ಹೆಣ್ಣಿನ ಮೂಲಕ ಕ್ರೌರ್ಯದ ಕತೆ ದಾಟಿಸುವ ಇರಾನಿ ಚಿತ್ರ ‘ವೆನ್ ದ ಮೂನ್ ವಾಸ್ ಫುಲ್’

Update: 2020-02-29 18:30 GMT

ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಈ ಬಾರಿ 250ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನವಿದ್ದು, ದೇಶವಿದೇಶಗಳ ಚಿತ್ತಾಪಹಾರಿ ಚಿತ್ರಗಳು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ. ಕಳೆದೆರಡು ದಶಕಗಳಿಂದ ಯುದ್ಧ, ಭಯೋತ್ಪಾದನೆ, ಅರಾಜಕತೆ, ಸಾವು, ನೋವುಗಳ ದಿಕ್ಕೆಟ್ಟ ಬದುಕನ್ನು ಕಂಡ ಇರಾನ್, ಸಣ್ಣ ನೆಮ್ಮದಿಗಾಗಿ ಕಾತರಿಸುತ್ತಿರುವ ಕಾಲದಲ್ಲಿ, ‘ವೆನ್ ದ ಮೂನ್ ವಾಸ್ ಫುಲ್’ ಎಂಬ ಚಿತ್ರ ಮಾಡಿರುವ ಮಹಿಳಾ ನಿರ್ದೇಶಕಿ, ಕಥಾನಾಯಕಿಯ ಕಣ್ಣಿನ ಮೂಲಕ ದೇಶದ ಸ್ಥಿತಿಗತಿಯನ್ನು ತೆರೆದಿಟ್ಟಿರುವುದು ವಿಶೇಷವಾಗಿದೆ.

ಬೆಳದಿಂಗಳ ಚೆಲುವೆ ಫಾಯಿಜ್ ಸಂಪ್ರದಾಯಸ್ಥ ಕುಟುಂಬದಲ್ಲಿ, ತಾಯಿ-ತಮ್ಮನ ಬೆಚ್ಚನೆ ಪ್ರೀತಿಯಲ್ಲಿ ಹೂವಿನಂತೆ ಬೆಳೆದವಳು. ಒಂದು ದಿನ ಅಮ್ಮನೊಂದಿಗೆ ಹೊರಗೆ ಅಂಗಡಿಗೆ ಹೋಗುತ್ತಾಳೆ. ಆಕೆಯ ತಲೆಗೂದಲನ್ನು ನೋಡಿ, ದಿಟ್ಟಿಸುವ ಹುಡುಗನಿಗೆ ಅಂಗಡಿಯ ಮಾಲಕ ಹಿಡಿದು ಬಡಿಯುತ್ತಾನೆ. ಆ ಮೂಲಕ, ಆಕೆಯ ಕಣ್ಣಿಗೆ ಬೀಳುತ್ತಾನೆ- ಸುರಸುಂದರಾಂಗ ಅಬ್ದುಲ್ ಹಮೀದ್. ಆ ಕಣ್ಣುಗಳನ್ನು ಇವನೂ ನೋಡುತ್ತಾನೆ, ಮೋಹಗೊಂಡು, ಹಿಂದೆ ಬೀಳುತ್ತಾನೆ. ಇಬ್ಬರ ಕಣ್ಣು-ಮನಸ್ಸು ಒಂದಾಗಿ, ಎರಡು ಕುಟುಂಬಗಳು ಮಾಾಡಿ, ಮದುವೆಯಲ್ಲಿ ಮುಗಿಯುತ್ತದೆ.

