ಕೊರೋನವೈರಸ್: ಮೃತರ ಶವಗಳ ವಿಲೇವಾರಿಗೆ ಬರಲಿದೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿ

Update: 2020-03-15 14:40 GMT

ಹೊಸದಿಲ್ಲಿ,ಮಾ.15: ಕೊರೋನವೈರಸ್ ಸೋಂಕಿನಿಂದ ಮೃತಪಟ್ಟಿದ್ದ ದಿಲ್ಲಿಯ ವೃದ್ಧೆಯೋರ್ವರ ಅಂತ್ಯಸಂಸ್ಕಾರದ ಕುರಿತು ಉಂಟಾಗಿದ್ದ ವಿವಾದದ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯವು ಈ ರೋಗದಿಂದ ಮೃತಪಟ್ಟವರ ಶವಗಳ ನಿರ್ವಹಣೆಗಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.

ಶವಗಳನ್ನು ನಿರ್ವಹಿಸುವುದರಿಂದ ಕೊರೋನವೈರಸ್ ಸೋಂಕು ಹರಡುವ ಸಾಧ್ಯತೆ ಇಲ್ಲವಾದರೂ ಮೃತರಿಂದ ರೋಗ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ತಪ್ಪುಗ್ರಹಿಕೆಯನ್ನು ನಿವಾರಿಸಲು ಮತ್ತು ಜಾಗ್ರತಿಯನ್ನು ಹೆಚ್ಚಿಸಲು ಈ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

 ಕೊರೋನವೈರಸ್ ಸೋಂಕು ಉಸಿರಾಟದ ಕಾಯಿಲೆಯಾಗಿದ್ದು,ರೋಗಿಯ ಸೀನು, ಕೆಮ್ಮು ಇತ್ಯಾದಿಗಳಿಂದ ಹೊರಸೂಸುವ ಹನಿಗಳಿಂದ ಹರಡುತ್ತದೆ. ಅದು ಎಬೋಲಾ ಮತ್ತು ನಿಪಾಹ್ ಗಳಂತೆ ಶವಾಗಾರದ ಅಥವಾ ಮೃತರ ಶರೀರವನ್ನು ವಿಲೇವಾರಿ ಮಾಡುವ ಸಿಬ್ಬಂದಿಗಳಿಗೆ ಸೋಂಕನ್ನು ಹರಡುವುದಿಲ್ಲ. ಎಬೋಲಾ ಮತ್ತು ನಿಪಾಹ್ ಪ್ರಕರಣಗಳಲ್ಲಿ ಮೃತರ ಶರೀರದ ದ್ರವಗಳ ನೇರ ಸಂಪರ್ಕದಿಂದ ರೋಗ ಹರಡುವ ಅತ್ಯಂತ ಹೆಚ್ಚಿನ ಸಾಧ್ಯತೆಯಿದೆ,ಆದರೆ ಕೊರೋನವೈರಸ್ ಸೋಂಕು ಈ ರೀತಿಯಲ್ಲಿ ಹರಡುವುದಿಲ್ಲ ಎಂದು ಅವರು ವಿವರಿಸಿದರು.

ಕೊರೋನವೈರಸ್ ಸೋಂಕಿನಿಂದ ಮೃತರ ಶವದ ಅಂತ್ಯಸಂಸ್ಕಾರವನ್ನು ಅಗ್ನಿಸ್ಪರ್ಶ, ವಿದ್ಯುತ್ ಅಥವಾ ಅನಿಲ ಚಿತಾಗಾರ,ದಫನ್ ಹೀಗೆ ಯಾವುದೇ ವಿಧಾನದಲ್ಲಿ ನಡೆಸಿದರೂ ಸೋಂಕು ಹರಡುವ ಭೀತಿಯಿಲ್ಲ. ಶವವನ್ನು ಹುಗಿಯಲಾದ ಸಂದರ್ಭದಲ್ಲಿ ಸಮಾಧಿಯ ಮೇಲ್ಮೈಗೆ ಸಿಮೆಂಟ್ ಹಾಕಬೇಕಾಗುತ್ತದೆ ಎಂದು ದಿಲ್ಲಿಯ ಏಮ್ಸ್‌ನ ವಿಧಿವಿಜ್ಞಾನ ಔಷಧಿ ವಿಭಾಗದ ಮುಖ್ಯಸ್ಥ ಸುಧೀರ ಗುಪ್ತಾ ತಿಳಿಸಿದರು.

