×
Ad

ಇವರ ವಿರುದ್ಧವೇ ಎಫ್‌ಐರ್ ದಾಖಲಿಸಿ

Update: 2020-03-06 23:32 IST

ಮಾನ್ಯರೇ,

20 ಕಿ.ಮೀ. ದೂರದ ಹಳ್ಳಿಯಿಂದ ಪುತ್ತೂರಿನ ಕಾಲೇಜೊಂದಕ್ಕೆ ದಿನಾ ಬಸ್‌ನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಮ್ ವಿದ್ಯಾರ್ಥಿ ಜೋಡಿಯೊಂದನ್ನು ಇದೇ ಮಾರ್ಚ್ 4ರಂದು (ಅ)ನೈತಿಕ ಪೊಲೀಸರು ಸುತ್ತುವರಿದು ಬೆದರಿಸಿ ವಿಚಾರಣೆ ಮಾಡಲಾರಂಭಿಸಿದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆ ಪುತ್ತೂರಿನ ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳಿಬ್ಬರನ್ನು ಠಾಣೆಗೆ ಕರೆತಂದು, ಇಬ್ಬರ ಪೋಷಕರನ್ನೂ ಅಲ್ಲಿಗೆ ಕರೆಯಿಸಿ, ನಂತರ ಕಳುಹಿಸಿಕೊಟ್ಟ ವಿದ್ಯಮಾನ ನಡೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ. ಮೊನ್ನೆ ಫೆಬ್ರವರಿ 23ರಂದು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಇದೇ ರೀತಿಯ ಇನ್ನೊಂದು (ಅ)ನೈತಿಕ ಪೊಲೀಸ್‌ಗಿರಿ ಘಟನೆ ನಡೆದಿತ್ತು. ಒಳತಡ್ಕದಲ್ಲಿ ಸಹಪಾಠಿಯ ಸಹೋದರಿಯ ಮಗಳ ಮದುವೆಗೆ ಬಂದಿದ್ದ ಮೈಸೂರಿನ ಕಾಲೇಜೊಂದರ ಎಂಟು ಹಿಂದೂ ವಿದ್ಯಾರ್ಥಿನಿಯರು ಮತ್ತು ನಾಲ್ವರು ಮುಸ್ಲಿಮ್ ವಿದ್ಯಾರ್ಥಿಗಳು ಸಮಾರಂಭದ ಬಳಿಕ ಬಿರುಮಲೆ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ (ಅ)ನೈತಿಕ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಪ್ರಕರಣವನ್ನು ‘ಸೌಹಾರ್ದಯುತವಾಗಿ’ ಬಗೆಹರಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮೈಸೂರಿಗೆ ಕಳುಹಿಸಿಕೊಟ್ಟರು ಎನ್ನಲಾಗಿದೆ.

ಇಲ್ಲಿ ಎರಡು ವಿಷಯಗಳನ್ನು ಗಮನಿಸಬೇಕು. ಮೊದಲನೆಯದಾಗಿ, ಪೊಲೀಸರು ನಿಷ್ಪಕ್ಷಪಾತಿಗಳಾಗಿದ್ದರೆ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರಾದ ಈ (ಅ)ನೈತಿಕ ಪೊಲೀಸರನ್ನೂ ಠಾಣೆಗೆ ಕರೆದುಕೊಂಡು ಹೋಗಿ ಅವರ ಅಪ್ಪ, ಅಮ್ಮಂದಿರನ್ನೂ ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳುವ ಕೆಲಸ ಮಾಡಬೇಕಿತ್ತು. ಎರಡನೆಯದಾಗಿ, (ಅ)ನೈತಿಕ ಪೊಲೀಸರ ಕೃತ್ಯಗಳು ಸಂವಿಧಾನದ ಕಲಮು 19ರ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ತಮ್ಮನ್ನು ಕಾನೂನುಪಾಲಕರೆಂದು ಕರೆದುಕೊಳ್ಳುವ ಪೊಲೀಸರು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಪರಿಚ್ಛೇದಗಳ ಅನುಸಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಿತ್ತು. ಇಂತಹ ಪುಂಡಪೋಕರಿಗಳಲ್ಲಿ ಕಾನೂನಿನ ಭಯ ಮೂಡಿಸಲು ಇರುವ ಒಂದೇ ಉಪಾಯವೆಂದರೆ ತಕ್ಷಣ ಎಫ್‌ಐಆರ್ ದಾಖಲಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು. ಸ್ಥಳೀಯ ಪೊಲೀಸರ ಕರ್ತವ್ಯಲೋಪಗಳಿಗೆ ಜಿಲ್ಲಾ ಎಸ್‌ಪಿಯವರು ಜವಾಬ್ದಾರರಿರುವುದರಿಂದ ಮಾನ್ಯರು ಈ ಕೂಡಲೇ ಸಂಬಂಧಪಟ್ಟ ಪಕ್ಷಪಾತೀಯ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂಬುದು ಜಿಲ್ಲೆಯ ಎಲ್ಲಾ ಶಾಂತಿ, ಸೌಹಾರ್ದಪ್ರಿಯ ನಾಗರಿಕರ ಒತ್ತಾಯವಾಗಿದೆ. 

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News