ಮೊದಮೊದಲು ಎಲ್ಲವೂ ಚೆಂದ, ಸುಂದರ. ಬದುಕೇ ಹಾಗಲ್ಲವೇ? ನಂತರ ನಿಧಾನವಾಗಿ ಅತಿಯಾಗಿ ಪ್ರೇಮಿಸುವ ಹಮೀದ್‌ನ ಮಾತಲ್ಲಿ ಸುಳ್ಳು, ಪ್ರೀತಿಯಲ್ಲಿ ಕಪಟ ಕಾಣತೊಡಗುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಪೊಲೀಸರ ಆಗಮನವಾಗುತ್ತದೆ. ಮುಚ್ಚಿಟ್ಟ ಮದ್ದು, ಗುಂಡು, ಬಂದೂಕುಗಳು ಸಿಗುತ್ತವೆ. ಇಡೀ ಕುಟುಂಬವೇ ಅಲ್ ಖೈದಾ ಭಯೋತ್ಪಾದಕ ಗುಂಪಿನೊಂದಿಗೆ ಕಾರ್ಯಾಚರಿಸುತ್ತಿರುವುದು ಮನವರಿಕೆಯಾಗುತ್ತದೆ. ಅಲ್ಲಿಂದ ಅವರ ಸಂಸಾರ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ. ದುರಂತಗಳ ಸಮಾಲೆಗೆ ಸಿಕ್ಕಿ ಛಿದ್ರಗೊಳ್ಳುತ್ತದೆ.

ಇದು 2001ರಲ್ಲಿ, ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಗಡಿಭಾಗದಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ, ನರ್ಗಿಸ್ ಅಬ್ಯರ್ ಎಂಬ ಹೆಣ್ಣುಮಗಳು ಸುಮಾರು ವರ್ಷಗಳ ಕಾಲ ಅಧ್ಯಯನ ಮಾಡಿ ನಿರ್ದೇಶಿಸಿದ ‘ವೆನ್ ದ ಮೂನ್ ವಾಸ್ ಫುಲ್’ ಎಂಬ ಇರಾನಿ ಚಿತ್ರ. ಮೂರು ದೇಶಗಳ ರಾಜಕೀಯ, ಸಾಮಾಜಿಕ ಮತ್ತು ಕೌಟುಂಬಿಕ ಚಿತ್ರಣವನ್ನು ಕಣ್ಣಮುಂದಿರಿಸುವ ಚಿತ್ರ. ಅತ್ಯುತ್ತಮ ಎನ್ನಲಾಗದಿದ್ದರೂ, ನಮ್ಮ ನೆರೆಯ ದೇಶಗಳ ಸ್ಥಿತಿಯನ್ನು ಅರ್ಥ ಮಾಡಿಸುವ ಚಿತ್ರ.

ಸುಂದರಿ ಫಾಯಿಜ್ ಅಮ್ಮನ ಮನೆಯವರು ಮಾನವಂತರು. ತಗಾದೆ-ತಟವಟ ಗೊತ್ತಿಲ್ಲದ ಸುಸಂಸ್ಕೃತರು. ಇದನ್ನರಿತ ಹಮೀದ್‌ನಅಮ್ಮ ಹೆಣ್ಣು ನೋಡಲು ಬಂದಾಗಲೇ, ‘ಆತ ಅಷ್ಟು ಸರಿಯಿಲ್ಲ’ ಎಂದು ಮಗನ ಬಗ್ಗೆ ಸೂಚ್ಯವಾಗಿ ಹೇಳುತ್ತಾಳೆ. ಆದರೆ ಹರೆಯದ ಅಮಲಿನಲ್ಲಿ ತೇಲುತ್ತಿದ್ದ ಫಾಯಿಜ್‌ಗೆ ಅದು ಕೇಳಿಸುವುದೇ ಇಲ್ಲ. ಆದರೆ ನಿಧಾನವಾಗಿ ಇಡೀ ಕುಟುಂಬವೇ ಹಮೀದ್ ಸಹೋದರ ಅಬ್ದುಲ್ ಮಲ್ಲಿಕ್ ಎಂಬ ಭಯೋತ್ಪಾದಕನ ಹಿಡಿತಕ್ಕೊಳಗಾಗಿರುವುದನ್ನು ಖುದ್ದು ಕಂಡು ಬೆಚ್ಚಿ ಬೀಳುತ್ತಾಳೆ, ದಿಗ್ಭ್ರಾಂತಳಾಗುತ್ತಾಳೆ. ಅಸಹಾಯಕಳಾಗಿ ರೋದಿಸುತ್ತಾಳೆ.