ಏಮ್ಸ್‌ನ ವಿಧಿವಿಜ್ಞಾನ ವಿಭಾಗವು ಶವಾಗಾರದ ಸಿಬ್ಬಂದಿಗಳಿಗಾಗಿ ಮಾರ್ಗಸೂಚಿಗಳನ್ನು ರೂಪಿಸಿದೆ. ದೃಢೀಕೃತ ಅಥವಾ ಶಂಕಿತ ಸೋಂಕುಗಳಿಂದ ಮೃತಪಟ್ಟವರ ಶವಗಳೊಂದಿಗೆ ಸಂಪರ್ಕಕ್ಕೆ ಬರುವ ಶವಾಗಾರ ಅಥವಾ ಶವ ವಿಲೇವಾರಿ ಸಿಬ್ಬಂದಿಗಳು ಸೋಂಕಿತ ರಕ್ತ ಅಥವಾ ರಕ್ತದ್ರಾವಣ,ಕಲುಷಿತ ವಸ್ತುಗಳು ಮತ್ತು ಕಲುಷಿತ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ರಕ್ಷಣೆಯನ್ನು ಪಡೆದುಕೊಂಡಿ ರಬೇಕು ಎಂದು ತಿಳಿಸಿರುವ ಅದು,ಮರಣೋತ್ತರ ಪರೀಕ್ಷಾ ಕೊಠಡಿಯಲ್ಲಿ ಉಪಸ್ಥಿತರ ಸಂಖ್ಯೆಯ ಮೇಲೆ ಮಿತಿ ವಿಧಿಸಬೇಕು ಎಂದಿದೆ.

ಕೊರೋನವೈರಸ್ ಸೋಂಕು ಹೆಚ್ಚಾಗಿ ಬದುಕಿರುವ ವ್ಯಕ್ತಿಯಿಂದ ಆತ ಕೆಮ್ಮಿದಾಗ ಅಥವಾ ಸೀನಿದಾಗ ಹರಡುತ್ತದೆ. ಹೀಗಾಗಿ ಸೋಂಕಿನಿಂದ ಮೃತರ ಶರೀರಗಳ ವಿಲೇವಾರಿ ಅಥವಾ ಮರಣೋತ್ತರ ಪರೀಕ್ಷೆ ಸಂದರ್ಭ ಈ ರೀತಿಯಲ್ಲಿ ಸೋಂಕು ಹರಡುವ ಕಳವಳಕ್ಕೆ ಆಸ್ಪದವಿಲ್ಲ ಎಂದು ಗುಪ್ತಾ ತಿಳಿಸಿದರು.

ಕೊರೋನಸೋಂಕಿನಿಂದ ಮೃತರ ಶವಗಳನ್ನು ಪ್ರತ್ಯೇಕ ವಾರ್ಡ್‌ನಿಂದ ಸಾಗಿಸುವಾಗ ಶರೀರ ದ್ರವಗಳ ನೇರ ಸಂಪರ್ಕದಿಂದ ಪಾರಾಗಲು ಸಿಬ್ಬಂದಿಗಳು ನಿಗದಿತ ಮಾನದಂಡ ಗಳಿಗೆ ಅನುಗುಣವಾದ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಬಳಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಕೊರೋನವೈರಸ್ ಸೋಂಕಿಗೆ ಬಲಿಯಾದ ದಿಲ್ಲಿಯ 68ರ ಹರೆಯದ ವೃದ್ಧೆಯ ಶವದ ಅಂತ್ಯಸಂಸ್ಕಾರವನ್ನು ಶನಿವಾರ ನಿಗಮಬೋಧ ಘಾಟ್‌ನಲ್ಲಿ ವೈದ್ಯಕೀಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗಿದೆ. ಶರೀರದಿಂದ ಸೋಂಕು ತಮಗೆ ಹರಡದಂತೆ ಸೂಕ್ತ ನಿರ್ದೇಶಗಳಿಗಾಗಿ ಚಿತಾಗಾರದ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಕೆಲವು ಗಂಟೆಗಳಷ್ಟು ವಿಳಂಬವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News