ನಾಳೆಯಿಂದ ರಣಜಿ ಟ್ರೋಫಿ ಸೆಮಿ ಫೈನಲ್: ಕರ್ನಾಟಕಕ್ಕೆ ಬಂಗಾಳದ ಸವಾಲು

Update: 2020-02-28 18:07 GMT

ಕೋಲ್ಕತಾ, ಫೆ.28: ಮೂರು ತಿಂಗಳ ಕಾಲ ನಡೆದ ರಣಜಿ ಟ್ರೋಫಿಯ ಲೀಗ್ ಹಂತದಲ್ಲಿ ಹಲವು ರೋಚಕ ಪಂದ್ಯಗಳು ನಡೆದಿದ್ದವು. ಎಲ್ಲ ತಂಡಗಳು ಅಂಕ ಗಳಿಕೆಗಾಗಿ ಪೈಪೋಟಿ ನಡೆಸಿದ್ದವು. ಇದೀಗ ರಣಜಿ ಟ್ರೋಫಿ ಅಂತಿಮ ಹಂತ ತಲುಪಿದ್ದು, ಕರ್ನಾಟಕ ಹಾಗೂ ಬಂಗಾಳ ತಂಡಗಳು ಶನಿವಾರದಿಂದ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ.

‘ಸೀಮಿತ ಡಿಆರ್‌ಎಸ್’ ಇದೇ ಮೊದಲ ಬಾರಿ ರಣಜಿ ಪಂದ್ಯದಲ್ಲಿ ಪರಿಚಯಿಸಲಾಗುತ್ತಿದೆ. ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸೌರಾಷ್ಟ್ರ ವಿರುದ್ಧದ ಸೆಮಿ ಫೈನಲ್‌ನಲ್ಲಿ ಕರ್ನಾಟಕ ವಿವಾದಾತ್ಮಕ ಸನ್ನಿವೇಶದಲ್ಲಿ ಫೈನಲ್ ತಲುಪುವ ಅವಕಾಶ ವಂಚಿತವಾಗಿತ್ತು. ಚೇತೇಶ್ವರ ಪೂಜಾರ ಎರಡು ಬಾರಿ ಜೀವದಾನ ಪಡೆದಿದ್ದರು. 2ನೇ ಇನಿಂಗ್ಸ್‌ನಲ್ಲಿ ಔಟಾಗದೆ 131 ರನ್ ಗಳಿಸಿದ್ದ ಪೂಜಾರ ಕರ್ನಾಟಕ ತಂಡ ಫೈನಲ್‌ಗೇರಲು ಅಡ್ಡಿಯಾಗಿದ್ದರು. ಸೆಮಿ ಫೈನಲ್ ಹಾದಿ

ಕರ್ನಾಟಕ ಹಾಗೂ ಬಂಗಾಳ ಲೀಗ್ ಹಂತದ ರಣಜಿಯಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಆದರೆ, ಈ ಋತುವಿನುದ್ದಕ್ಕೂ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದವು. ಕರ್ನಾಟಕ ತಂಡ ತಮಿಳುನಾಡು ತಂಡವನ್ನು ರೋಚಕವಾಗಿ ಸೋಲಿಸಿತ್ತು. 40 ಬಾರಿಯ ಚಾಂಪಿಯನ್ ಮುಂಬೈಯನ್ನು ಟೂರ್ನಿಯಿಂದ ಹೊರಗಟ್ಟಿತ್ತು. ಹಿಮಾಚಲ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರದ ವಿರುದ್ಧ ಆರಂಭದಲ್ಲಿ ಸೋಲಿನ ಭೀತಿ ಎದುರಿಸಿದರೂ ಭರ್ಜರಿ ಜಯ ಸಾಧಿಸಲು ಯಶಸ್ವಿಯಾಗಿತ್ತು.