‘ಹಮೀದ್ ನನಗೇಕೆ ಸತ್ಯ ಹೇಳದೆ ಮೋಸ ಮಾಡಿದ, ನಮ್ಮ ಪುಟ್ಟ ಕಂದನ ಭವಿಷ್ಯವೇನು, ಇದು ನನ್ನ ತವರುಮನೆಯವರಿಗೆ ತಿಳಿದರೆ ಗತಿಯೇನು?’ ಫಾಯಿಜ್ ತಲೆತುಂಬಾ ಪ್ರಶ್ನೆಗಳು. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಹಮೀದ್, ‘ನಾನು ಯಾವ ಭಯೋತ್ಪಾದಕ ಗುಂಪಿನೊಂದಿಗೂ ಕೈಜೋಡಿಸಿಲ್ಲ, ನಾನು ಯಾರನ್ನೂ ಕೊಂದಿಲ್ಲ, ನಿನ್ನ ಮತ್ತು ಮಗನನ್ನ ಬಿಟ್ಟು ನನಗೆ ಬದುಕಿಲ್ಲ, ಸಂಸಾರ ಸಮೇತ ಪಾಕಿಸ್ತಾನಕ್ಕೆ ಹೋಗಿ, ಅಲ್ಲಿಂದ ಯೂರೋಪ್‌ಗೆ ತೆರಳೋಣ, ಇದೆಲ್ಲ ರಗಳೆಯೇ ಬೇಡ’ ಎಂದು ಮನವೊಲಿಸುತ್ತಾನೆ.

ಪಾಕಿಸ್ತಾನದ ಖ್ವೆಟ್ಟಾಕ್ಕೆ ತೆರಳುವ ಸಂಸಾರ, ಅಲ್ಲಿ ಬಹಳ ದೊಡ್ಡ ಬಂಗಲೆಯಲ್ಲಿ ವಾಸ್ತವ್ಯ ಹೂಡುತ್ತದೆ. ಸಂಸಾರ ಸರಿಯಾಯಿತೆಂಬ ಸಂಭ್ರಮದಲ್ಲಿರುವಾಗಲೇ ಆಕಾಶದಲ್ಲಿ ಹದ್ದುಗಳು ಹಾರಾಡುವುದು ಕೆಟ್ಟ ಮುನ್ಸೂಚನೆಯನ್ನು ಕೊಡುತ್ತದೆ. ತಾನಿರುವುದು ಗಂಡ ಹಮೀದ್ ಸಹೋದರ ಅಬ್ದುಲ್ ಮಲ್ಲಿಕ್‌ನ ಭಯೋತ್ಪಾದಕ ಬಂಗಲೆ ಎನ್ನುವುದು ಅರಿವಾಗುವಷ್ಟರಲ್ಲಿ, ಅತ್ತೆಯ ಮನೆಯವರೆಲ್ಲ ಅಲ್ಲಿರುತ್ತಾರೆ. ಅವರೆಲ್ಲ ಮಲ್ಲಿಕ್‌ನ ಆಜ್ಞೆ, ಆದೇಶಗಳನ್ನು ಪಾಲಿಸುವ; ಧರ್ಮದ ಅಮಲಿನಲ್ಲಿ ಅಮಾಯಕರನ್ನು ಕೊಲ್ಲುವ ದೇವರ ಸೈನಿಕರಾಗಿರುತ್ತಾರೆ. ಭಯೋತ್ಪಾದಕರು, ಬಂದೂಕುಗಳು, ಕಾದಾಟ, ರಕ್ತ, ಹೆಣಗಳ ನಡುವೆ ಫಾಯಿಜ್ ಸಂಸಾರ. ಕ್ಷಣಕ್ಷಣಕ್ಕೂ ಭಯ, ಆತಂಕ. ಇದು ಆಕೆಯನ್ನು ಇನ್ನಷ್ಟು ದಿಗ್ಭ್ರಮೆಗೆ ದೂಡುತ್ತದೆ.

