×
Ad

ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಆಘಾತ: ನಾಲ್ವರು ಶಾಸಕರು ರಾಜೀನಾಮೆ

Update: 2020-03-15 20:04 IST

ಅಹ್ಮದಾಬಾದ್, ಮಾ.15: ಮಾರ್ಚ್ 26ರಂದು ನಡೆಯಲಿರುವ ಮಹತ್ವದ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಜೈಪುರಕ್ಕೆ ಸ್ಥಳಾಂತರ ಮಾಡಿರುವಂತೆಯೇ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿ ರುವುದಾಗಿ ವರದಿಯಾಗಿದೆ.

ಶನಿವಾರ ಗುಜರಾತ್‌ನಿಂದ 14 ಕಾಂಗ್ರೆಸ್ ಶಾಸಕರ ಪ್ರಥಮ ತಂಡವನ್ನು ಜೈಪುರಕ್ಕೆ ಸ್ಥಳಾಂತರಿಸಿದ ಸಂದರ್ಭ ಈ ನಾಲ್ವರು ಶಾಸಕರು ನಾಪತ್ತೆಯಾಗಿದ್ದರು. ರವಿವಾರ ಈ ಶಾಸಕರು ಗುಜರಾತ್ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಆದರೆ ರಾಜೀನಾಮೆ ವರದಿಯನ್ನು ಗುಜರಾತ್ ಕಾಂಗ್ರೆಸ್ ಶಾಸಕ ವೀರ್‌ಜಿಭಾಯ್ ಥುಮ್ಮರ್ ನಿರಾಕರಿಸಿದ್ದಾರೆ. ಇದೆಲ್ಲಾ ಕೇವಲ ವದಂತಿ ಅಷ್ಟೇ. ಯಾರು ಕೂಡಾ ರಾಜೀನಾಮೆ ಸಲ್ಲಿಸಿಲ್ಲ. ಶಾಸಕ ಸೋಮಾಭಾಯಿ ಪಟೇಲ್ ಶನಿವಾರದವರೆಗೂ ನಮ್ಮ ಸಂಪರ್ಕದಲ್ಲಿದ್ದರು. ಆದರೆ ಇತರ ಮೂವರು ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದವರು ಹೇಳಿದ್ದಾರೆ.

182 ಸದಸ್ಯಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 103, ಕಾಂಗ್ರೆಸ್ 73, ಭಾರತೀಯ ಟ್ರೈಬಲ್ ಪಾರ್ಟಿ 2, ಎನ್‌ಸಿಪಿ 1, 1 ಪಕ್ಷೇತರ ಸದಸ್ಯರಿದ್ದಾರೆ. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನ ಗೆಲ್ಲುವಷ್ಟು ಸದಸ್ಯಬಲ ಹೊಂದಿದ್ದರೂ 3 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿದೆ. ಶಾಸಕರ ಕುದುರೆವ್ಯಾಪಾರದ ಶಂಕೆಯಲ್ಲಿ ತನ್ನ ಶಾಸಕರನ್ನು ಮಾರ್ಚ್ 26ರವರೆಗೆ ಶಾಸಕರನ್ನು ಜೈಪುರಕ್ಕೆ ಸ್ಥಳಾಂತರಿಸಲು ಕಾಂಗ್ರೆಸ್ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News