ಗೆಲ್ಲಲೇಬೇಕಾದ ಕೊನೆಯ ಲೀಗ್ ಪಂದ್ಯದಲ್ಲಿ ಬರೋಡವನ್ನು ಬಗ್ಗುಬಡಿದಿದ್ದ ಕರ್ನಾಟಕ ಕ್ವಾರ್ಟರ್ ಫೈನಲ್‌ನಲ್ಲಿ ಕೆ.ಗೌತಮ್ ಸ್ಪಿನ್ ಮೋಡಿಯ ನೆರವಿನಿಂದ 167 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಗಾಯದ ಸಮಸ್ಯೆಯಿಂದಾಗಿ ಆಫ್ ಸ್ಪಿನ್ನರ್ ಗೌತಮ್ ಈ ಋತುವಿನಲ್ಲಿ ಕೇವಲ 5 ಪಂದ್ಯವನ್ನಾಡಿದ್ದರು. ಆದರೆ ಪ್ರತಿ ಪಂದ್ಯದಲ್ಲೂ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದರು.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು ಒಟ್ಟು 29 ವಿಕೆಟ್‌ಗಳನ್ನು ಪಡೆದಿದ್ದರು. ಟೀಮ್ ಇಂಡಿಯಾ ಓಪನರ್ ಕೆ.ಎಲ್. ರಾಹುಲ್ ಸೇರ್ಪಡೆಯಿಂದ ಕರ್ನಾಟಕದ ಬ್ಯಾಟಿಂಗ್ ವಿಭಾಗ ಶಕ್ತಿಶಾಲಿಯಾಗಿದೆ. ಈ ಋತುವಿನಲ್ಲಿ ತಂಡದ ಪರ ಗರಿಷ್ಠ ರನ್ ಕಲೆ ಹಾಕಿರುವ ದೇವದತ್ತ ಪಡಿಕ್ಕಲ್ ಅವರು ರಾಹುಲ್‌ಗೆ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆಯಿದೆ.

ಕರ್ನಾಟಕದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ ಹಾಗೂ ಅಭಿಮನ್ಯು ಮಿಥುನ್ ಅವರಿದ್ದಾರೆ. ಎಡಗೈ ವೇಗದ ಬೌಲರ್ ಪ್ರತೀಕ್ ಜೈನ್ ಕೂಡ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

 ಮತ್ತೊಂದೆಡೆ, ಬಂಗಾಳ ತಂಡ ತನ್ನ ಶ್ರೇಷ್ಠ ಕ್ರಿಕೆಟ್ ಆಡದೇ ಸೆಮಿ ಫೈನಲ್‌ಗೆ ತಲುಪಿ ಅಚ್ಚರಿ ಮೂಡಿಸಿದೆ. ಹೆಚ್ಚಿನ ಆಟಗಾರರು ಅಗತ್ಯವಿದ್ದಾಗ ಕೈಕೊಡುತ್ತಿದ್ದಾರೆ. ಮನೋಜ್ ತಿವಾರಿ ಮಾತ್ರ ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಪಂಜಾಬ್ ವಿರುದ್ಧ ಎರಡು ಅರ್ಧಶತಕ ಸಿಡಿಸಿದ್ದ ತಿವಾರಿ ತಂಡಕ್ಕೆ ಆಸರೆಯಾಗಿದ್ದರು. ಬಂಗಾಳಕ್ಕೆ ಅನುಸ್ತುಪ್ ಮಜುಂದಾರ್ ಹಾಗೂ ಶ್ರೀವಾಸ್ತವ ಗೋಸ್ವಾಮಿ, ಎಡಗೈ ಸ್ಪಿನ್ನರ್ ಶಹಬಾಝ್ ಅಹ್ಮದ್ ಗಮನಾರ್ಹ ಕಾಣಿಕೆ ನೀಡುತ್ತಿದ್ದಾರೆ.

ಅಹ್ಮದ್ 15ರ ಸರಾಸರಿಯಲ್ಲಿ 13 ಇನಿಂಗ್ಸ್‌ಗಳಲ್ಲಿ 30 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂಲಕ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಬಂಗಾಳದ ನಾಯಕ ಅಭಿಮನ್ಯು ಈಶ್ವರನ್ 14 ಇನಿಂಗ್ಸ್‌ಗಳಲ್ಲಿ 18.58ರ ಸರಾಸರಿಯಲ್ಲಿ 223 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಬಂಗಾಳ 2006-07ರಲ್ಲಿ ಕೊನೆಯ ಬಾರಿ ರಣಜಿ ಟ್ರೋಫಿಯಲ್ಲಿ ಫೈನಲ್ ತಲುಪಿತ್ತು. ಆದರೆ, ಆಗ ಅದು ಮುಂಬೈಗೆ ಸೋತಿತ್ತು. ಇದೀಗ 8 ಬಾರಿಯ ಚಾಂಪಿಯನ್ ಕರ್ನಾಟಕವನ್ನು ಮಣಿಸಿ ಬಂಗಾಳ ಕ್ರಿಕೆಟ್ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಆತಿಥೇಯ ತಂಡ ಬಯಸಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲನೇ ಸೆಮಿ ಫೈನಲ್‌ನಲ್ಲಿ ಆತಿಥೇಯ ಗುಜರಾತ್ ತಂಡ ಸೌರಾಷ್ಟ್ರವನ್ನು ಎದುರಿಸಲಿದೆ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

<ಕರ್ನಾಟಕ-ಬಂಗಾಳದ ಪಂದ್ಯ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News