ಗೇಟ್ ಮತ್ತು ಹಳಿ ದ್ವಿಗುಣ ಕಾಮಗಾರಿ

Update: 2020-02-28 17:59 GMT

ಮಾನ್ಯರೇ,

ಮಂಗಳೂರಿಗೆ ನೇತ್ರಾವತಿ ಸೇತುವೆ ಮೂಲಕ ಮೊದಲ ಬಾರಿಗೆ ರೈಲು ಬಂದು ಸುಮಾರು 114 ವರ್ಷಗಳೇ ಸಂದಿವೆ. ಆದರೆ ನೇತ್ರಾವತಿಯಿಂದ ಮಂಗಳೂರು ರೈಲು ನಿಲ್ದಾಣಕ್ಕೆ ಬರುವ ರೈಲುಗಳಿಗೆ ಈಗಲೂ ಅಂದಿನ ಏಕಹಳಿ ವ್ಯವಸ್ಥೆಯೇ ಇದೆ. ಉಳಿದ ಬಹುತೇಕ ಕಡೆ ಹಳಿ ದ್ವಿಗುಣಗೊಂಡಿದ್ದರೂ, ಇಲ್ಲಿ ಮಾತ್ರ ಆ ದೆಸೆಯಲ್ಲಿ ಏನೇನೂ ಪ್ರಯತ್ನವಾಗಲೀ, ಕಾಮಗಾರಿಯಾಗಲೀ ನಡೆದಿಲ್ಲ. ಸೇತುವೆಯ ಆಚೆ ಮತ್ತು ಈಚೆ, ರೈಲುಗಳು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಈಗಲೂ ಮುಂದುವರಿದಿದೆ.

ಒಂದೆರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಹಳಿ ದ್ವಿಗುಣಗೊಳಿಸುವ ಕಾಮಗಾರಿಗೆ ಮಂಜೂರಾತಿ ದೊರೆತರೂ ಅದು ನಡೆಯಲಿಲ್ಲ. ಇದೀಗ ಮತ್ತೊಮ್ಮೆ ಹಲವು ಕೋಟಿ ರೂ.ಗಳ ಏರಿಕೆಯಲ್ಲಿ ಈ ಕಾಮಗಾರಿಗೆ ಮಂಜೂರಾತಿ ದೊರಕಿದೆ. ಕಾಮಗಾರಿ ಆರಂಭಗೊಳ್ಳಲೂಬಹುದು. ಈ ಸಂದರ್ಭದಲ್ಲಿ ಸ್ವಲ್ಪ ಯೋಚಿಸುವ ಅಗತ್ಯವಿದೆ. ಅದೇನೆಂದರೆ, ಹಳಿ ದ್ವಿಗುಣಗೊಳ್ಳುವ ಕಾಮಗಾರಿ ನಡೆಯುವ ಇದೇ ಭಾಗದಲ್ಲಿ ಮಹಾಕಾಳಿಪಡ್ಪುಎಂಬಲ್ಲಿ ಒಂದು ರೈಲ್ವೇ ಗೇಟ್ ಇದೆ. ಮಂಗಳೂರಿನ ದಕ್ಷಿಣದ ಕಡೆಯಿಂದ ನಗರವನ್ನು ಪ್ರವೇಶಿಸುವ ಅಸಂಖ್ಯಾತ ವಾಹನಗಳು ಈ ಗೇಟ್ ಮೂಲಕವೇ ಮಂಗಳೂರನ್ನು ಪ್ರವೇಶಿಸುವುದೂ, ನಿರ್ಗಮಿಸುವುದೂ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಈ ಗೇಟನ್ನು ನಿವಾರಿಸಿ ಇಲ್ಲೊಂದು ಅಂಡರ್‌ಪಾಸ್ ನಿರ್ಮಾಣಗೊಳ್ಳಬೇಕಾದುದು ತೀರ ಅನಿವಾರ್ಯ. ಹಾಗಾಗಿ ಹಳಿ ದ್ವಿಗುಣಗೊಳ್ಳುವಾಗಲೇ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯೂ ನಡೆದರೆ ಉತ್ತಮವಲ್ಲವೇ? ಈಗಾಗಲೇ ಇಲ್ಲಿನ ಗೇಟಿನಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಸಂಗ ದಿನವಿಡೀ ನಡೆಯುತ್ತಿದ್ದು, ಮುಂದಕ್ಕೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಎಲ್ಲ ಸಾಧ್ಯತೆಗಳಿವೆ. ಕೆಲವು ವರ್ಷಗಳ ಬಳಿಕ ಮತ್ತೊಂದು ಕಾಮಗಾರಿಗಾಗಿ ಅದೆಷ್ಟೋ ದೊಡ್ಡ ಮೊತ್ತ ವ್ಯಯವಾಗಬಹುದು. ಇಲ್ಲೊಂದು ಅಂಡರ್ ಪಾಸ್ ನಿರ್ಮಾಣಗೊಳ್ಳಬೇಕಾದ ತುರ್ತು ಈಗಾಗಲೇ ಇರುವುದರಿಂದ, ಆ ಕಾಮಗಾರಿಯನ್ನೂ ಹಳಿ ದ್ವಿಗುಣೀಕರಣ ಕಾಮಗಾರಿಯೊಂದಿಗೆ ಸೇರಿಸಿದರೆ, ಸಾರ್ವಜನಿಕರಿಗೂ ಸರಕಾರದ ಬೊಕ್ಕಸಕ್ಕೂ ತುಂಬ ಉಪಕಾರವಾದೀತು. ಮಂಗಳೂರಿನ ನಾಗರಿಕರು, ಜನಪ್ರತಿನಿಧಿಗಳು, ಗೇಟ್ ಬಳಕೆದಾರರು, ರೈಲ್ವೇ ಸಲಹಾ ಸಮಿತಿಯವರು ಈ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News