ್ಪಂದದ ಮೊತ್ತದಲ್ಲಿ ಶೇ.70ರಷ್ಟು ವೇತನ ಪಾವತಿಸಲಾಗಿತ್ತು. ಭ್ರಷ್ಟಾಚಾರಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳ್ಳುವ ತನಕ ಅವರನ್ನು ಪಿಎಸ್‌ಎಲ್ ಸಹಿತ ಇತರ ಎಲ್ಲ ಕ್ರಿಕೆಟ್ ಚಟುವಟಿಕೆಯಿಂದ ಅಮಾನತುಗೊಳಿಸಲಾಗಿದೆ.

ಇದೀಗ ಉಮರ್‌ರಿಂದ ವೇತನ ಮೊತ್ತವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ)ವಾಪಸ್ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಿಯಮಗಳ ಪ್ರಕಾರ ಪಿಎಸ್‌ಎಲ್‌ನಲ್ಲಿ ಭಾಗವಹಿಸುವ ಎಲ್ಲ ಸ್ಥಳೀಯ ಆಟಗಾರರು ಹಾಗೂ ವಿದೇಶಿ ಆಟಗಾರರಿಗೆ ಆರಂಭದಲ್ಲಿ ಒಪ್ಪಂದದ ಮೊತ್ತದ ಶೇ.70ರಷ್ಟು ಪಾವತಿಸಬೇಕು. ಉಳಿದ 30ರಷ್ಟು ವೇತನವನ್ನು ಮಾ.22ರಂದು ಕೊನೆಗೊಳ್ಳುವ ಲೀಗ್ ಹಂತದ ಪಂದ್ಯದ ಬಳಿಕ ನೀಡಬೇಕು ಎಂದು ಮೂಲಗಳು ತಿಳಿಸಿವೆ. ಪಿಎಸ್‌ಎಲ್‌ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದಲ್ಲಿ ಉಮರ್ ಬದಲಿಗೆ ಆಲ್‌ರೌಂಡರ್ ಅನ್ವರ್ ಅಲಿ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News