ಜೋರ್ಡನ್‌ನಿಂದ ವಾಪಸಾದ ಭಾರತದ ಬಾಕ್ಸರ್ ಗಳಿಗೆ ಮನೆಯಲ್ಲೇ ಇರಲು ಸೂಚನೆ

Update: 2020-03-12 18:00 GMT

ಅಮ್ಮಾನ್(ಜೋರ್ಡನ್), ಮಾ.12: ಏಶ್ಯನ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಭಾಗವಹಿಸಲು ಜೋರ್ಡನ್‌ಗೆ ತೆರಳಿದ್ದ ಭಾರತೀಯ ಬಾಕ್ಸಿಂಗ್ ತಂಡ ಸ್ವದೇಶಕ್ಕೆ ವಾಪಸಾಗಿದ್ದು, ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಎಲ್ಲ ಬಾಕ್ಸರ್‌ಗಳಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಗುರುವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

 ಬುಧವಾರ ಅಮ್ಮಾನ್‌ನಲ್ಲಿ ಕೊನೆಗೊಂಡಿರುವ ಏಶ್ಯನ್ ಕ್ವಾಲಿಫೈಯರ್‌ನಲ್ಲಿ ಪಾಲ್ಗೊಂಡಿದ್ದ ಒಟ್ಟು 13 ಬಾಕ್ಸರ್‌ಗಳು ಹಾಗೂ ಅಷ್ಟೇ ಸಂಖ್ಯೆಯ ಕೋಚಿಂಗ್ ಸಿಬ್ಬಂದಿ ಗುರುವಾರ ಭಾರತಕ್ಕೆ ವಾಪಸಾದರು. ಜೋರ್ಡನ್‌ನಲ್ಲಿ ಎಲ್ಲ ಬಾಕ್ಸರ್‌ಗಳು, ಕೋಚಿಂಗ್ ಸಿಬ್ಬಂದಿಗಳ ಆರೋಗ್ಯ ಸಂಬಂಧಿಸಿದ ವಿಚಾರದಲ್ಲಿ ಅಗತ್ಯವಿರುವ ಅನುಮತಿ ಪಡೆದಿದ್ದರೂ ಅವರಿಗೆ ಮನೆಗೆ ತೆರಳುವಂತೆ ಸೂಚಿಸಲಾಗಿದೆ. ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ 9 ಬಾಕ್ಸರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡು ಅಭೂತಪೂರ್ವ ಪ್ರದರ್ಶನ ನೀಡಿದ್ದಾರೆ.

‘‘ಜೋರ್ಡನ್‌ಗೆ ಹೋಗಿಬಂದಿರುವ ಬಾಕ್ಸರ್‌ಗಳಿಗೆ ಕೆಲವು ದಿನಗಳ ಕಾಲ ಮನೆಗಳಲ್ಲಿ ಅಥವಾ ಹಾಸ್ಟೆಲ್‌ಗಳಲ್ಲಿ ನೆಲೆಸುವಂತೆ ತಿಳಿಸಲಾಗಿದೆ. ಜೋರ್ಡನ್ ಒಲಿಂಪಿಕ್ಸ್ ಸಂಸ್ಥೆ ಎಲ್ಲರಿಗೂ ಆರೋಗ್ಯಕ್ಕೆ ಸಂಬಂಧಿಸಿದ ಅನುಮತಿ ನೀಡಿದೆ’’ ಎಂದು ಭಾರತದ ಬಾಕ್ಸಿಂಗ್ ಒಕ್ಕೂಟದ ಕಾರ್ಯಕಾರಿ ನಿರ್ದೇಶಕ ಆರ್.ಕೆ. ಸಚೇಟಿ ತಿಳಿಸಿದ್ದಾರೆ.

ಭಾರತದ ಬಾಕ್ಸರ್‌ಗಳು ಅಸ್ಸಿಸಿಯಿಂದ ಅಮ್ಮಾನ್‌ಗೆ ಫೆಬ್ರವರಿ 27ರಂದು ತೆರಳಿದ್ದರು. ಕೊರೋನ ವೈರಸ್ ಲಕ್ಷಣ ಪತ್ತೆ ಮಾಡುವ ಕಡ್ಡಾಯ ಪರೀಕ್ಷೆಯಲ್ಲಿ ಭಾರತದ ಎಲ್ಲ ಬಾಕ್ಸರ್‌ಗಳು ಪಾಸಾಗಿದ್ದರು. ಜೋರ್ಡನ್‌ನಲ್ಲಿ ಈ ತನಕ ಕೇವಲ ಒಂದು ಕೊರೋನ ವೈರಸ್ ಸೋಂಕು ಪತ್ತೆ ಪ್ರಕರಣ ವರದಿಯಾಗಿದೆ.

‘‘ನಮ್ಮ ಎಲ್ಲ ಬಾಕ್ಸರ್‌ಗಳು ಆರೋಗ್ಯ ಪ್ರಮಾಣಪತ್ರ ಪಡೆದಿದ್ದಾರೆ. ಜೊತೆಗೆ ಸರಕಾರಿ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತಿದ್ದೇವೆ. ಎಲ್ಲ ಬಾಕ್ಸರ್‌ಗಳಿಗೆ ಕೆಲವು ಸಮಯ ಮನೆಯಲ್ಲೇ ಇರಲು ಸೂಚಿಸಲಾಗಿದೆ. ಕಳವಳಪಡುವ ಅಗತ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಅವರಿಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸೂಚಿಸಲಾಗಿದೆ. ಹೆಚ್ಚಿನ ಸೂಚನೆಗಳಿಗಾಗಿ ನಾವು ಆರೋಗ್ಯ ಸಚಿವಾಲಯದ ಸಂಪರ್ಕದಲ್ಲಿದ್ದೇವೆ’’ ಎಂದು ಸಚೇಟಿ ತಿಳಿಸಿದ್ದಾರೆ.

ಜೋರ್ಡನ್‌ನ ರಾಜಧಾನಿಯಲ್ಲಿ ನಡೆದ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಎಂ.ಸಿ. ಮೇರಿಕೋಮ್(51ಕೆಜಿ), ಸಿಮ್ರಾನ್‌ಜಿತ್ ಕೌರ್(60ಕೆಜಿ), ಲವ್ಲೀನಾ ಬೊರ್ಗೊಹೈನ್(69ಕೆಜಿ), ಪೂಜಾ ರಾಣಿ(75ಕೆಜಿ), ಅಮಿತ್ ಪಾಂಘಾಲ್(52ಕೆಜಿ), ಮನೀಷ್ ಕೌಶಿಕ್(63ಕೆಜಿ), ವಿಕಾಸ್ ಕ್ರಿಶನ್(69ಕೆಜಿ), ಆಶೀಷ್ ಕುಮಾರ್(75ಕೆಜಿ) ಹಾಗೂ ಸತೀಶ್ ಕುಮಾರ್(+91ಕೆಜಿ)ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News