ಮಧ್ಯಪ್ರದೇಶ: 16ರಂದು ಸದನದಲ್ಲಿ ವಿಶ್ವಾಸಮತ ಯಾಚನೆಗೆ ಬಿಜೆಪಿ ಆಗ್ರಹ

Update: 2020-03-12 15:41 GMT

ಭೋಪಾಲ, ಮಾ.12: ಮಧ್ಯಪ್ರದೇಶದಲ್ಲಿ 22 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಕಮಲನಾಥ್ ನೇತೃತ್ವದ ಸರಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸರಕಾರ ಅಲ್ಪಮತಕ್ಕೆ ಕುಸಿದಿರುವ ಕಾರಣ ಬಜೆಟ್ ಅಧಿವೇಶನದ ಆರಂಭದ ದಿನವಾದ ಮಾರ್ಚ್ 16ರಂದು ಸರಕಾರ ಬಹುಮತ ಸಾಬೀತುಪಡಿಸಬೇಕು ಎಂದು ಕೋರಿ ರಾಜ್ಯಪಾಲರಿಗೆ ಮತ್ತು ವಿಧಾನಸಭೆಯ ಸ್ಪೀಕರ್‌ಗೆ ಕೋರಿಕೆ ಸಲ್ಲಿಸಲಿದ್ದೇವೆ ಎಂದು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ನರೋತ್ತಮ ಮಿಶ್ರಾ ಹೇಳಿದ್ದಾರೆ. ಆದರೆ 19 ಶಾಸಕರು ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಿಲ್ಲದ ಕಾರಣ ವಿಶ್ವಾಸಮತ ಯಾಚನೆ ಅಗತ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯು ಕಾಂಗ್ರೆಸ್‌ನ ಶಾಸಕರನ್ನು ಅಪಹರಿಸಿ ಒತ್ತೆಯಾಳುಗಳಂತೆ ಇರಿಸಿಕೊಂಡಿದೆ. ಎಲ್ಲಾ ಶಾಸಕರೂ ಸ್ಪೀಕರ್ ಎದುರು ಆಗಮಿಸಿ ತಮ್ಮ ಹೇಳಿಕೆ ನೀಡಬೇಕು ಎಂದವರು ಹೇಳಿದ್ದಾರೆ. ಈ ಮಧ್ಯೆ, ರಾಜೀನಾಮೆ ನೀಡಿರುವ 22 ಶಾಸಕರೂ ಮಾರ್ಚ್ 13ರ ಒಳಗೆ ತನ್ನೆದುರು ಹಾಜರಾಗಬೇಕು ಎಂದು ವಿಧಾನಸಭೆಯ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News