ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣ: ಕುಲದೀಪ ಸೆಂಗಾರ್‌ಗೆ 10 ವರ್ಷ ಜೈಲು
ಹೊಸದಿಲ್ಲಿ, ಮಾ.13: ಉತ್ತರಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ಯುವತಿಯನ್ನು ಅತ್ಯಾಚಾರ ಗೈದಿದ್ದಲ್ಲದೆ ಆಕೆಯ ತಂದೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹಾಗೂ ಇತರ ಆರು ಮಂದಿ ಆರೋಪಿಗಳಿಗೆ ತೀಸ್ ಹಝಾರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕುಲದೀಪ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೀಸ್ ಹಝಾರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಸೆಂಗಾರ್ ಹಾಗೂ ಆತನ ಸಹೋದರ ಜೈ ದೀಪ್ ಅಲಿಯಾಸ್ ಅತುಲ್ ಸಿಂಗ್‌ಗೆ ತಲಾ 10 ಲಕ್ಷ ರೂ.ವನ್ನು ಸಂತ್ರಸ್ತ ಯುವತಿಯ ಕುಟುಂಬಕ್ಕೆ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
2018ರಲ್ಲಿ ಸಂತ್ರಸ್ತ ಯುವತಿಯ ತಂದೆಯನ್ನು ಸಾಯಿಸಿದ ಪ್ರಕರಣದಲ್ಲಿ ಸೆಂಗಾರ್, ಆತನ ಸಹೋದರ ಹಾಗೂ ಇಬ್ಬರು ಪೊಲೀಸರು ತಪ್ಪಿತಸ್ಥರು ಎಂದು ಬುಧವಾರ ನ್ಯಾಯಾಲಯ ತೀರ್ಪು ನೀಡಿತ್ತು. ಪೊಲೀಸರಾದ ಅಶೋಕ್ ಸಿಂಗ್ ಹಾಗೂ ಕೆಪಿ ಸಿಂಗ್ ವಿರುದ್ಧ ಸುಳ್ಳು ದೂರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆಕ್ಷನ್ 211 ಹಾಗೂ 218ರ ಅಡಿ ಪ್ರಕರಣ ದಾಖಲಿಸಲಾಗಿದೆ. ತನ್ನ ಮೇಲೆ ಅತ್ಯಾಚಾರಗೈದಿರುವ ಶಾಸಕನ ವಿರುದ್ಧ ಸಂತ್ರಸ್ತೆ ಹೋರಾಟ ನಡೆಸಿರುವುದನ್ನು ನ್ಯಾಯಾಧೀಶರು ಶ್ಲಾಘಿಸಿದ್ದರು. ಸಂತ್ರಸ್ತೆಯ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದಕ್ಕೆ ಹಾಗೂ ಕೇಂದ್ರೀಯ ತನಿಖಾ ತಂಡ(ಸಿಬಿಐ)ಚಾರ್ಜ್‌ಶೀಟ್ ದಾಖಲಿಸಲು ವಿಳಂಬ ಮಾಡಿರುವುದನ್ನು ನ್ಯಾಯಾಧೀಶರು ಪ್ರಶ್ನಿಸಿದ್ದರು.
ಉನ್ನಾವೊ ಜಿಲ್ಲೆಯ ಬಂಗೆರ್‌ವೌನಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಕುಲದೀಪ್‌ನನ್ನು 2019ರ ಆಗಸ್ಟ್‌ನಲ್ಲಿ ಬಿಜೆಪಿ ಪಕ್ಷದಿಂದ ಹೊರಹಾಕಿತ್ತು.