ಪ್ರತಿ ಹಂತದಲ್ಲೂ ಗಂಡ ಹಮೀದ್‌ನ ಮನವೊಲಿಸುವ ನರಳಾಟ ನಡದೇ ಇರುತ್ತದೆ. ಈ ನಡುವೆ, ಫಾಯಿಜ್ ಸ್ಥಿತಿ ಕಂಡು ಮರುಗುವ ಹಮೀದ್‌ನ ಅಮ್ಮ, ‘ನೀನು ಇಲ್ಲಿಂದ ತಪ್ಪಿಸಿಕೊಂಡು ಹೋಗು’ ಎಂದು ಗಂಡನ ಮೂಲಕ ವ್ಯವಸ್ಥೆ ಮಾಡುತ್ತಾಳೆ. ಆದರೆ ಭಯೋತ್ಪಾದಕ ಮಲ್ಲಿಕ್ ಕೈಗೆ ಸಿಕ್ಕು, ಮಗನೇ ಅಪ್ಪನ ಕಾಲಿಗೆ ಗುಂಡು ಹೊಡೆಯುತ್ತಾನೆ. ಮನೆಯಲ್ಲಿ ಬಂಧಿಯನ್ನಾಗಿಸಿ ನಿಗಾ ಇಡಲು ಹಮೀದ್‌ನಿಗೇ ಸೂಚಿಸುತ್ತಾನೆ. ‘ಇಲ್ಲಿ ಮಹಿಳೆಯರ ಮಾತಿಗೆ ಕಿಮ್ಮತ್ತಿಲ್ಲ-ಅದು ಹೆಂಡತಿಯಾಗಿರಲಿ, ಅಮ್ಮನಾಗಿರಲಿ’ ಎನ್ನುವ ಹಮೀದ್‌ನ ಅಮ್ಮನ ಮಾತು ಭಯೋತ್ಪಾದಕ ಜಗತ್ತಿನ ವಾಸ್ತವ ಸ್ಥಿತಿಯನ್ನು ತೆರೆದಿಡುತ್ತೆ.

ಈತನ್ಮಧ್ಯೆ, ಒಂದು ದಿನ ಬೆಳಗ್ಗೆ ಎಚ್ಚರವಾದಾಗ, ಫಾಯಿಜ್ ಕೋಣೆಯಲ್ಲಿ ಒಬ್ಬಂಟಿಯಾಗಿದ್ದು, ಪುಟ್ಟ ಕಂದ ಕಣ್ಮರೆಯಾಗಿರುತ್ತಾನೆ. ಜೊತೆಗೆ ಹೊಟ್ಟೆಯಲ್ಲಿ ಮತ್ತೊಂದು ಅವಳಿ-ಜವಳಿ ಬೆಳೆಯುತ್ತಿರುತ್ತದೆ. ಹೇಗೋ ಕಷ್ಟಪಟ್ಟು ಸಹೋದರನಿಗೆ ಫೋನ್ ಸಂಪರ್ಕ ಸಾಧಿಸಿ, ತನ್ನ ಸ್ಥಿತಿಯನ್ನು ಹೇಳಿಕೊಳ್ಳುತ್ತಾಳೆ ಮತ್ತು ಮನೆಯವರಿಗೆ ಏನನ್ನೂ ಹೇಳದಿರುವಂತೆ ತಾಕೀತು ಮಾಡುತ್ತಾಳೆ. ಸಹೋದರಿಯನ್ನು ಬಿಡಿಸಿಕೊಳ್ಳಲು ಧಾವಿಸಿ ಬರುವ ಸಹೋದರ ಭಯೋತ್ಪಾದಕ ಮಲ್ಲಿಕ್‌ನ ಕೈವಶವಾಗುತ್ತಾನೆ.

ಫಾಯಿಜ್ ಅಮ್ಮನಿಗೆ ಭಯೋತ್ಪಾದಕ ಮಲ್ಲಿಕ್‌ನಿಂದ ಫೋನ್ ಕರೆ: ‘ನಿನ್ನ ಮಗ ಇವತ್ತು ರಾತ್ರಿ 9ಕ್ಕೆ ಟಿವಿಯಲ್ಲಿ ಬರುತ್ತಾನೆ ನೋಡು’ ಎಂದು. ಆಕೆ ಮಗನ ಸಿನೆಮಾ (ಆತ ಯಾವಾಗಲೂ ಶಾರುಕ್, ಸಲ್ಮಾನ್ ಖಾನ್‌ಗಳ ಡೈಲಾಗ್ ಹೊಡೆಯುತ್ತ, ಸಿನೆಮಾ ಹುಚ್ಚಿಗೆ ಬಿದ್ದಿರುತ್ತಾನೆ) ಆಸೆ ಕೈಗೂಡಿತೆಂದು ಭಾವಿಸಿ, ಸಂಬಂಧಿಕರಿಗೆಲ್ಲ ಫೋನಾಯಿಸಿ, ಭೋಜನಕೂಟ ವ್ಯವಸ್ಥೆ ಮಾಡುತ್ತಾಳೆ. ಎಲ್ಲರೂ ಊಟಕ್ಕೆ ಕೂತು ಟಿವಿ ಆನ್ ಮಾಡಿದರೆ, ಮಗನ ಕತ್ತು ಕೊಯ್ಯುವ ದೃಶ್ಯ ಬಿತ್ತರಗೊಳ್ಳುತ್ತದೆ. ಅತ್ತ ಹಮೀದ್ ಮತ್ತು ಬಲೂಚಿ ವಲಸೆಗಾರರ ಗುಂಪುಗಳ ನಡುವಿನ ಕದನದಲ್ಲಿ ಹಮೀದ್‌ನ ಕಣ್ಣಮುಂದೆಯೇ ಕಿರಿಯ ಸಹೋದರ ಹತನಾಗುತ್ತಾನೆ.

