ಮುಂಬೈ: ಡಬ್ಬಾವಾಲಾಗಳ ಸೇವೆ ಮಾ.31ರವರೆಗೆ ಸ್ಥಗಿತ

Update: 2020-03-19 16:11 GMT

ಮುಂಬೈ, ಮಾ.19: ಕೊರೊನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಮನೆ ಮತ್ತು ಕಚೇರಿಗೆ ಆಹಾರ ತಲುಪಿಸುವ ಕಾರ್ಯ ನಿರ್ವಹಿಸುವ ಡಬ್ಬಾವಾಲಾಗಳು ಮಾರ್ಚ್ 20ರಿಂದ ಮಾರ್ಚ್ 31ರವರೆಗೆ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನ ವೈರಸ್ ಸೋಂಕಿತರ ಸಂಖ್ಯೆ 49ಕ್ಕೇರಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಮುಂಬೈಯಲ್ಲಿ ಡಬ್ಬಾವಾಲರು ಪ್ರತೀದಿನ ಸಾವಿರಾರು ಮಂದಿಗೆ ಊಟ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ, ಮನೆಯಿಂದ ಹೊರಗೆ ಬರಬೇಡಿ ಎಂದು ಜನತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ. ಕೊರೊನ ವೈರಸ್ ವಿರುದ್ಧ ಯುದ್ಧ ನಡೆಸುತ್ತಿದ್ದೇವೆ. ಮುಂಜಾಗರೂಕತಾ ಕ್ರಮವಾಗಿ ಅನಗತ್ಯ ಪ್ರಯಾಣವನ್ನು ರದ್ದುಗೊಳಿಸಿ. ಪರಿಸ್ಥಿತಿ ಗಂಭೀರವಾಗಿಲ್ಲ, ಆದರೆ ಆತಂಕಕಾರಿಯಾಗಿದೆ.

ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ಪ್ರಧಾನಿಗೆ ವಿವರಿಸಿದ್ದು ಕೇಂದ್ರ ಸರಕಾರದ ಸಂಪೂರ್ಣ ನೆರವಿನ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.

ಗುರುವಾರ ಬೆಳಗ್ಗಿನವರೆಗೆ 12,426 ವ್ಯಕ್ತಿಗಳ ಸ್ಯಾಂಪಲ್ ಅನ್ನು ಪರೀಕ್ಷೆ ನಡೆಸಿದ್ದು 168 ಮಂದಿಗೆ ಕೊರೊನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News