ಭೀಕರ ಕಾದಾಟ, ಕತ್ತು ಕೊಯ್ಯುವ ಬರ್ಬರತೆ, ಸಾಲಾಗಿ ನಿಲ್ಲಿಸಿ ಕೊಲ್ಲುವ ಕ್ರೌರ್ಯ-ಎಲ್ಲವೂ ಫಾಯಿಜ್‌ಗೆ ತಾನು ಬಂಧಿಯಾದ ಕೋಣೆಯಲ್ಲಿಯೇ, ಟಿವಿ ಮತ್ತು ಸಿಡಿಗಳ ಮುಖಾಂತರವೇ ತಿಳಿಯುತ್ತದೆ. ಮುಖದಲ್ಲಿ ಮೀಸೆ ಕೂಡ ಇಲ್ಲದಿದ್ದ ತನ್ನ ಸ್ಫುರದ್ರೂಪಿ ಗಂಡ ಹಮೀದ್ ಗಡ್ಡ ಬಿಟ್ಟು, ಮುಖಕ್ಕೆ ಮುಂಡಾಸು ಸುತ್ತಿಕೊಂಡು ಮನುಷ್ಯರನ್ನು ಕೊಲ್ಲುವ ಭಯೋತ್ಪಾದಕನಾಗಿರುವುದು ಅರಗಿಸಿಕೊಳ್ಳಲಾಗದ ಸಂಕಟಕ್ಕೆ, ಬಿಡಿಸಿಕೊಳ್ಳಾಗದ ಸ್ಥಿತಿಗೆ ತಂದು ನಿಲ್ಲಿಸುತ್ತದೆ.

ಫಾಯಿಜ್ ಎಂಬ ಕೋಮಲ ಹೃದಯದ ಹೆಣ್ಣಿನ ಬದುಕು ಪಾಕಿಸ್ತಾನದಿಂದ ಪಾರಾಗುತ್ತದೆಯೇ, ಸಂಸಾರ ಸರಿಹೋಗುತ್ತದೆಯೇ.. ತೆರೆಯ ಮೇಲೆ ನೋಡಿಯೇ ತಿಳಿಯಿರಿ.

ಪ್ರಭುತ್ವ, ಪ್ರತಿಷ್ಠೆ, ಹಣ, ಅಧಿಕಾರ, ಗಡಿ, ಭಾಷೆ, ಧರ್ಮ, ವಲಸೆ.. ಹೀಗೆ ಯಾವುದಾವುದೋ ವಿಷಯಕ್ಕೆ ಪ್ರಚೋದನೆಗೊಳಗಾಗುವ ಭಯೋತ್ಪಾದಕ ಸಂಘಟನೆಗಳು ಸೃಷ್ಟಿಸಿದ ಭೀಕರತೆಯನ್ನು ಇರಾನ್‌ನ ನಿರ್ದೇಶಕಿ ನರ್ಗಿಸ್ ಅಬ್ಯರ್, ಹೆಣ್ಣಿನ ಮೂಲಕವೇ ಪ್ರೇಕ್ಷಕರ ಎದೆಗೆ ದಾಟಿಸಿರುವ ರೀತಿ ಅನನ್ಯವಾಗಿದೆ. ಬೇರೆ ಬೇರೆ ದೇಶಗಳ ಜನ-ಮನ ಅರಿಯಲಾದರೂ ಇಂತಹ ಚಿತ್ರಗಳನ್ನು ನೋಡಬೇಕೆನಿಸುತ್ತದೆ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News